ಭಾನುವಾರ, ಮೇ 16, 2021
22 °C

ರಾಜ್ಯದಲ್ಲಿ ಅತಿವೃಷ್ಟಿ: ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಸಿದ್ದರಾಮಯ್ಯ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದಲ್ಲಿ ಅತಿವೃಷ್ಟಿಯಿಂದ ಭಾರಿ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಹೀಗಾಗಿ, ಇದನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರ್ಕಾರ ಘೋಷಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘10ನೇ ತಾರೀಕಿನಿಂದ ಸತತವಾಗಿ ಮಳೆ ಸುರಿಯುತ್ತಿದೆ. ಕಂದಾಯ ಸಚಿವ ಕಾಟಾಚಾರಕ್ಕೆ ಮಳೆ ಹಾನಿ ಪ್ರದೇಶಗಳಿಗೆ ತೆರಳಿದ್ದಾರೆ. ಮುಖ್ಯಮಂತ್ರಿ ಹೋಗಿಯೇ ಇಲ್ಲ. ರಸ್ತೆ, ವಿದ್ಯುತ್ ಕಂಬ, ಮನೆಗಳು ಕೊಚ್ಚಿ ಹೋಗಿವೆ. ಈ ಸರ್ಕಾರ ಏನೂ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ಕೂಡಾ ನೆರವು ಕೊಡುತ್ತಿಲ್ಲ’ ಎಂದು ದೂರಿದರು.

‘ಕೃಷ್ಣಾ ನದಿ ಪ್ರವಾಹ ಬಂದಿದೆ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಲ್ಲಿಗೆ ಹೋಗುವುದು ಬಿಟ್ಟು, ಶಿರಾದಲ್ಲಿ ಚುನಾವಣಾ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಕಳೆದ ವರ್ಷ ಬಿಹಾರಕ್ಕೆ ಮೋದಿ ಭೇಟಿ ನೀಡಿದರೂ ಕರ್ನಾಟಕಕ್ಕೆ ಬರಲಿಲ್ಲ’ ಎಂದರು.

‘ರಾಜ್ಯ ಸರ್ಕಾರದ ಮಾತಿಗೆ ಕೇಂದ್ರ ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಅತಿವೃಷ್ಟಿಯಿಂದ ಈ ಬಾರಿ ₹ 10 ಸಾವಿರ ಕೋಟಿಯಿಂದ ₹ 15 ಸಾವಿರ ಕೋಟಿಯಷ್ಟು ನಷ್ಟ ಉಂಟಾಗಿದೆ’ ಎಂದರು.

‘ಇಷ್ಟು ದಪ್ಪ ಚರ್ಮದ ಸರ್ಕಾರವನ್ನು ನಾನೆಂದೂ ನೋಡಿಲ್ಲ. ಎಷ್ಟೇ ಪತ್ರ ಬರೆದರೂ ಉತ್ತರವಿಲ್ಲ. ಎಲ್ಲರೂ ಹಣ ಮಾಡಲು ಕುಳಿತು ಬಿಟ್ಟಿದ್ದಾರೆ. ಚುನಾವಣೆ ಬಂದಾಗ ದುಡ್ಡು ಖರ್ಚು ಮಾಡಿ ಗೆಲ್ಲಬಹುದು ಎಂದುಕೊಂಡಿದ್ದಾರೆ. ಆದರೆ, ಈ ಬಾರಿ ಜನ ಬಿಜೆಪಿಗೆ ಪಾಠ ಕಲಿಸುತ್ತಾರೆ’ ಎಂದರು.

‘ಇವರಿಗೆ ಧೈರ್ಯವೂ ಇಲ್ಲ ದಮ್ಮೂ ಇಲ್ಲ. 26 ಜನ ಲೋಕಸಭಾ ಸದಸ್ಯರಿದ್ದಾರೆ. ಒಮ್ಮೆಯಾದರೂ ಜನರಿಗೆ ಅನ್ಯಾಯ ಆಗುತ್ತಿದೆ ಎಂದು ಕೇಂದ್ರದ ಬಳಿ ಹೇಳಿದ್ದಾರಾ. ಕೇಂದ್ರದ ಎದುರು ಕೊಲೆ ಬಸವನ ರೀತಿಯಲ್ಲಿ ತಲೆ ಅಲ್ಲಾಡಿಸುತ್ತಾರೆ. ಮುಖ್ಯಮಂತ್ರಿಗೂ ಧೈರ್ಯ ಇಲ್ಲ’ ಎಂದು ವ್ಯಂಗ್ಯವಾಡಿದರು.

‘ಕನ್ನಡದಲ್ಲಿ ಟ್ವೀಟ್ ಮಾಡಿದ ತಕ್ಷಣ ಕರ್ನಾಟಕದ ಪರ ಪ್ರಧಾನಿ ಇದ್ದಾರೆ ಎಂದಲ್ಲ. ಯಾರೂ ಬೇಕಾದರೂ, ಯಾವ ಭಾಷೆಯಲ್ಲಾದರೂ ಟ್ವೀಟ್ ಮಾಡಬಹುದು. ಟ್ವೀಟ್ ಮಾಡಿದ ತಕ್ಷಣ ಕರ್ನಾಟಕದ ಪರ ಇದ್ದಾರೆ ಎಂದಲ್ಲ’ ಎಂದರು.

‘ಡಿ.ಜೆ. ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜೊತೆ ನಾನು ಮಾತನಾಡುತ್ತೇನೆ’ ಎಂದೂ ಸಿದ್ದರಾಮಯ್ಯ ಹೇಳಿದರು.

ಆರ್‌.ಆರ್‌. ನಗರದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾ ನಿಯಮ  ಉಲ್ಲಂಘಿಸಿದ್ದಾರೆಂದು ಪಕ್ಷದ ಅಭ್ಯರ್ಥಿ ಕುಸುಮಾ ವಿರುದ್ಧ ಪ್ರಕರಣ ದಾಖಲಿಸಿದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಪೊಲೀಸರನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ನಾಮಪತ್ರ ಸಲ್ಲಿಸುವ ದಿನ ನಾನು ಅಲ್ಲಿಗೆ ಹೋಗಿದ್ದೆ 11:45ಕ್ಕೆ. ಆದರೆ, ಎಫ್‌ಐಆರ್‌ಲ್ಲಿ 11:15  ಎಂದು ನಮೂದಿಸಲಾಗಿದೆ’ ಎಂದರು.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಕಣ್ಣೀರು ಹಾಕಿದ ಬಗ್ಗೆ ಮಾತನಾಡಿದ ಅವರು, ‘ಕೊರೊನಾ ಇದ್ದಾಗ ಇವರೇ ಹೋಗಬೇಕು ಎಂದು ನಾನು ಹೇಳುವುದಿಲ್ಲ. ಆದರೆ, ಸಂಪುಟದ ಸಚಿವರಿಗೆ ಜವಾಬ್ದಾರಿ ಇದೆ. ಅವರು ಹೋಗಬೇಕಲ್ಲವೇ. ಇಲ್ಲಿ ಇವರು ಕಣ್ಣೀರು ಹಾಕಿದರೆ, ಅಲ್ಲಿ ಕಣ್ಣೀರು ಹಾಕುತ್ತಿರುವವರನ್ನು ಕೇಳುವವರು ಯಾರು’ ಎಂದು ಪ್ರಶ್ನಿಸಿದರು.

‘ಪ್ರಜಾಪ್ರಭುತ್ವದಲ್ಲಿ ಇದಕ್ಕೆಲ್ಲ ಅವಕಾಶ ಇಲ್ಲ. ಹಾಗಾದರೆ, ವಯಸ್ಸಾದವರು ರಾಜೀನಾಮೆ ಕೊಡಲಿ. ಜನರೇನು ನೀವೇ ಇರಿ, ನೀವೇ  ಇರಿ ಎಂದು ಒತ್ತಾಯ ಮಾಡುತ್ತಾ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು