ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲೆಯಾದ ಮುಸ್ಲಿಂ ಯುವಕನಿಗೆ ಪರಿಹಾರ ಏಕಿಲ್ಲ: ಕುಮಾರಸ್ವಾಮಿ ಪ್ರಶ್ನೆ

Last Updated 30 ಜುಲೈ 2022, 10:30 IST
ಅಕ್ಷರ ಗಾತ್ರ

ಕಲಬುರಗಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಕೊಲೆಯಾದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ₹ 50 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ, ಅದೇ ಜಿಲ್ಲೆಯಲ್ಲಿ ಕೊಲೆಯಾದ ಮುಸ್ಲಿಂ ಯುವಕನಿಗೆ ಪರಿಹಾರ ಏಕೆ ಘೋಷಣೆ ಮಾಡಿಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ಕಲಬುರಗಿ ದಕ್ಷಿಣ ಮತಕ್ಷೇತ್ರದ ಜೆಡಿಎಸ್‌ ಸಮಾವೇಶಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಜಾತಿ, ಧರ್ಮ ನೋಡಿ ಪರಿಹಾರ ಕೊಡುತ್ತಿರುವುದು ಅನಾಗರಿಕ ಸರ್ಕಾರದ ಲಕ್ಷಣ’ ಎಂದು ಜರಿದರು.

‘ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಪ್ರವೀಣ್ ಹತ್ಯೆ ಖಂಡಿಸಿ ರಾಜೀನಾಮೆ ನೀಡಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಬಗ್ಗೆ ದುರಹಂಕಾರದಿಂದ ಮಾತನಾಡಿದ್ದಾರೆ. ನೀವಿಲ್ಲದಿದ್ದರೂ ಪಕ್ಷಕ್ಕೆ ಏನೂ ಆಗುವುದಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ. ನಿಮ್ಮ ರಾಜೀನಾಮೆಯನ್ನು ತಕ್ಷಣವೇ ಅಂಗೀಕರಿಸಿಕೊಳ್ಳುತ್ತೇವೆ. ಪಕ್ಷ ಸೇರುವವರು ತುದಿಗಾಲಲ್ಲಿ ಇದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ, ಬಿಜೆಪಿಯಲ್ಲಿ ಕೆಲಸ ಮಾಡಲು ತಮ್ಮ ಮಕ್ಕಳನ್ನು ಬಿಟ್ಟಿರುವ ತಾಯಂದಿರು ಬಿಜೆ‍ಪಿಯ ಈ ಅವಕಾಶವಾದಿತನದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆ ಪಕ್ಷದ ಮುಖಂಡರು ಯುವಕರ ಶ್ರಮ, ಬಲಿದಾನ ಯಾವುದೂ ಮುಖ್ಯವಲ್ಲ’ ಎಂದು ಟೀಕಿಸಿದರು.

‘ಜೆಡಿಎಸ್‌ಗೆ ಮುಂಬರುವ ಚುನಾವಣೆಯಲ್ಲಿ ಐದು ವರ್ಷ ಪೂರ್ಣಾವಧಿ ಅಧಿಕಾರ ನೀಡಿದರೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸುವಂತೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ರೈತರ ₹ 25 ಸಾವಿರ ಕೋಟಿ ಸಾಲವನ್ನು ಮುಖ್ಯಮಂತ್ರಿಯಾಗಿದ್ದಾಗ ಮನ್ನಾ ಮಾಡಿದ್ದೆ. ಸಾಲ ಮನ್ನಾವೊಂದೇ ರೈತರ ಸಮಸ್ಯೆಗೆ ಪರಿಹಾರವಲ್ಲ ಎಂಬುದು ಗೊತ್ತಿದೆ. ಅದಕ್ಕಾಗಿ, ಸಮಗ್ರ ನೀರಾವರಿ ಯೋಜನೆಯನ್ನು ಸುಮಾರು ನಾಲ್ಕೈದು ಲಕ್ಷ ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು. ಇದೊಂದು ಬಾರಿ ಜೆಡಿಎಸ್‌ಗೆ ಅವಕಾಶ ಕೊಡಿ. ಭರವಸೆ ಈಡೇರಿಸದಿದ್ದರೆ ನಾನು ಪಕ್ಷವನ್ನು ವಿಸರ್ಜಿಸಿ, ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇನ್ನೆಂದೂ ನಿಮಗೆ ಮುಖ ತೋರಿಸುವುದಿಲ್ಲ’ ಎಂದರು.

ಶಾಸಕ ಬಂಡೆಪ್ಪ ಕಾಶೆಂಪೂರ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ನಬಿಸಾಬ್, ಮುಖಂಡರಾದ ಕೃಷ್ಣಾರೆಡ್ಡಿ, ನಾಸಿರ್ ಹುಸೇನ್ ಉಸ್ತಾದ್, ಬಾಲರಾಜ ಗುತ್ತೇದಾರ, ಶಿವಕುಮಾರ ನಾಟೀಕಾರ, ಮಹೇಶ್ವರಿ ವಾಲಿ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT