ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಪರಿಷತ್‌ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್‌ನ ಮಧು ಮುನ್ನಡೆ

Last Updated 15 ಜೂನ್ 2022, 20:07 IST
ಅಕ್ಷರ ಗಾತ್ರ

ಮೈಸೂರು: ವಿಧಾನ ಪರಿಷತ್‌ನ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ, ಪ್ರಥಮ ಪ್ರಾಶಸ್ತ್ಯದ ಮತ ಗಳಿಕೆಯಲ್ಲಿ ಕಾಂಗ್ರೆಸ್‌ನ ಮಧು ಮಾದೇಗೌಡ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿಯ ಮೈ.ವಿ. ರವಿಶಂಕರ್ 2ನೇ ಸ್ಥಾನದಲ್ಲಿದ್ದರೆ, ಹಾಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಜೆಡಿಎಸ್‌ 3ನೇ ಸ್ಥಾನಕ್ಕೆ ಕುಸಿದಿದೆ.

ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿ ಬುಧವಾರ ಮಧ್ಯರಾತ್ರಿ ದಾಟಿದರೂ ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆ ಕಾರ್ಯ ಪೂರ್ಣಗೊಳ್ಳಲಿಲ್ಲ. ಫಲಿತಾಂಶದ ಸಂಪೂರ್ಣ ಚಿತ್ರಣವು ಗುರುವಾರ ದೊರೆಯಲಿದೆ.

ಮತ ಎಣಿಕೆಯ ಆರಂಭದಿಂದಲೂ ಕಾಂಗ್ರೆಸ್ ಮುಂದಿತ್ತು. ಮೊದಲ ಸುತ್ತಿನಲ್ಲಿ 49,700 ಮತಗಳ ಎಣಿಕೆ ನಡೆಯಿತು. ಅದರಲ್ಲಿ ಕಾಂಗ್ರೆಸ್‌ನ ಮಧು ಜಿ.ಮಾದೇಗೌಡ 16,137, ಬಿಜೆಪಿಯ ಮೈ.ವಿ.ರವಿಶಂಕರ್ 13,479, ಜೆಡಿಎಸ್‌ನ ಎಚ್‌.ಕೆ.ರಾಮು 8,512, ಪಕ್ಷೇತರ ಸದಸ್ಯ ಪ್ರಸನ್ನ ಎನ್.ಗೌಡ 3,142, ವಿನಯ್ 1,892 ಮತಗಳನ್ನು ಪಡೆದರು. ಕಾಂಗ್ರೆಸ್ 2,658 ಮತಗಳಿಂದ ಮುಂದಿತ್ತು. 2ನೇ ಹಂತ ಪೂರ್ಣಗೊಳ್ಳುವ ವೇಳೆಗೆ ಕಾಂಗ್ರೆಸ್‌ 5,905 ಮತಗಳ ಮುನ್ನಡೆ ಕಾಯ್ದುಕೊಂಡಿದೆ.

ಬರೋಬ್ಬರಿ 7,307 ಮತಗಳು ತಿರಸ್ಕೃತಗೊಂಡವು!.: ‘ಸೋಮವಾರ 150 ಮತಗಟ್ಟೆ ಗಳಲ್ಲಿ ನಡೆದ ಚುನಾ ವಣೆಯಲ್ಲಿ 1,41, 963 ಮತದಾರರ ಪೈಕಿ 99,304 ಮತದಾರರು ಹಕ್ಕು ಚಲಾಯಿಸಿದ್ದರು. ಶೇ 69.95ರಷ್ಟು ಮತದಾನವಾಗಿತ್ತು. ಹಿಂದಿನ ಚುನಾ ವಣೆಗಿಂತ ಶೇ 29ರಷ್ಟು ಹೆಚ್ಚಿನ ಮತದಾನವಾಗಿತ್ತು. ಹೀಗಾಗಿ, ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಳಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸುಳಿಯದ ಕಾರ್ಯಕರ್ತರು: ಸಾರ್ವತ್ರಿಕ ಚುನಾವಣೆಯಂತೆ ಪಕ್ಷಗಳ ಹೆಚ್ಚಿನ ಕಾರ್ಯಕರ್ತರು ಹಾಗೂ ಬೆಂಬಲಿಗರು ಮತ ಎಣಿಕೆ ಕೇಂದ್ರದತ್ತ ಬರಲಿಲ್ಲ. ಸಂಜೆವರೆಗೆ ಕೆಲವರಷ್ಟೇ ಬಂದರು. ಕೆಲವರು ಮಧ್ಯರಾತ್ರಿಯಾದರೂ ಇದ್ದರು. ಅವರಲ್ಲಿ ಕಾಂಗ್ರೆಸ್‌ ಬೆಂಬಲಿಗರು ಜಾಸ್ತಿ ಇದ್ದರು. ಎಣಿಕೆ ಕೇಂದ್ರಕ್ಕೆ ಚುನಾವಣಾ ಏಜೆಂಟರಿಗಷ್ಟೇ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್, ಜೆಡಿಎಸ್ ಅಭ್ಯರ್ಥಿ ಎಚ್.ಕೆ.ರಾಮು, ಕಾಂಗ್ರೆಸ್‌ ಅಭ್ಯರ್ಥಿ ಮಧು ಮಾದೇಗೌಡ ಭೇಟಿ ನೀಡಿದ್ದರು. ರೈತ–ದಲಿತ ಚಳವಳಿಗಳ ಬೆಂಬಲಿತ ಅಭ್ಯರ್ಥಿ ಪ್ರಸನ್ನ ಎನ್.ಗೌಡ, ಪಕ್ಷೇತರ ಅಭ್ಯರ್ಥಿ ವಿನಯ್ ಕೇಂದ್ರದಲ್ಲಿಯೇ ಇದ್ದು, ಎಣಿಕೆ ಪ್ರಕ್ರಿಯೆ ವೀಕ್ಷಿಸಿದರು. ಏಜೆಂಟರಿಂದ ‘ಟ್ರೆಂಡ್‌’ನ ಮಾಹಿತಿ ಪಡೆಯುತ್ತಿದ್ದರು.

ನಾಲ್ಕು ಕೊಠಡಿಗಳಲ್ಲಿ ಒಟ್ಟು 28 ಟೇಬಲ್‌ಗಳಲ್ಲಿ ಎಣಿಕೆ ಪ್ರಕ್ರಿಯೆ ನಡೆದಿದ್ದು, 90 ಸಿಬ್ಬಂದಿ ನಿಯೋಜಿಸಲಾಗಿತ್ತು. ಮೇಲ್ವಿಚಾರಕರಾಗಿ 28 ಮಂದಿ ಕಾರ್ಯ ನಿರ್ವಹಿಸಿದರು. ಭದ್ರತೆಗಾಗಿ 158 ಪೊಲೀಸ್ ‌ಸಿಬ್ಬಂದಿ ನಿಯೋಜಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಅಭ್ಯರ್ಥಿಗಳು, ಅಧಿಕಾರಿಗಳ ಸಮ್ಮುಖದಲ್ಲಿ: ಎಣಿಕೆಗೆ ಸಂಬಂಧಿ ಸಿದ ಪ್ರಕ್ರಿಯೆಯು ಬೆಳಿಗ್ಗೆ 8ಕ್ಕೆ ಆರಂಭ ಗೊಂಡಿತು. ಜೆಡಿಎಸ್‌ ಅಭ್ಯರ್ಥಿ ಎಚ್.ಕೆ.ರಾಮು, ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಡಾ.ಬಿ.ಎಚ್.ಚನ್ನಕೇಶವ ಮೂರ್ತಿ, ಪಕ್ಷೇತರ ಅಭ್ಯರ್ಥಿ ಎನ್.ಎಸ್.ವಿನಯ್ ಮೊದಲಾದ ಅಭ್ಯರ್ಥಿಗಳು, ಅವರ ಏಜೆಂಟರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂನ ಬಾಗಿಲು ತೆರೆಯಲಾಯಿತು.

ಬಳಿಕ ನಾಲ್ಕು ಕೊಠಡಿಗಳಲ್ಲಿ ತಲಾ 7 ಟೇಬಲ್‌ಗಳಲ್ಲಿ ಅಂದರೆ 28 ಟೇಬಲ್‌ಗಳಲ್ಲಿ ಮತಪೆಟ್ಟಿಗೆ ಗಳನ್ನು ತೆರೆದು ಮತಪತ್ರಗಳನ್ನು ಬಂಡಲ್‌ ಗಳನ್ನಾಗಿ ಕಟ್ಟಿ ಜೋಡಿಸಲಾಯಿತು. ಬಳಿಕ ಅವುಗಳಲ್ಲಿರುವ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪರಿಗಣಿಸಿ, ಅದನ್ನು ಪಡೆದ ಆಯಾ ಅಭ್ಯರ್ಥಿಗೆ ನಿಗದಿಪಡಿಸಿದ್ದ ಟ್ರೇಗಳಿಗೆ ಹಾಕಲಾ ಯಿತು. ಇದೇ ವೇಳೆ, ತಿರಸ್ಕೃತ ಹಾಗೂ ಅನುಮಾನಾಸ್ಪದ ಮತಗಳನ್ನು ಕೂಡ ಪ್ರತ್ಯೇಕವಾಗಿ ಜೋಡಿಸಲಾಯಿತು. ಈ ಪ್ರಕ್ರಿಯೆ ಮುಗಿದ ಬಳಿಕ ಎಣಿಕೆ ಕಾರ್ಯವನ್ನು ಸಿಬ್ಬಂದಿ ನಡೆಸಿದರು. ಮೊದಲ ಸುತ್ತಿನ ಮತ ಎಣಿಕೆ ಪ್ರಕ್ರಿಯೆಯು ಸಂಜೆವರೆಗೂ ನಡೆಯಿತು.

ಪಕ್ಷೇತರರಲ್ಲಿ ರೈತ-ದಲಿತ ಚಳವಳಿಗಳ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಪ್ರಸನ್ನ ಎನ್. ಗೌಡ, ವಿನಯ್ ಅವರಿಗೂ ಪ್ರಥಮ ಪ್ರಾಶಸ್ತ್ಯದ ಮತಗಳು ಸಿಕ್ಕಿವೆ. ಕಾಂಗ್ರೆಸ್‌ಗೆ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡಿದವರು ಬಿಜೆಪಿಗೆ 2ನೇ ಪ್ರಾಶಸ್ತ್ಯದ ಮತಗಳನ್ನು ಕೊಟ್ಟಿರುವುದು ಕಂಡುಬಂದಿದೆ. ಬಿಜೆಪಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿದವರಲ್ಲಿ ಹೆಚ್ಚಿನವರು 2ನೇ ಪ್ರಾಶಸ್ತ್ಯದ ಮತಗಳನ್ನು ಕಾಂಗ್ರೆಸ್‌ಗೆ ನೀಡಿದ್ದಾರೆ.

ಕಾಂಗ್ರೆಸ್ಸಿಗರು ಮಧ್ಯರಾತ್ರಿಯೇ ವಿಜಯೋತ್ಸವ ಆಚರಿಸಿದರು.

ದಕ್ಷಿಣ ಪದವೀಧರರ ಕ್ಷೇತ್ರ: ಮೊದಲ ಪ್ರಾಶಸ್ತ್ಯದ ಮತ ಎಣಿಕೆ ಮುಕ್ತಾಯದ ನಂತರದ ಚಿತ್ರಣ

5,905 ಮತಗಳಿಂದ ಕಾಂಗ್ರೆಸ್ ಮುನ್ನಡೆ

(ಅಭ್ಯರ್ಥಿ;ಪಕ್ಷ;ಪಡೆದ ಮತ)

ಮಧು ಜಿ. ಮಾದೇಗೌಡ;ಕಾಂಗ್ರೆಸ್;32,592

ಮೈ.ವಿ. ರವಿಶಂಕರ್;ಬಿಜೆಪಿ;26,687

ಎಚ್.ಕೆ. ರಾಮು;ಜೆಡಿಎಸ್;17,072

ಪ್ರಸನ್ನ ಎನ್. ಗೌಡ;ಪಕ್ಷೇತರ;6,609

‌ವಿನಯ್;ಪಕ್ಷೇತರ;3,472

ತಿರಸ್ಕೃತ ಮತಗಳು;7,307

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT