ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಮರ್ಜಿಯಲ್ಲೇ ಬೊಮ್ಮಾಯಿ ಇರಬೇಕಾಗುತ್ತದೆ: ಸಿದ್ದರಾಮಯ್ಯ

‘ಜನಪೀಡಕ ಸರ್ಕಾರ’ ಕಿರುಹೊತ್ತಿಗೆ ಬಿಡುಗಡೆ
Last Updated 29 ಜುಲೈ 2021, 11:13 IST
ಅಕ್ಷರ ಗಾತ್ರ

ಬೆಂಗಳೂರು: ‘ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಎರಡು ವರ್ಷದ ಸಾಧನೆ ಭ್ರಷ್ಟಾಚಾರ, ಅದಕ್ಷತೆ, ಅರಾಜಕತೆ, ದುರಾಡಳಿತ. ಅಭಿವೃದ್ಧಿ ಶೂನ್ಯ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿದ ‘ಜನಪೀಡಕ ಸರ್ಕಾರ’ ಎಂಬ ಕಿರು ಹೊತ್ತಿಗೆಯನ್ನು ತಮ್ಮ ಸರ್ಕಾರಿ ನಿವಾಸದಲ್ಲಿ ಗುರುವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ನೇಮಿಸಿದ್ದೇ ಯಡಿಯೂರಪ್ಪ. ಇದರಿಂದ ಬದಲಾವಣೆ ಆಗಲ್ಲ. ಶರಣಾಗತಿ ಬಸವರಾಜ ಬೊಮ್ಮಾಯಿಗೆ ಅನಿವಾರ್ಯ. ಕೆಲಸ ಕೊಟ್ಟಿದ್ದೇ ಯಡಿಯೂರಪ್ಪ. ಹೀಗಾಗಿ, ಅವರ ಮರ್ಜಿಯಲ್ಲೇ ಇರಬೇಕಾಗುತ್ತದೆ’ ಎಂದರು.

‘ಯಡಿಯೂರಪ್ಪ ಅವರು ಎರಡು ವರ್ಷ ಸರ್ಕಾರ ನಡೆಸಿದ್ದೇನೆ ಎಂದು ಸಂಭ್ರಮದ ದಿನ ಆಚರಿಸಿ ರಾಜೀನಾಮೆ ನೀಡಿದರು. ರಾಜ್ಯವನ್ನು ಸಂಕಷ್ಟದ ದಿನದಲ್ಲೂ ಅಭಿವೃದ್ಧಿಗೆ ಕೊಂಡೊಯ್ದಿದ್ದೇವೆ ಎಂದೆಲ್ಲ ಹೇಳಿದರು’ ಎಂದು ಟೀಕಿಸಿದರು.

‘2018ರಲ್ಲಿ ಯಾರಿಗೂ ಬಹುಮತ ಇಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ದೊಡ್ಡ ಪಕ್ಷ ಆಗಿದ್ದಕ್ಕೆ ಬಿ.ಎಸ್ ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸುವ ಅವಕಾಶ ಬಂತು. ಅವರು ವಿಫಲವಾದಾಗ ಮೈತ್ರಿ ಸರ್ಕಾರ ಬಂತು. ಅದನ್ನು ಬೀಳಿಸಿ ಮತ್ತೆ ಯಡಿಯೂರಪ್ಪ ವಾಮಮಾರ್ಗದಲ್ಲಿ ಅನೈತಿಕ ಸರ್ಕಾರ ರಚಿಸಿದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಕ್ಕಳಿಗೆ, ಗರ್ಭಿಣಿಯರಿಗೆ ನೀಡುವ ಮೊಟ್ಟೆಯಲ್ಲೂ ಅಕ್ರಮ ನಡೆಸಿದ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕೋವಿಡ್‌ ನಿರ್ವಹಿಸಲು ಅಗತ್ಯವಾದ ಸಾಧನಗಳ ಖರೀದಿಯಲ್ಲೂ ಅಕ್ರಮ ಎಸಗಿದ್ದಾರೆ. ವೆಂಟಿಲೇಟರ್‌ಗಳು ಸೇರಿದಂತೆ ಎಷ್ಟೋ ಸಲಕರಣೆಗಳನ್ನು ಬಳಸಿಲ್ಲ. ನೂರಾರು ಕೋಟಿ ರೂಪಾಯಿಯ ಬಿಲ್ ಮಾಡಿದರು. ಸರ್ಕಾರದ ಭ್ರಷ್ಟಾಚಾರವನ್ನು ನಾವು ದಾಖಲೆಗಳ ಸಮೇತ ಗಮನಕ್ಕೆ ತಂದೆವು. ಆದರೆ, ಯಡಿಯೂರಪ್ಪ ಉತ್ತರಿಸಲೇ ಇಲ್ಲ’ ಎಂದು ದೂರಿದರು.

‘ಕೋವಿಡ್‌ ಎರಡನೇ ಅಲೆಯ ಮುನ್ಸೂಚನೆ ಇದ್ದರೂ ನಿರ್ಲಕ್ಷ್ಯ ಮಾಡಲಾಯಿತು. ಸಿದ್ಧತೆ ಮಾಡಿಕೊಳ್ಳದೇ ಸರ್ಕಾರ ವಿಫಲವಾಯಿತು. ಕೊರತೆಗಳೇ ಹೆಚ್ಚಾದವು. ಹಾಸಿಗೆ ಸಿಗದೇ ಸಾವಿರಾರು ಜನ ಮೃತಪಟ್ಟರು. ಸಿದ್ಧತೆ ಮಾಡಿಕೊಂಡಿದ್ದರೆ ಇಷ್ಟೊಂದು ಜನ ಸಾಯುತ್ತಿರಲಿಲ್ಲ. ರಾಜ್ಯದಲ್ಲಿ ಆರೋಗ್ಯ ಸಚಿವರಾಗಿದ್ದ ಡಾ.ಕೆ. ಸುಧಾಕರ್ ಹೇಳಿದಂತೆ ಕೇಂದ್ರ ಆರೋಗ್ಯ ಸಚಿವರೂ ಸುಳ್ಳು ಹೇಳಿದ್ದಾರೆ. ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡರು. ಕಾರ್ಮಿಕರು ಬೀದಿಗೆ ಬಂದರು’ ಎಂದರು.

‘ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಬಸವರಾಜ ಬೊಮ್ಮಾಯಿ ಕೆಲವು ಘೋಷಣೆಗಳನ್ನು ಮಾಡಿದ್ದನ್ನು ಸ್ವಾಗತಿಸುತ್ತೇನೆ. ಆದರೆ, ಆದಾಯ ಮೂಲ ಎಲ್ಲಿದೆ. ಎಲ್ಲಿಂದ ಹಣ ತರುತ್ತೀರಿ. ಸಾಲ ಮಾಡಿ ಹೋಳಿಗೆ ತಿನ್ನುವಂತಾಗಿದೆ. ರಾಜ್ಯವನ್ನು ಆರ್ಥಿಕ ದುಸ್ಥಿತಿಗೆ ಯಡಿಯೂರಪ್ಪ ತಳ್ಳಿದ್ದಾರೆ’ ಎಂದರು.

‘ಇಂಧನ ಬೆಲೆ ಏರಿದೆ. ಅಡುಗೆ ಎಣ್ಣೆ ಬೆಲೆ ಏರಿಕೆ ಎಷ್ಟಾಗಿದೆ ಎಂದರೆ ಈಗ ಪಕೋಡಾ ಸಹ ಮಾಡಲು ಸಾಧ್ಯವಿಲ್ಲ. 12 ಕೋಟಿ ಉದ್ಯೋಗ ನಷ್ಟವಾಗಿದೆ. ಮೋದಿ ಅಮಾನುಷ ವ್ಯಕ್ತಿ. ಕೋವಿಡ್‌ ಔಷಧಿಯ ಮೇಲಿನ ಜಿಎಸ್ಟಿ ಕೂಡ ತೆಗೆಯಲಿಲ್ಲ’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

‘ಹೊಸ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನಪರ ಆಡಳಿತ ನೀಡುವುದಾಗಿ ಹೇಳಿದ್ದಾರೆ. ಈಗ ಏನೂ ಹೇಳಲ್ಲ, ನೋಡೋಣ. ಅವರ ತಂದೆ ನಮ್ಮ ಆತ್ಮೀಯರಾಗಿದ್ದರು, ಇವರಲ್ಲ. ರಾಷ್ಟ್ರೀಯವಾದಿಯಾಗಿದ್ದಾಗ ಬಾಂಧವ್ಯ ಇತ್ತು. ಕೋಮುವಾದಿ ಪಕ್ಷ ಸೇರಿದ ಮೇಲೆ ನಮ್ಮ ರಾಜಕೀಯ ಬಾಂಧವ್ಯ ಕಡಿದುಹೋಗಿದೆ. ಹಿಂದಿನ ವರ್ಷ ಸೂಕ್ತ ನೆರೆ ಪರಿಹಾರ ಸಿಕ್ಕಿಲ್ಲ. ಮೊನ್ನೆ ಬೆಳಗಾವಿಗೆ ತೆರಳಿದ್ದಾಗ ಜನರೇ ನೋವು ತೋಡಿಕೊಂಡಿದ್ದಾರೆ’ ಎಂದರು.

ಸರ್ಕಾರದಲ್ಲಿನ ಭ್ರಷ್ಟಾಚಾರ ವಿಚಾರವಾಗಿ ಯತ್ನಾಳ್, ಎಚ್‌. ವಿಶ್ವನಾಥ್ ಇನ್ನೂ ಚೆನ್ನಾಗಿ ಮಾಹಿತಿ ಕೊಡುತ್ತಾರೆ. ಎಷ್ಟು ಪರ್ಸೆಂಟ್ ಎಂದು ಅವರೇ ಸರಿಯಾಗಿ ಹೇಳುತ್ತಾರೆ. ಪಕ್ಷದವರೇ ಆರೋಪ ಮಾಡಿದಾಗ ಯಡಿಯೂರಪ್ಪಗೆ ನೋವಾಗಲಿಲ್ಲ. ನಾನು ಹೇಳಿದಾಗ ನೋವಾಗಿದೆ. ಯಡಿಯೂರಪ್ಪ ಸರ್ಕಾರವೇ ಇದ್ದರೆ ಹೀನಾಯವಾಗಿ ಸೋಲುತ್ತೇವೆ ಎಂದು ಮುಖ್ಯಮಂತ್ರಿ ಬದಲಿಸಿದ್ದಾರೆ. ಅದರಿಂದ ಸರ್ಕಾರದ ವರ್ಚಸ್ಸು ಬದಲಾಗಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT