ಸೋಮವಾರ, ಆಗಸ್ಟ್ 2, 2021
21 °C

ಕರ್ನಾಟಕ ರಾಜಕಾರಣ: ಸರ್ಕಾರದ ಕಾರ್ಯವೈಖರಿಗೆ ಯೋಗೇಶ್ವರ್ ಅಪಸ್ವರ; ಯಾರು, ಏನೆಂದರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ತೃಪ್ತಿ ಇಲ್ಲದಿದ್ದರೆ ರಾಜೀನಾಮೆ ನೀಡಲಿ’
ಶಿವಮೊಗ್ಗ
: ‘ಸರ್ಕಾರದ ಕಾರ್ಯವೈಖರಿ ಕುರಿತು ತೃಪ್ತಿ ಇಲ್ಲದಿದ್ದರೆ ಸಚಿವ ಸಿ.ಪಿ.ಯೋಗೇಶ್ವರ್‌ ರಾಜೀನಾಮೆ ನೀಡಲಿ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಶುಕ್ರವಾರ ಆಗ್ರಹಿಸಿದರು.

ಸುದ್ದಿಗಾರರ ಜತೆ ಮಾತನಾಡುತ್ತಾ, ‘ನಾಯಕತ್ವ ಬದಲಾವಣೆ ಪ್ರಶ್ನೆ ಇಲ್ಲ. ಎಲ್ಲ ಶಾಸಕರೂ ಒಟ್ಟಿಗಿದ್ದೇವೆ. ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲಗಳಿವೆ. ಅದನ್ನು ಬಗೆಹರಿಸಿಕೊಳ್ಳುತ್ತೇವೆ. ಪಕ್ಷದ ನಾಯಕರ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿರುತ್ತೇವೆ’ ಎಂದರು.

‘ಯೋಗೇಶ್ವರ್‌ ಅವರು ಬಿಜೆಪಿ ನೇತೃತ್ವದ ಸರ್ಕಾರವನ್ನು ಮೂರು ಪಕ್ಷಗಳ ಸರ್ಕಾರ ಎಂದು ಟೀಕಿಸಿದ್ದಾರೆ. ಇದು ಲಕ್ಷಾಂತರ ಕಾರ್ಯಕರ್ತರಿಗೆ ನೋವು ತಂದಿದೆ’ ಎಂದರು.

ಇದನ್ನೂ ಓದಿ: 

ಯೋಗೇಶ್ವರ್ ಹುಚ್ಚ –ಚಂದ್ರಪ್ಪ ಕಿಡಿ
ಚಿತ್ರದುರ್ಗ: ‘ಸಚಿವ ಸಿ.ಪಿ.ಯೋಗೇಶ್ವರ್‌ ಹುಚ್ಚ. ಆತನಿಗೆ ಎಲ್ಲೋ ತಲೆಕೆಟ್ಟಿರಬೇಕು. ಇದು ನಾಯಕತ್ವ ಬದಲಾವಣೆ ಮಾಡುವ ಸಮಯವೇ’ ಎಂದು ಕೆಎಸ್‌ಆರ್‌ಟಿಸಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಚಂದ್ರಪ್ಪ ಕಿಡಿಕಾರಿದರು.

‘ಯಾವ ಸ್ಥಾನಮಾನ ಇಲ್ಲದವನನ್ನು ಕರೆತಂದು ವಿಧಾನಪರಿಷತ್ ಸದಸ್ಯರಾಗಿ ಮಾಡಿ ಸಚಿವ ಸ್ಥಾನ ನೀಡಲಾಯಿತು. ರಾಜಕೀಯದಲ್ಲಿ ಆತ ಇನ್ನೂ ಬಚ್ಚಾ. ಅಧಿಕಾರದ ಅಮಲಿನಲ್ಲಿ ಮನಬಂದಂತೆ ವರ್ತನೆ ಸರಿಯಲ್ಲ’ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ‘ಯಡಿಯೂರಪ್ಪ ನಾಯಕತ್ವ ಬದಲಾವಣೆ ಕನಸಿನ ಮಾತು’ ಎಂದರು.

ಯಡಿಯೂರಪ್ಪ ಸ್ಥಾನ ಅಬಾಧಿತ: ಶಾಮನೂರು ವಿಶ್ವಾಸ
ದಾವಣಗೆರೆ: ‘ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಯಡಿಯೂರಪ್ಪ ಅವರೇ ನೂರಕ್ಕೆ ನೂರು ಆ ಸ್ಥಾನದಲ್ಲಿ ಮುಂದುವರಿಯುತ್ತಾರೆ’ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಬದಲಾವಣೆಗೆ ಪ್ರಯತ್ನಿಸಲು ಹೋದವರು ಮೂರು ನಾಮ ಹಾಕಿಕೊಂಡು ಬಂದಿದ್ದಾರೆ. ಬಿಜೆಪಿಯವರು ಹೈಕಮಾಂಡ್ ಹೇಳಿದಂತೆ ಕೇಳುತ್ತಾರೆ’ ಎಂದು ಪರೋಕ್ಷವಾಗಿ ಸಚಿವ ಸಿ.ಪಿ. ಯೋಗೇಶ್ವರ್‌ಗೆ ಟಾಂಗ್ ಕೊಟ್ಟರು.

ವಿಜಯೇಂದ್ರ ಅವರಿಂದ ಹಸ್ತಕ್ಷೇಪ ಇಲ್ಲ: ಎಸ್‌.ಟಿ.ಸೋಮಶೇಖರ್
‘ಮೂರು ಪಕ್ಷ ಬದಲಾವಣೆ ಮಾಡಿ ಬಂದವರು ಮಾತ್ರ, ಮೂರು ಪಕ್ಷಗಳ ಹೊಂದಾಣಿಕೆ ಸರ್ಕಾರ ಎಂದು ಹೇಳಲು ಸಾಧ್ಯ’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.

ಸಿ.ಪಿ.ಯೋಗೇಶ್ವರ್ ಅವರ ಹೇಳಿಕೆ ಕುರಿತಂತೆ, ‘ನಮ್ಮ ಸರ್ಕಾರ ಯಾವುದೇ ಪಕ್ಷದ ಜತೆಗೂ ಹೊಂದಾಣಿಕೆ ಮಾಡಿಕೊಂಡಿಲ್ಲ’ ಎಂದರು.

‘ವಿಜಯೇಂದ್ರ ಅವರು ಆಡಳಿತದಲ್ಲಿ ಎಳ್ಳಷ್ಟೂ ಹಸ್ತಕ್ಷೇಪ ಮಾಡಿರುವ ನಿದರ್ಶನವಿಲ್ಲ. ನನ್ನ ಇಲಾಖೆಯನ್ನು ಮುಕ್ತವಾಗಿ ನಿರ್ವಹಿಸುತ್ತಿದ್ದೇನೆ. ಯಾರೂ ಹಸ್ತಕ್ಷೇಪ ಮಾಡುತ್ತಿಲ್ಲ’ ಎಂದು ಸೋಮಶೇಖರ್‌ ತಿಳಿಸಿದರು.

ಇದನ್ನೂ ಓದಿ: 

***

‘ನಮ್ಮ ಮುಂದೆ ಈಗ ಇರುವುದು ಕೋವಿಡ್ ನಿಯಂತ್ರಣದ ವಿಚಾರವೊಂದೇ. ನಾಯಕತ್ವ ಬದಲಾವಣೆ ಸೇರಿದಂತೆ ಬೇರೆ ಯಾವುದೇ ವಿಚಾರಗಳಿಲ್ಲ. ‘ಕೋವಿಡ್ ಬಿಟ್ಟು ಬೇರೆ ವಿಚಾರ ಕುರಿತು ಮಾತು ಬೇಡ.
-ಎಸ್.ಸುರೇಶ್‌ ಕುಮಾರ್, ಸಚಿವ

***

ಯಾರೋ ದೆಹಲಿಗೆ ಹೋದ ಕೂಡಲೇ ನಾಯಕತ್ವ ಬದಲಾದರೆ ದಿನಕ್ಕೊಬ್ಬರು ಸಿ.ಎಂ ಆಗಬೇಕಾಗುತ್ತದೆ. ಮೂರು ಗುಂಪುಗಳ ಸರ್ಕಾರ ಇಲ್ಲ. ನಾವು ಒಂದೇ ಪಕ್ಷದ ಅಡಿಯಲ್ಲಿದ್ದೇವೆ. ವಿಜಯೇಂದ್ರ ಅವರ ಹಸ್ತಕ್ಷೇಪ ಇಲ್ಲ.
-ಆರ್.ಶಂಕರ್, ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು