ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ಹೊಗಳು ಭಟ್ಟರೂ ಅಲ್ಲ, ವ್ಯಕ್ತಿ ಪೂಜೆಯನ್ನೂ ಮಾಡುತ್ತಿಲ್ಲ: ಮಹದೇವಪ್ಪ

Last Updated 14 ಜುಲೈ 2022, 7:55 IST
ಅಕ್ಷರ ಗಾತ್ರ

ಬೆಂಗಳೂರು: ‘ನಾವು ಹೊಗಳು ಭಟ್ಟರೂ ಅಲ್ಲ. ವ್ಯಕ್ತಿ ಪೂಜೆಯನ್ನೂ ಮಾಡುತ್ತಿಲ್ಲ. ಪಕ್ಷದ ಚಿಹ್ನೆ ಬಳಸಿ‌ ಸಿದ್ದರಾಮಯ್ಯ ಅವರ ಜನ್ಮ ದಿನ ಆಚರಿಸುತ್ತಿಲ್ಲ. ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುವ, ತಪ್ಪು ಸಂದೇಶ ಕೊಡುವ ಉದ್ದೇಶವೂ ನಮ್ಮದಲ್ಲ’ ಎಂದು ‘ಸಿದ್ದರಾಮಯ್ಯ–75’ ಅಮೃತ ಮಹೋತ್ಸವ ಸಮಿತಿಯ ಸ್ವಾಗತ ಸಮಿತಿಯ ಅಧ್ಯಕ್ಷ ಎಚ್.ಸಿ. ಮಹದೇವಪ್ಪ ತಿರುಗೇಟು ನೀಡಿದ್ದಾರೆ.

ಅರಮನೆ ಮೈದಾನದಲ್ಲಿ ಬುಧವಾರ ನಡೆದ ‘ಸಿದ್ದರಾಮಯ್ಯ–75’ ಅಮೃತ ಮಹೋತ್ಸವ ಸಮಿತಿಯ ಪೂರ್ವಭಾವಿ ಸಭೆಯಲ್ಲಿ, ಸಿದ್ದರಾಮಯ್ಯ ಜನ್ಮದಿನವನ್ನು ವ್ಯಕ್ತಿಪೂಜೆಯಾಗಿ ಮಾಡಲಾಗುತ್ತಿದೆ ಎಂಬ ಅಪಸ್ವರ ವ್ಯಕ್ತವಾಗಿತ್ತು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಮಹದೇವಪ್ಪ, ‘ಸಿದ್ಧರಾಮೋತ್ಸವ ಕಾರ್ಯಕ್ರಮ ಸಿದ್ದರಾಮಯ್ಯ ಅವರ ವೈಭವೀಕರಣಕ್ಕೆ ಅಲ್ಲ. ವ್ಯಕ್ತಿ ಪೂಜೆಗೆ ಸಂವಿಧಾನದಲ್ಲಿ ಅವಕಾಶ ಇಲ್ಲ’ ಎಂದರು.

‘ಈ ಕಾರ್ಯಕ್ರಮ ಸಿದ್ದರಾಮಯ್ಯ ಅವರ ಹೋರಾಟವನ್ನು ದಾಖಲು ಮಾಡುವ ಕೆಲಸ. ಹೋರಾಟ ಯಾವಾಗಲೂ ಚರಿತ್ರೆ ನಿರ್ಮಾಣ ಮಾಡಲಿದೆ. ಅದನ್ನು ನಾವು ಗುರುತಿಸುತ್ತಿದ್ದೇವೆ. ಅವರು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಮಾಡಿದ ಕೆಲಸವನ್ನು ಗಮನಿಸಿದ್ದೇವೆ. ಅವರು ಮಂಡಿಸಿದ 13 ಬಜೆಟ್‌ಗಳ ಬಗ್ಗೆ ಅವಲೋಕನ ಮಾಡಬೇಕಿದೆ. 165 ಭರವಸೆಗಳನ್ನು ಈಡೇರಿಸಿರುವ ಅವರ ಕೆಲಸವನ್ನೂ ನೋಡಬೇಕಾಗಿದೆ’ ಎಂದರು.

‘ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರ ಮತ್ತು ಈಗಿನ ಸರ್ಕಾರದ ಬಗ್ಗೆ ತುಲನೆ ಮಾಡಲಾಗುತ್ತಿದೆ. ಅವರ ಆಡಳಿತದಲ್ಲಿ ಉತ್ತಮರಾಗಿದ್ದರು. ಪ್ರಾಮಾಣಿಕ ರಾಜಕಾರಣಿ. ಸಾರ್ಥಕ ಸಾರ್ವಜನಿಕ ಬದುಕು ಪೂರೈಸಿರುವ ಸಿದ್ದರಾಮಯ್ಯ ಅವರ ಬಗ್ಗೆ ತಿಳಿಸಬೇಕಾಗಿದೆ. ಅದಕ್ಕಾಗಿ ಈ ಸಮಾವೇಶ ಮಾಡುತ್ತಿದ್ದೇವೆ’ ಎಂದು ಸಮರ್ಥಿಸಿದರು.

‘ಕಾಂಗ್ರೆಸ್‌ನಲ್ಲಿ ನಾಯಕನೊಬ್ಬನ ಹುಟ್ಟುಹಬ್ಬ ಆಚರಣೆ ಪಕ್ಷದ ವತಿಯಿಂದ ಮಾಡಿಲ್ಲ. ಸಿದ್ದರಾಮಯ್ಯ ಹುಟ್ಟುಹಬ್ಬದ ಸಮಾವೇಶ ಪಕ್ಷದ ಕಾರ್ಯಕ್ರಮ ಅಲ್ಲ. ಪಕ್ಷದೊಳಗಿನ ವ್ಯಕ್ತಿಗಳು, ಸ್ನೇಹಿತರು ಸೇರಿ ಮಾಡಿರುವ ಸಮಿತಿಯ ಮೂಲಕ ಈ ಸಮಾವೇಶ ಮಾಡುತ್ತಿದ್ದೇವೆ’ ಎಂದರು.

‘ಪಕ್ಷದ ಚಿಹ್ನೆ ಬಳಸಿ ವ್ಯಕ್ತಿಯ ಹುಟ್ಟುಹಬ್ಬ ಆಚರಿಸಿದ ಉದಾಹರಣೆ ಇಲ್ಲ. ಇದು ಪಕ್ಷದ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ ಅಲ್ಲ. ಸಿದ್ದರಾಮಯ್ಯ ಒಳ್ಳೆಯ ಸರ್ಕಾರ ಕೊಟ್ಟಿದ್ದಾರೆ. ಅವರು ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಪ್ರಬಲ ನಾಯಕ. ಬಿಜೆಪಿ, ಜೆಡಿಎಸ್‌ಗೆ ಮತ ಹಾಕಿರುವ ಜನರೆಲ್ಲರೂ ಸಿದ್ದರಾಮಯ್ಯ ಅವರು ಪ್ರಾಮಾಣಿಕ, ಬದ್ಧತೆ ಹೊಂದಿರುವ ರಾಜಕಾರಣಿ ಎಂದು ಮಾತನಾಡುತ್ತಿದ್ದಾರೆ. ಹೀಗಾಗಿ ಜನ್ಮದಿನ ಆಚರಿಸಲಾಗುತ್ತಿದೆ’ ಎಂದೂ ಹೇಳಿದರು.

‘ಶಿವಕುಮಾರೋತ್ಸವ’ ಮಾಡುವಂತೆ ಡಿ.ಕೆ. ಶಿವಕುಮಾರ್‌ ಅವರ ಆಪ್ತರು ಸಮಿತಿಗೆ ಪತ್ರ ಬರೆದಿರುವ ಕೇಳಿದ ಪ್ರಶ್ನೆಗೆ, ‘ಸಮಿತಿಗೆ ಪತ್ರ ತಲುಪಿದ ಬಗ್ಗೆ ನನಗೆ ಮಾಹಿತಿ ಇಲ್ಲ. ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಅದನ್ನು ಪ್ರಶ್ನಿಸಲು ಅಧಿಕಾರ ನಮಗೇನಿದೆ? ಯಾರು ಏನು ಬೇಕಾದರೂ ಮುಕ್ತವಾಗಿ ಮಾಡಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT