ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಇಬ್ಬರು ಸಾವು, ಯುವತಿ ನೀರುಪಾಲು

ಕಲಬುರಗಿ, ಬೀದರ್‌, ಉಡುಪಿ, ಉತ್ತರ ಕನ್ನಡದಲ್ಲಿ ಮುಂದುವರಿದ ಮಳೆ l ಸಂತ್ರಸ್ತರ ಪರದಾಟ
Last Updated 9 ಸೆಪ್ಟೆಂಬರ್ 2022, 18:21 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮಳೆ ಅವಘಡದಿಂದ ಶುಕ್ರವಾರ ಮಹಿಳೆ ಸೇರಿ ಇಬ್ಬರು ಮೃತಪಟ್ಟಿದ್ದು, ಯುವತಿ ಯೊಬ್ಬರು ಹಳ್ಳದಲ್ಲಿ ಕೊಚ್ಚಿಹೋಗಿದ್ದಾರೆ. ಕಲಬುರಗಿ, ಉಡುಪಿ, ಉತ್ತರ ಕನ್ನಡ ಬಿಟ್ಟು ಉಳಿದ ಜಿಲ್ಲೆಗಳಲ್ಲಿ ಮಳೆ ತುಸು ಬಿಡುವು ನೀಡಿದೆ.

ಉಳಿದ ಜಿಲ್ಲೆಗಳಲ್ಲಿ ಮಳೆ ಬಿಡುವು ನೀಡಿದ್ದು, ಧಾರಾಕಾರ ಮಳೆ ಹಾಗೂ ಪ್ರವಾಹದಿಂದಾದ ಅಧ್ವಾನಗಳ ಹಿನ್ನೆಲೆಯಲ್ಲಿ ಸಂತ್ರಸ್ತರು ನೆರವಿಗಾಗಿ ಪರದಾಡುವ ಸ್ಥಿತಿ ಇದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ಯಲ್ಲಿ ಮರ ಉರುಳಿ ರುಕ್ಮಿಣಿ ಮರ ನೂರ (38) ಅವರು,ಬೀದರ್ ಜಿಲ್ಲೆಯ ಬೆಳಕೇರಾದಲ್ಲಿ ಹಳ್ಳದಲ್ಲಿ ಕೊಚ್ಚಿಹೋಗಿದ್ದ ದತ್ತು ಶರಣಪ್ಪ (33) ಅವರ ಶವ ಶುಕ್ರವಾರ ಪತ್ತೆಯಾಗಿದೆ.ಕಲಬುರಗಿ ಜಿಲ್ಲೆ ಕಮಲಾಪುರ ತಾಲ್ಲೂಕಿನ ಮುಗಳಿಯಲ್ಲಿ ಧಾನೇಶ್ವರಿ ಸಿದ್ದಪ್ಪ ಕ್ಯಾಸರ್ (18) ಹಳ್ಳದಲ್ಲಿ ಕೊಚ್ಚಿಹೋಗಿದ್ದು, ಅವರ ಪತ್ತೆಗಾಗಿ ತೀವ್ರ ಶೋಧ ನಡೆದಿದೆ.

ಮರಬಿದ್ದು ಮಹಿಳೆ ಸಾವು,

ಬಾಗಲಕೋಟೆ: ಜಿಲ್ಲೆಯ ಜಮಖಂಡಿಯಲ್ಲಿ ಮಳೆಯಿಂದ ರಕ್ಷಣೆಗೆ ಮರದ ಕೆಳಗೆ ನಿಂತಿದ್ದಾಗಮರ ಉರುಳಿ ಮುಧೋಳ ತಾಲ್ಲೂಕಿನ ಕುಳಲಿ ಗ್ರಾಮದ ರುಕ್ಮಿಣಿ ಮರನೂರ (38) ಮೃತ ಪಟ್ಟಿದ್ದು, ಅವರ ಪತಿ ಶ್ರೀಶೈಲ ಮರನೂರ ಗಾಯಗೊಂಡಿದ್ದಾರೆ.

ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಗಂಜಿಹಾಳದ ರೈತ ದೇವಾನಂದ ಕಮ್ಮಾರ ಅವರ ಮೃತದೇಹ ಶುಕ್ರವಾರ ದೊರೆತಿದೆ. ಜಿಲ್ಲೆಯಲ್ಲಿ ಮಳೆ ತಗ್ಗಿದೆ. ಕಜಗಲ್ಲ, ವರಗೋಡದಿನ್ನಿ, ಹೂವನೂರ ಸೇರಿ ವಿವಿಧ ಗ್ರಾಮಗಳ ಜನರಹ ಮನೆಗಳತ್ತ ಮುಖಮಾಡಿದ್ದಾರೆ.

ಬೀದರ್‌: ಮಳೆ,ಮನೆ ಜಲಾವೃತ

ಕಲಬುರಗಿ ವರದಿ: ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಮಳೆಯಾಯಿತು.ರಾಯಚೂರು ಜಿಲ್ಲೆಯ ಟಣಮನಕಲ್ ಗ್ರಾಮದ ಹಿರೇಹಳ್ಳದಲ್ಲಿ ಮೇಕೆ ಕೊಚ್ಚಿಹೋಗಿದೆ.

ಕಲಬುರಗಿ ಜಿಲ್ಲೆ ಕಮಲಾಪುರ ತಾಲ್ಲೂಕಿನ ಲಾಡ ಮುಗಳಿಯಲ್ಲಿ ಹಳ್ಳ ದಾಟುತ್ತಿದ್ದ ವೇಳೆ ದಾನೇಶ್ವರಿ ಸಿದ್ದಪ್ಪ ಕ್ಯಾಸರ್ (18) ಕೊಚ್ಚಿಕೊಂಡು ಹೋದರು.

ತಾಯಿ ಗುರುಬಾಯಿ ಸಿದ್ದಪ್ಪ ಕ್ಯಾಸರ ಜೊತೆ ಕೃಷಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದರು.

ಬೀದರ್ ಜಿಲ್ಲೆಯಲ್ಲಿ ಕಾರಂಜಾ ಜಲಾಶಯದಿಂದ ನೀರು ಹೊರಬಿಡಲಾಗಿದ್ದು, ಖಟಕಚಿಂಚೋಳಿ ಹೋಬಳಿಯ ಬರದಾಪುರ, ಡಾವರಗಾಂವ್ ಸೇರಿ ಇತರ ಗ್ರಾಮಗಳಲ್ಲಿ ಹಲವು ಮನೆ, ಬೆಳೆಗಳು ಜಲಾವೃತವಾಗಿವೆ.

ಉಡುಪಿ: ಭಾರಿ ಮಳೆ

ಉಡುಪಿ ವರದಿ: ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದೆ. ಕಾರ್ಕಳ, ಬ್ರಹ್ಮಾವರ, ಕುಂದಾಪುರ ತಾಲ್ಲೂಕುಗಳಲ್ಲಿ ಮಳೆ ಪರಿಣಾಮ ಹೆಚ್ಚಿದ್ದು, ವಿವಿಧ ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದೆ.ಮಾಳದಲ್ಲಿ 4.2 ಸೆಂ.ಮೀ ಮಳೆಯಾಗಿದೆ.

ಅಂಕೋಲಾ: ಕುಸಿದ ರಸ್ತೆ

ಅಂಕೋಲಾ ವರದಿ: ಉತ್ತರ ಕನ್ನಡ ಜಿಲ್ಲೆ ಅಂಕೋಲಾದಲ್ಲಿ ರಾಷ್ಟ್ರೀಯ ಹೆದ್ದಾರಿಯ 63ರ ಕಂಚಿನ ಬಾಗಿಲು ಕಿರು ಸೇತುವೆ ಬಳಿ ಶುಕ್ರವಾರ ರಸ್ತೆ ಭಾಗಶಃ ಕುಸಿದಿದೆ. ಸಂಚಾರ ವ್ಯತ್ಯಯವಾಗುವ ಆತಂಕವಿದೆ. ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ ಭೇಟಿ ನೀಡದ್ದು, ಕುಸಿದ ಪ್ರದೇಶದಲ್ಲಿ ಬ್ಯಾರಿಕೇಡ್ ಅಳವಡಿಸಿ, ಕಂದಕದ ಸಮೀಪ ವಾಹನಗಳು ಚಲಿಸದಂತೆ ನಿರ್ಬಂಧಿಸಲಾಗಿದೆ.

ಐವರ ರಕ್ಷಣೆ

ಕೊಪ್ಪಳ: ತಾಲ್ಲೂಕಿನ ಹಿರೇಹಳ್ಳ ಜಲಾಶಯದ ಹೊರಹರಿವು ಹೆಚ್ಚಿದೆ. ಕೋಳೂರು ಬಳಿ‌ ಹಳ್ಳದಲ್ಲಿ ಶುಕ್ರವಾರ ಬೆಳಿಗ್ಗೆ ಸಿಲುಕಿದ್ದ ಐವರು ರೈತರನ್ನು ಅಗ್ನಿಶಾಮಕದ ದಳ ಸಿಬ್ಬಂದಿ ರಕ್ಷಿಸಿದರು.

‘ದಡದಲ್ಲಿದ್ದ ಕೃಷಿ ಪಂಪ್‌ಸೆಟ್‌ ತೆಗೆದಿರಿಸಲು ಐವರು ಕುರಬರ ಹಳ್ಳಕ್ಕೆ ಇಳಿದಿದ್ದರು. ಏಕಾಏಕಿ ನೀರಿನ ಹರಿವು ಹೆಚ್ಚಾಗಿ, ಅಪಾಯಕ್ಕೆ ಸಿಲು ಕಿದ್ದರು’ ಎಂದು ಸ್ಥಳೀಯರು ತಿಳಿಸಿದರು‌.


ನಂದಿ ಗಿರಿಧಾಮದಲ್ಲಿ ಭೂ ಕುಸಿತ

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿ ಗಿರಿಧಾಮದ ಮಿರ್ಜಾ ಸರ್ಕಲ್ ಬಳಿಯ ತಿರುವಿನಲ್ಲಿ ಶುಕ್ರವಾರ ಭೂ ಕುಸಿತ ಸಂಭವಿಸಿದೆ. ಗಿರಿಧಾಮದ ರಸ್ತೆಯಲ್ಲಿ ರಾಶಿ ಮಣ್ಣು ಬಿದ್ದಿದೆ.

ಭೂ ಕುಸಿತವಾದ ಸ್ಥಳದ ಮೇಲೆ ಬೃಹತ್ ಬಂಡೆ ಇದ್ದು, ಮತ್ತಷ್ಟು ಮಣ್ಣು ಕುಸಿದರೆ ಬಂಡೆ ಮುಡುಕು ಹೊಸಹಳ್ಳಿ ಗ್ರಾಮದತ್ತ ಉರುಳುವ ಸಂಭವವಿದೆ. ಮಳೆಯ ಕಾರಣದಿಂದ ನಂದಿ ಗಿರಿಧಾಮದ ಅಲ್ಲಲ್ಲಿ ಸಣ್ಣ ಮಟ್ಟದಲ್ಲಿ ಭೂ ಕುಸಿತ ಸಂಭವಿಸಿದೆ. ಗಿರಿಧಾಮದ ಹಿಂಬದಿಯ ಕಣಿವೆಯಲ್ಲಿ ಭೂ ಕುಸಿತವಾದ ಪರಿಣಾಮ ನಂದಿ ಗ್ರಾಮದಿಂದ ಸುಲ್ತಾನ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಸಂಪರ್ಕಿಸುವ ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿದೆ. ಕಳೆದ ವರ್ಷವೂ ಭೂಕುಸಿತ ವಾಗಿತ್ತು.

ನಾಲ್ಕು ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದು ವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕಲಬುರಗಿ ಜಿಲ್ಲೆಗಳಿಗೆ ಇದೇ 10ರಂದು ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ.

ಇದೇ 11ರಂದು ಕಲಬುರಗಿ, ಯಾದಗಿರಿ, ವಿಜಯಪುರ, ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಯೆಲ್ಲೊ ಅಲರ್ಟ್‌ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT