ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔಷಧಿ ಖರೀದಿ: ಕಪ್ಪುಪಟ್ಟಿಯಲ್ಲಿದ್ದರೂ ಗುತ್ತಿಗೆ

ಔಷಧಿ ಖರೀದಿ: ತಡೆಹಿಡಿದಿದ್ದ ಟೆಂಡರ್‌ ಡಿಸೆಂಬರ್‌ನಲ್ಲಿ ಅಂತಿಮ
Last Updated 24 ಜನವರಿ 2023, 22:23 IST
ಅಕ್ಷರ ಗಾತ್ರ

ಬೆಂಗಳೂರು: ಆರು ತಿಂಗಳ ಹಿಂದೆ ತಡೆಹಿಡಿದಿದ್ದ ಟೆಂಡರ್‌ ಪ್ರಕ್ರಿಯೆಯೊಂದನ್ನು ಡಿಸೆಂಬರ್‌ನಲ್ಲಿ ಅಂತಿಮಗೊಳಿಸಿರುವ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ (ಕೆಎಸ್‌ಎಂಎಸ್‌ಸಿಎಲ್‌), ಕಳಪೆ ಗುಣಮಟ್ಟ ಹಾಗೂ ಟೆಂಡರ್‌ ಷರತ್ತಿನಂತೆ ಔಷಧ ಪೂರೈಸದ ಕಾರಣಕ್ಕಾಗಿ ವಿವಿಧ ರಾಜ್ಯಗಳಲ್ಲಿ ಕಪ್ಪುಪಟ್ಟಿಯಲ್ಲಿರುವ ಕಂಪನಿಯೊಂದರಿಂದ ₹ 25 ಕೋಟಿ ಮೌಲ್ಯದ ಔಷಧಿ ಖರೀದಿಗೆ ಕಾರ್ಯಾದೇಶ ನೀಡಿದೆ.

ರಾಜ್ಯದ ಸರ್ಕಾರಿ ಆಸ್ಪತ್ರೆಗಳು, ಚಿಕಿತ್ಸಾಲಯಗಳಿಗೆ ಪೂರೈಸಲು ₹ 45 ಕೋಟಿ ಮೌಲ್ಯದ ಔಷಧಿ ಹಾಗೂ ವೈದ್ಯಕೀಯ ಉಪಕರಣಗಳ ಖರೀದಿಗೆ 2022ರಲ್ಲಿ ನಿಗಮವು ಟೆಂಡರ್‌ ಪ್ರಕ್ರಿಯೆ ಆರಂಭಿಸಿತ್ತು. ಆದರೆ, ವಿವಿಧ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರದ ಸಂಸ್ಥೆಗಳು ಕಪ್ಪುಪಟ್ಟಿಗೆ ಸೇರಿಸಿರುವ ಕಂಪನಿಗಳಿಗೆ ಟೆಂಡರ್‌ ಪ್ರಕ್ರಿಯೆಯಲ್ಲಿ ಮನ್ನಣೆ ನೀಡುತ್ತಿರುವ ಕುರಿತು ಮುಖ್ಯಮಂತ್ರಿಯವರಿಗೆ ದೂರು ಸಲ್ಲಿಕೆಯಾಗಿತ್ತು. ಈ ಕಾರಣದಿಂದ ಜೂನ್‌ ತಿಂಗಳಲ್ಲಿ ಟೆಂಡರ್‌ ಪ್ರಕ್ರಿಯೆಯನ್ನೇ ತಡೆಹಿಡಿಯಲಾಗಿತ್ತು.

ತಡೆ ಹಿಡಿದ ಟೆಂಡರ್‌ ಪ್ರಕ್ರಿಯೆಗೆ ನವೆಂಬರ್‌ ಕೊನೆಯ ವಾರ ಮರುಜೀವ ನೀಡಿದ್ದ ಕೆಎಸ್‌ಎಂಎಸ್‌ಸಿಎಲ್‌, ಡಿಸೆಂಬರ್‌ ಮೊದಲ ವಾರ ಕಾರ್ಯಾದೇಶ ವಿತರಿಸಿದೆ. ಛತ್ತೀಸಗಢ, ರಾಜಸ್ಥಾನ, ಮಧ್ಯಪ್ರದೇಶ, ಕೇರಳ, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಪ್ಪುಪಟ್ಟಿ ಸೇರಿದ್ದ ಯುನಿಕ್ಯೂರ್‌ ಇಂಡಿಯಾ ಲಿಮಿಟೆಡ್‌ ಎಂಬ ಕಂಪನಿಗೆ ₹ 25.15 ಕೋಟಿ ಮೌಲ್ಯದ 30 ಔಷಧಿಗಳ ಪೂರೈಕೆಗೆ 2022ರ ಡಿಸೆಂಬರ್‌ 6ರಂದು ಕಾರ್ಯಾದೇಶ ನೀಡಲಾಗಿದೆ.

ಇದೇ ಕಂಪನಿಯನ್ನು ಕಾರ್ಮಿಕರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ) ಕೂಡ ಅಕ್ಟೋಬರ್‌ 25ರಂದು ಎರಡು ವರ್ಷಗಳ ಅವಧಿಗೆ ಕಪ್ಪುಪಟ್ಟಿಗೆ ಸೇರಿಸಿತ್ತು. ದೆಹಲಿ ಹೈಕೋರ್ಟ್‌ನ ಮಧ್ಯಂತರ ಆದೇಶದ ಆಧಾರದಲ್ಲಿ ತಾತ್ಕಾಲಿಕವಾಗಿ ತಡೆಹಿಡಿದಿದೆ. ರಾಜಸ್ಥಾನದಲ್ಲಿ ಈ ವರ್ಷದ ಸೆಪ್ಟೆಂಬರ್‌ವರೆಗೆ ಮತ್ತು ಕೇರಳದಲ್ಲಿ ಈ ವರ್ಷದ ಏಪ್ರಿಲ್‌ವರೆಗೂ ಇದೇ ಕಂಪನಿಯನ್ನು ಕಪ್ಪುಪಟ್ಟಿಯಲ್ಲಿಡಲಾಗಿದೆ.

‘ಯಾವುದೇ ಕಂಪನಿ ಕಪ್ಪುಪಟ್ಟಿಗೆ ಸೇರಿಸಿರುವುದನ್ನು ಪ್ರಶ್ನಿಸಿರುವ ಅರ್ಜಿಗಳು ನ್ಯಾಯಾಲಯಗಳಲ್ಲಿ ಬಾಕಿ ಇದ್ದರೂ ಅಂತಹ ಸಂಸ್ಥೆಯನ್ನು ಟೆಂಡರ್‌ ಪ್ರಕ್ರಿಯೆಯಲ್ಲಿ ಪರಿಗಣಿಸುವುದಿಲ್ಲ’ ಎಂದು ಕೆಎಸ್‌ಎಂಎಸ್‌ಸಿಎಲ್‌ ಟೆಂಡರ್‌ ಷರತ್ತಿನಲ್ಲಿ ಪ್ರಕಟಿಸಿತ್ತು. ಛತ್ತೀಸಗಢ ರಾಜ್ಯ ಸರ್ಕಾರ, ಇಎಸ್‌ಐಸಿ ಸೇರಿದಂತೆ ಕೆಲವು ಪ್ರಕರಣಗಳಲ್ಲಿ ಕಪ್ಪುಪಟ್ಟಿಗೆ ಸೇರಿಸಿರುವುದನ್ನು ಪ್ರಶ್ನಿಸಿ ಯುನಿಕ್ಯೂರ್‌ ಸಲ್ಲಿಸಿರುವ ಅರ್ಜಿಗಳು ಹೈಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇವೆ. ಕೆಲವೆಡೆ ಮಧ್ಯಂತರ ತಡೆಯಾಜ್ಞೆ ಮಾತ್ರ ದೊರಕಿದೆ.

ಕಪ್ಪುಪಟ್ಟಿ ಸೇರಿಸುವ ಆದೇಶಗಳಿಗೆ ಕೆಲವೆಡೆ ನ್ಯಾಯಾಲಯಗಳಿಂದ ತಡೆಯಾಜ್ಞೆ ದೊರಕಿರುವುದನ್ನು ಆಧರಿಸಿ ಔಷಧಿ ಖರೀದಿಗೆ ಕಾರ್ಯಾದೇಶ ನೀಡುವಂತೆ ಕಂಪನಿ ನ.25ರಂದು ನಿಗಮಕ್ಕೆ ಮನವಿ ಸಲ್ಲಿಸಿತ್ತು. ಅದನ್ನು ಆಧರಿಸಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ, ಕಾರ್ಯಾದೇಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ತಡೆಯಾಜ್ಞೆ ಆಧಾರದಲ್ಲಿ ತೀರ್ಮಾನ’

‘ಯುನಿಕ್ಯೂರ್‌ ಇಂಡಿಯಾ ಲಿಮಿಟೆಡ್‌ ಕಂಪನಿಯನ್ನು ಹಲವು ರಾಜ್ಯಗಳಲ್ಲಿ ಕಪ್ಪುಪಟ್ಟಿಗೆ ಸೇರಿಸಿರುವುದು ನಿಜ. ಆದರೆ, ಕೆಲವು ರಾಜ್ಯಗಳ ತೀರ್ಮಾನಕ್ಕೆ ಹೈಕೋರ್ಟ್‌ಗಳಿಂದ ತಡೆಯಾಜ್ಞೆ ದೊರಕಿದೆ. ಬಳಿಕ ಅದೇ ರಾಜ್ಯ ಸರ್ಕಾರಗಳು ಈ ಕಂಪನಿಯಿಂದ ಔಷಧಿ ಖರೀದಿಸುತ್ತಿವೆ. ಈ ಎಲ್ಲ ಅಂಶಗಳನ್ನೂ ಪರಿಶೀಲಿಸಿ ಔಷಧಿ ಖರೀದಿಗೆ ಕಾರ್ಯಾದೇಶ ನೀಡಲಾಗಿದೆ’ ಎಂದು ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ಔಷಧಿ ಖರೀದಿ ವಿಭಾಗದ ನಿರ್ದೇಶಕ ಡಾ. ರಘುನಂದನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT