ಶನಿವಾರ, ಏಪ್ರಿಲ್ 1, 2023
28 °C
ಬೆಂಗಳೂರಿನ ಆರ್‌.ಆರ್‌.ಠಾಣೆಯಲ್ಲಿ ಹೇಳಿಕೆ ದಾಖಲು

ನಾನು ಬಿಜೆಪಿ ಕಾರ್ಯಕರ್ತ: ಸ್ಯಾಂಟ್ರೊ ರವಿ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ತನ್ನ ವಿರುದ್ಧ ದಾಖಲಾಗಿದ್ದ ದೂರೊಂದರ ಸಂಬಂಧ ಹೇಳಿಕೆ ನೀಡುವಾಗ, ಕೆ.ಎಸ್‌.ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೊ ರವಿ, ‘ನಾನು ಬಿಜೆಪಿ ಕಾರ್ಯಕರ್ತ’ ಎಂದು ಹೇಳಿಕೊಂಡಿದ್ದಾರೆ.

‘ಸರ್ಕಾರಿ ನೌಕರರಿಗೆ ವರ್ಗಾ ವಣೆ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ’ ಎಂದು ಬೆಂಗಳೂರಿನ ಜಗದೀಶ್‌ ಎಂಬುವರು 2022ರ ಜ.21ರಂದು ದೂರು ನೀಡಿದ್ದರು. ಮರು ದಿನವೇ ಪೊಲೀಸರಿಗೆ ಮೇಲಿನಂತೆ ಹೇಳಿಕೆಯನ್ನು ಸ್ಯಾಂಟ್ರೊ ರವಿ ನೀಡಿ ಸಹಿ ಹಾಕಿದ್ದರು. ದಾಖಲೆ ಪ್ರತಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಪತ್ರದಲ್ಲೇನಿದೆ?: ‘ನಾನು ಸುಮಾರು 3–4 ವರ್ಷಗಳಿಂದ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ನನಗೆ ಬಿಜೆಪಿ ಸಂಸದರು, ಶಾಸಕರು ಮತ್ತು ರಾಜಕೀಯ ವ್ಯಕ್ತಿಗಳು ಪರಿಚಯ. ಸ್ನೇಹಿತರಾದ ಗಣೇಶ್‌ ಬಾಬು, ರವಿಕುಮಾರ್‌ ಮತ್ತು ಶ್ರೀವತ್ಸ ಎಂಬುವರ ಜೊತೆ ಹಣಕಾಸು ವ್ಯವಹಾರವಿದೆ. ಪೊಲೀಸ್‌ ಇಲಾ ಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿದ್ದೇನೆ’ ಎಂದು ಹೇಳಿದ್ದಾರೆ.

ವರ್ಗಾವಣೆ ಮಾಹಿತಿ: ‘ವರ್ಷದ ಹಿಂದೆ ಇನ್‌ಸ್ಪೆಕ್ಟರ್‌ ಜಿ.ಕೆ.ಸುಬ್ರ ಹ್ಮಣ್ಯ ಎಂಬುವರಿಗೆ ಚನ್ನರಾಯ ಪಟ್ಟಣ ಸರ್ಕಲ್‌ ಪೊಲೀಸ್‌ ಠಾಣೆಗೆ, ಹಲಗೂರು ಠಾಣೆಯಲ್ಲಿದ್ದ ಪಿಎಸ್‌ಐ ರವಿಕುಮಾರ್‌ ಅವರನ್ನು ಮಳ ವಳ್ಳಿಗೆ ವರ್ಗಾವಣೆ ಮಾಡಿಸಿಕೊಟ್ಟಿದ್ದೇನೆ.

ಬಿಜೆಪಿಯಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡಿದ್ದಾಗ ಈ ಅಧಿಕಾರಿಗಳು ಪರಿಚಯ ಆಗಿದ್ದರು, ನನಗೆ ಗೊತ್ತಿರುವ ರಾಜಕೀಯ ವ್ಯಕ್ತಿಗಳ ಸಹಾಯದಿಂದ ವರ್ಗಾವಣೆ ಮಾಡಿಸಿರುತ್ತೇನೆ. ಅವರಿಂದ ಕಮಿಷನ್ ಪಡೆದಿಲ್ಲ’ ಎಂದು ರವಿ ಹೇಳಿದ್ದಾರೆ.

ವರ್ಗಾವಣೆ ಸಂಬಂಧ ಹಲವು ಅಧಿಕಾರಿಗಳಿಗೆ ಹಾಗೂ ಸಚಿವರ ಆಪ್ತರಿಗೆ ಸ್ಯಾಂಟ್ರೊ ರವಿ ಸಂದೇಶಗಳನ್ನು ಕಳುಹಿಸಿರುವ ಮಾಹಿತಿಯನ್ನೂ ಹೇಳಿಕೆಯಲ್ಲಿ ದಾಖಲಿಸಿದ್ದು, ‘ಅಶೋಕ ನಗರ ಠಾಣೆಯ ಇನ್‌ಸ್ಪೆಕ್ಟರ್‌ ವರ್ಗಾವಣೆಗೆ ಸಂಬಂಧಿಸಿದಂತೆ 2022ರ ಜ.19ರಂದು ರಾಜ್ಯ ಗೃಹ ಸಚಿವರ ಕಚೇರಿ ಪಿ.ಎ. ವಿಕ್ರಮ್ ಅವರಿಗೆ ಹಾಗೂ ಜ.21ರಂದು ಶಿವಮೊಗ್ಗದ ಇನ್‌ಸ್ಪೆಕ್ಟರ್‌ ರಾಜೇಂದ್ರ ಅವರಿಗೆ ಸಂದೇಶ ಕಳುಹಿಸಿದ್ದೆ. ಬಿ.ಬಿ.ಗಿರೀಶ್‌ ಅವರನ್ನು ಅಶೋಕನಗರ ಠಾಣೆಗೆ ವರ್ಗಾವಣೆ ಮಾಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಜ.13 ಹಾಗೂ 15ರಂದು ಗೃಹ ಸಚಿವರ ಆತ್ಮೀಯ ಸ್ನೇಹಿತರಾದ ಶಿವಮೊಗ್ಗದ ಬಿಜೆಪಿ ಮುಖಂಡ ಬಸವರಾಜ ಒಡ್ಡಾಳ, ಶ್ರೀನಾಥ ಅವರಿಗೆ ಸಂದೇಶ ಕಳುಹಿಸಿದ್ದೇನೆ’ ಎಂದು ಹೇಳಿದ್ದಾರೆ.

‘ಇನ್‌ಸ್ಪೆಕ್ಟರ್‌ ಹುದ್ದೆಗಳು ಖಾಲಿ ಇರುವ ಠಾಣೆಯ ಮಾಹಿತಿ ಸಂಗ್ರಹಿಸಲು ಡಿ.ಜಿ ಹಾಗೂ ಐಜಿಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಣ್ ಅವರಿಗೆ, ಬಿಡಿಎನಲ್ಲಿದ್ದ ಕೆಎಎಸ್‌ ಅಧಿಕಾರಿ ಆನಂದ ಅವರನ್ನು ಮುಡಾಗೆ ವರ್ಗಾವಣೆ ಮಾಡಿಸಲು ಸಂದೇಶ, ಮೈಸೂರು ಐಜಿಪಿ ಕಚೇರಿಯಲ್ಲಿ ಪಿಎಸ್‌ ಆಗಿರುವ ಮಹೇಶ್‌ ಅವರಿಗೆ ಹಲಗೂರು ಠಾಣೆಗೆ ವರ್ಗಾವಣೆ ಮಾಡಿಸುವ ಸಂಬಂಧ ಸಂದೇಶ ಕಳುಹಿಸಿದ್ದೇನೆ’ ಎಂದು ರವಿ ತಿಳಿಸಿದ್ದಾರೆ.

‘ಮುಂದೆ ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ಹಣಕಾಸಿನ ವ್ಯವಹಾರ ಹಾಗೂ ರಾಜಕೀಯ ವ್ಯಕ್ತಿಗಳಿಗೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ’ ಎಂಬ ಮುಚ್ಚಳಿಕೆ ಪತ್ರವನ್ನು 2022ರ ಜ.22ರಂದು ಬರೆದುಕೊಟ್ಟು ಸಹಿ ಹಾಕಿದ್ದಾರೆ.

ತನಿಖಾಧಿಕಾರಿಗೆ ದಾಖಲೆ ಸಲ್ಲಿಕೆ
ಮೈಸೂರು:
‘ಸ್ಯಾಂಟ್ರೊ ರವಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ತನಿಖಾಧಿಕಾರಿ ಎಸಿಪಿ ಅವರಿಗೆ ಮುಚ್ಚಿದ ಲಕೋಟೆಯಲ್ಲಿ ಸಂಬಂಧಿಸಿದ ದಾಖಲೆಯನ್ನು ಸಲ್ಲಿಸಲಾಗಿದೆ’ ಎಂದು ‘ಒಡನಾಡಿ’ ಸಂಸ್ಥಾಪಕ ಸ್ಟ್ಯಾನ್ಲಿ ಬುಧವಾರ ಹೇಳಿದರು.

‘ಮಹಜರು ಸಲುವಾಗಿ ಸಂತ್ರಸ್ತೆಯನ್ನು ಕರೆದೊಯ್ದಿದ್ದಾರೆ. ಆಕೆಯ ಸಹೋದರಿಯ ಹೇಳಿಕೆಯನ್ನು ಸಿಆರ್‌ಪಿಸಿ 164 ಅಡಿ ನ್ಯಾಯಾಲಯವು ದಾಖಲಿಸಿಕೊಂಡಿದೆ’ ಎಂದರು.

ಸಂತ್ರಸ್ತೆಯೊಂದಿಗೆ ತೆರಳಿದ ಪೊಲೀಸರು ಮದುವೆಯಾದ ಜಾಗ, ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ ವಕೀಲರ ಮನೆ, ಸ್ಯಾಂಟ್ರೊ ರವಿ ಮನೆ ಮತ್ತು ವಾಸವಿದ್ದ ಬಾಡಿಗೆ ಮನೆ ಪರಿಶೀಲಿಸಿದರು. ರವಿ ಜೊತೆ ಸಂಬಂಧ ಹೊಂದಿರುವ ಪ್ರಮುಖರೊಬ್ಬರನ್ನು ಬೆಂಗಳೂರಿನಿಂದ ಮೈಸೂರಿಗೆ ಕರೆ ತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ದೂರಿನಲ್ಲೇನಿತ್ತು?
ಕೆಂಗೇರಿ ಉಪ ವಿಭಾಗದ ಎಸಿಪಿ ಹಾಗೂ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಗೆ ಜಗದೀಶ್ ದೂರು ನೀಡಿದ್ದರು.

‘ಮಂಜುನಾಥ್‌ ಎಂಬುವನು ತೋರಿಕೆಗಾಗಿ ಮೂರ್ನಾಲ್ಕು ಕಾರು ಇಟ್ಟುಕೊಂಡು, ನನ್ನ ಹೆಂಡತಿ ವಕೀಲೆ ಎಂದು ಹೇಳಿಕೊಂಡು ರಾಜಕೀಯ ಮುಖಂಡರ ಜೊತೆ ಇರುವ ಫೋಟೊ ತೋರಿಸಿ ವರ್ಗಾವಣೆ ಮಾಡಿಸಿಕೊಡುತ್ತೇನೆ ಎಂದು ನಂಬಿಸಿ ಹಣ ಪಡೆದು ಮೋಸ ಮಾಡುತ್ತಿದ್ದಾನೆ. 2000–05ರಲ್ಲಿ ಮಂಡ್ಯ ಹಾಗೂ ಮೈಸೂರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಿದ ಸಂಬಂಧ ಪ್ರಕರಣಗಳು ದಾಖಲಾಗಿವೆ. ಅಕ್ರಮವಾಗಿ ₹ 60 ಕೋಟಿ ಆಸ್ತಿಯನ್ನು ಮಾಡಿದ್ದಾನೆ. ಆತನ ವಿರುದ್ಧ ಕ್ರಮ ವಹಿಸಬೇಕು’ ಎಂದು ದೂರಿನಲ್ಲಿ ಹೇಳಿದ್ದರು.

ಪ್ರಕರಣ ಸಿಸಿಬಿಗೆ ವರ್ಗ
ಬೆಂಗಳೂರು:
ಕೆ.ಎಸ್.ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೊ ರವಿ ಮಹಿಳೆಯೊಬ್ಬರ ವಿರುದ್ಧ ಕಾಟನ್‌ಪೇಟೆ ಪೊಲೀಸ್‌ ಠಾಣೆಗೆ ನೀಡಿದ್ದ ಸುಳ್ಳು ದೂರಿನ ಪ್ರಕರಣದ ತನಿಖೆಯನ್ನು ನಗರ ಪೊಲೀಸ್ ಕಮಿಷನರ್‌ ಆಯುಕ್ತ ಪ್ರತಾಪ್‌ ರೆಡ್ಡಿ ಸಿಸಿಬಿಗೆ ವರ್ಗಾಯಿಸಿ ಬುಧವಾರ ಆದೇಶಿಸಿದ್ಧಾರೆ.

ಸುಳ್ಳು ದೂರನ್ನೇ ಆಧರಿಸಿ ಕಾಟನ್‌ಪೇಟ್ ಪೊಲೀಸರು ಆ ಸಂತ್ರಸ್ತ ಮಹಿಳೆಯನ್ನು ಬಂಧಿಸಿದ್ದರು. ರವಿ ಸಂಚಿನಲ್ಲಿ ಭಾಗಿಯಾಗಿ ಕರ್ತವ್ಯಲೋಪ ಎಸಗಿದ್ದ ಆರೋಪದ ಅಡಿ ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದ ಪ್ರವೀಣ್ ಅವರನ್ನು ಅಮಾನತು ಮಾಡಲಾಗಿತ್ತು. ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸುವಂತೆ ಕಮಿಷನರ್‌ ಆದೇಶಿಸಿದ್ದಾರೆ.

*
ಸ್ಯಾಂಟ್ರೊ ರವಿ ಬಿಜೆಪಿಯ ಕಾರ್ಯಕರ್ತ ಎಂದು ಪೊಲೀಸರಿಗೆ ಮುಚ್ಚಳಿಕೆ ಬರೆದು ಕೊಟ್ಟಿದ್ದ. ನೈತಿಕತೆ ಬಗ್ಗೆ ಯಾವ ಮುಖ ಇರಿಸಿಕೊಂಡು ಬಿಜೆಪಿ ಜನರಿಗೆ ಬೋಧನೆ ಮಾಡುತ್ತದೆ.
-ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು