ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪುಕೋಟೆ ಮೇಲೆ ಖಾಲಿಸ್ತಾನ್‌ ಧ್ವಜ: ರಾಜ್ಯ ನಾಯಕರ ಪ್ರತಿಕ್ರಿಯೆ ಹೀಗಿತ್ತು...

Last Updated 27 ಜನವರಿ 2021, 2:33 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶ ವಿರೋಧಿ ಶಕ್ತಿಗಳು ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೇಲೆ ಖಾಲಿಸ್ತಾನ್ ಧ್ವಜ ಹಾರಿಸಿದ್ದು, ಇದು ಅಕ್ಷಮ್ಯ ಅಪರಾಧ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ‘ಜ.26 ದೇಶವಾಸಿಗಳಿಗೆ ಪವಿತ್ರವಾದ ದಿನ. ಸಂವಿಧಾನವನ್ನು ಗೌರವಿಸಿ, ಬದ್ಧತೆ ಪ್ರದರ್ಶಿಸಬೇಕಾದ ದಿನದಂದೇ ಪ್ರಜಾಪ್ರಭುತ್ವ ಧಿಕ್ಕರಿಸಿ, ಗೂಂಡಾಗಿರಿ ನಡೆಸಿ, ದೇಶಕ್ಕೆ ಕಪ್ಪು ಮಸಿ ಬಳಿಯುವ ಕೆಲಸ ಮಾಡಲಾಗಿದೆ’ ಎಂದಿದ್ದಾರೆ.

ಸರ್ಕಾರದ ಅಂತ್ಯ ಸನ್ನಿಹಿತ: ಡಿಕೆಶಿ
ಗೌರಿಗದ್ದೆ (ಚಿಕ್ಕಮಗಳೂರು):
‘ಇದು ರೈತ ವಿರೋಧಿ ಸರ್ಕಾರ ಎಂಬುದಕ್ಕೆ ಗಣರಾಜ್ಯೋತ್ಸವದ ದಿನ ಪ್ರತಿಭಟನೆ ನಡೆಯುತ್ತಿರುವುದೇ ಸಾಕ್ಷಿ. ಈ ಸರ್ಕಾರಕ್ಕೆ ಅಂತ್ಯ ಸಮೀಪಿಸುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರೈತರ ಹೋರಾಟ ಮಾಡಲು ದೆಹಲಿಯಲ್ಲೇ ಬಿಟ್ಟಿದ್ದಾರೆ. ಬೆಂಗಳೂರಿನ ಒಳಕ್ಕೆ ರೈತರು ಬರಲು ಏಕೆ ಬಿಡುತ್ತಿಲ್ಲ? ರೈತರು ಇಲ್ಲದಿದ್ದರೆ ಬೆಂಗಳೂರಿನಲ್ಲಿ ಇವರು ಊಟ ಮಾಡಲಿಕ್ಕೆ ಸಾಧ್ಯ ಇದೆಯಾ’ ಎಂದು ಪ್ರಶ್ನಿಸಿದರು.

‘ಸಾಹುಕಾರರ ದೊಡ್ಡ ಕಾರುಗಳಷ್ಟೇ ಬೆಂಗಳೂರಿನಲ್ಲಿ ಓಡಾಡಬೇಕಾ? ರೈತರು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲಿ. ರೈತರ ಟ್ರ್ಯಾಕ್ಟರ್‌ಗಳು ಓಡಾಡಿದರೆ ತಪ್ಪೇನಿದೆ? ಕೆಂಪೇಗೌಡ ಅವರು ಕಟ್ಟಿದ ಬೆಂಗಳೂರು ರಾಜ್ಯದ ಜನರ ಆಸ್ತಿ, ಸರ್ಕಾರ ನಡೆಸುವವರ ಆಸ್ತಿ ಅಲ್ಲ. ರೈತರನ್ನು ಬೆಂಗಳೂರಿಗೆ ಬಿಡದೆ ತಡೆದಿರುವುದು ಖಂಡನೀಯ. ಅದರ ಕೋಪ, ತಾಪ, ಶಾಪ ಎಲ್ಲವೂ ಈ ಸರ್ಕಾರಕ್ಕೆ ತಗುಲುತ್ತದೆ’ ಎಂದರು.

‘ಭಯೋತ್ಪಾದಕರ ಹೋರಾಟ’
ಕೊಪ್ಪಳ:
‘ದೆಹಲಿಯ ಹೋರಾಟದಲ್ಲಿ ಖಾಲಿಸ್ತಾನಿಗಳು, ಭಯೋತ್ಪಾದಕರು ಸೇರಿಕೊಂಡಿದ್ದಾರೆ. ಭಯೋತ್ಪಾದಕರ ಈ ಹೋರಾಟಕ್ಕೆ ಕಾಂಗ್ರೆಸ್ ಕುಮ್ಮಕ್ಕು ನೀಡಿದೆ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಧಾನಿ ಮೋದಿ ಅವರ ಜನಪ್ರಿಯತೆ ಸಹಿಸದೇ ಇವರೆಲ್ಲ ಭಯೋತ್ಪಾದನಾ ಕೃತ್ಯ ನಡೆಸಿದ್ದಾರೆ. ಕೆಂಪುಕೋಟೆಗೆ ತನ್ನದೇ ಆದ ಘನತೆ ಇದೆ. ರೈತ ಧ್ವಜಾರೋಹಣ ಮಾಡಲು ವಿರೋಧವಿಲ್ಲ. ಆತ ಪ್ರಧಾನಿಯಾಗಿ ಧ್ವಜಾರೋಹಣ ಮಾಡಲಿ. ಮುಂದೊಂದು ದಿನ ರೈತರ ಹೆಸರಿನಲ್ಲಿ ಕೆಲವರು ಪಾಕಿಸ್ತಾನ, ಚೀನಾ ಗಡಿಯಲ್ಲಿನ ನಮ್ಮ ಸೈನಿಕರ ಮೇಲೆ ಗುಂಡು ಹಾರಿಸಿದರೆ ಅದಕ್ಕೆ ಯಾರು ಹೊಣೆ’ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ಕಾಯ್ದೆಗಳ ಫಲ ಕಾದು ನೋಡಲಿ’
ಚಿಕ್ಕಮಗಳೂರು:
‘ಕೃಷಿ ಕಾಯ್ದೆಗಳ ಫಲ ಏನು ಎಂಬುದನ್ನು ಕಾದು ನೋಡಬೇಕು. ರೈತರಿಗೆ ವಿರುದ್ಧ ಇದ್ದರೆ ತಿದ್ದುಪಡಿ ಮಾಡಲು, ಹಿಂಪಡೆಯಲು ಅವಕಾಶ ಇದೆ. ಈ ಕಾಯ್ದೆಗಳು ರೈತ ವಿರೋಧಿ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಬೂಟಾಟಿಕೆ ಪ್ರದರ್ಶಿಸುತ್ತಿದೆ. ಕಾಂಗ್ರೆಸ್‌ 2019ರ ಪ್ರಣಾಳಿಕೆಯಲ್ಲಿ ಏನು ಹೇಳಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. 2014ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಪಿಎಂಸಿ ಬಗ್ಗೆ ಬರೆದ ಪತ್ರ ಅವರ ಬಣ್ಣವನ್ನು ಬಯಲು ಮಾಡಿದೆ. ಬಿಜೆಪಿ ರೈತ ವಿರೋಧಿ ಎಂಬ ಅಭಿಪ್ರಾಯ ರೂಪಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ’ ಎಂದು ದೂಷಿಸಿದರು.

‘ನಕಲಿ ರೈತರಿಂದ ಹಿಂಸಾಚಾರ’
ಬೆಂಗಳೂರು:
‘ರೈತರ ಮುಖವಾಡ ಧರಿಸಿದ ವ್ಯಕ್ತಿಗಳು ದೆಹಲಿಯಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ಹಿಂಸಾಚಾರ ನಡೆಸಿದ್ದಾರೆ. ಕಾಂಗ್ರೆಸ್‌ ಪಕ್ಷ ಮತ್ತು ಸಮಾಜಘಾತುಕ ಶಕ್ತಿಗಳೇ ಇದಕ್ಕೆ ನೇರ ಕಾರಣ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವಿಧಾನ ಪರಿಷತ್ ಸದಸ್ಯ ಎನ್‌. ರವಿಕುಮಾರ್‌ ಆರೋಪಿಸಿದ್ದಾರೆ.

‘ಕೇಂದ್ರ ಸರ್ಕಾರ 11 ಬಾರಿ ರೈತರ ಜತೆ ಸಭೆ ನಡೆಸಿದೆ. ಆದರೂ, ಸಭೆಗಳನ್ನು ವಿಫಲಗೊಳಿಸಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ದುರುದ್ದೇಶದಿಂದ ಪ್ರತಿಭಟನೆ ನಡೆಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆ ನಡೆಸಿದವರೇ ಈ ಕೃತ್ಯದಲ್ಲೂ ಭಾಗಿಯಾಗಿದ್ದಾರೆ’ ಎಂದು ಹೇಳಿಕೆಯಲ್ಲಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT