ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ವಿವಿಧೆಡೆ ಧಾರಾಕಾರ ಮಳೆ; ಸಿಡಿಲಿಗೆ ಇಬ್ಬರು ಸಾವು

ಭಟ್ಕಳದಲ್ಲಿ 4 ದೋಣಿಗಳಿಗೆ ಹಾನಿ
Last Updated 17 ಮೇ 2022, 20:06 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಾದ್ಯಂತ ಮಂಗಳವಾರ ಬಹುತೇಕ ಮೋಡ ಕವಿದ ವಾತಾವರಣವಿದ್ದು, ಸೋಮವಾರ ರಾತ್ರಿ, ಮಂಗಳವಾರ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ಹಳಿಯಾಳ ಸೇರಿ ವಿವಿಧೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ರಾಜಧಾನಿ ಬೆಂಗಳೂರಿನಲ್ಲೂ ಜೋರು ಮಳೆ ಆಯಿತು. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನವೇ ಹಲವೆಡೆ ತುಂತುರು ಮಳೆ ಸುರಿಯಿತು. ಬಹುತೇಕ ಕಡೆ ಗುಡುಗು ಸಹಿತ ಮಳೆಯಾಗಿದ್ದು, ರಸ್ತೆಗಳಲ್ಲಿ ನೀರು ಉಕ್ಕಿ ಹರಿಯಿತು.

ಬೀದರ್‌, ಯಾದಗಿರಿಯಲ್ಲಿ ಸಿಡಿಲು ಬಡಿದು ತಲಾ ಒಬ್ಬರು ಕೃಷಿ ಕಾರ್ಮಿಕರು ಮೃತಪಟ್ಟರೆ, ಕಲಬುರಗಿಯಲ್ಲಿ ಒಬ್ಬರು ಗಾಯಗೊಂಡರು. ಈ ಭಾಗದಲ್ಲಿ ಸಿಡಿಲಿನಿಂದ ಎರಡು ಎತ್ತು, ಒಂದು ಹಸು, 30 ಮೇಕೆಗಳೂ ಮೃತಪಟ್ಟಿವೆ.

ಹಳೆ ಮೈಸೂರು ಭಾಗದ ಬಹುತೇಕ ಜಿಲ್ಲೆಗಳಲ್ಲಿ ಬಿರುಸಿನ ಮಳೆಯಾಗಿದೆ. ಜಿಲ್ಲಾ ಕೇಂದ್ರದಲ್ಲಿ ಬೋಗಾದಿ ಕೆರೆ ತುಂಬಿ ಕೋಡಿ ಬಿದ್ದಿತು. ನೀರಿನ ರಭಸಕ್ಕೆ ನಾಗಲಿಂಗೇಶ್ವರ ದೇಗುಲ ಸಮೀಪ ಲಿಂಗಾಂಬುಧಿ ಕೆರೆಗೆ ಸಂಪರ್ಕ ಬೆಸೆಯುವ ರಾಜಕಾಲುವೆ ಸೇತುವೆ ಕೊಚ್ಚಿಕೊಂಡು ಹೋಗಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿಸರ್ಕಾರಿ ಶಾಲೆ ಆವರಣ ಜಲಾವೃತಗೊಂಡಿದ್ದು, ವಿದ್ಯಾರ್ಥಿಗಳು ಪರದಾಡಿದರು. ನಾಗಮಂಗಲ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಕೆರೆ ಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದವು.

ಉತ್ತರ ಕರ್ನಾಟಕದ ಉತ್ತರಕನ್ನಡ ಜಿಲ್ಲೆ ಕುಮಟಾ ತಾಲ್ಲೂಕಿನಲ್ಲಿ 4 ಮನೆಗಳಿಗೆ ಹಾನಿಯಾಗಿದೆ. ಭಟ್ಕಳ ಬಂದರಿನಲ್ಲಿ ತಡರಾತ್ರಿ ಸಮುದ್ರದ ಅಲೆಗಳಿಗೆ ಸಿಲುಕಿ ನಾಲ್ಕು ದೋಣಿಗಳಿಗೆ ಹಾನಿಯಾಗಿದೆ. ಒಂದು ದೋಣಿ ಸಂಪೂರ್ಣ ಮುಳುಗಿದೆ. ಹಾವೇರಿ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಭಾರಿ ಗಾಳಿ–ಮಳೆಗೆ ಒಟ್ಟು 78 ಮನೆಗಳಿಗೆ ಹಾನಿಯಾಗಿದೆ ಎಂದು ವರದಿ ತಿಳಿಸಿದೆ.

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಕಾರಿಂಜೇಶ್ವರ ದೇವಸ್ಥಾನ ಬಳಿ ಬೆಟ್ಟದಿಂದ ಬೃಹತ್ ಬಂಡೆ ಉರುಳಿದ್ದು, ಇದರ ರಭಸಕ್ಕೆ ಹಲವು ಮರಗಳು ಉರುಳಿದವು. ಕಾರಿಂಜ ಬೈಲು ಮತ್ತು ರಥಬೀದಿ ಸಂಪರ್ಕ ರಸ್ತೆಯಲ್ಲಿ ಸಂಚಾರ ಸ್ಥಗಿತವಾಗಿತ್ತು.

ಉಡುಪಿ ಜಿಲ್ಲೆಯಲ್ಲಿ ಸಿಡಿಲು ಬಡಿದು ಮಹಿಳೆ ಗಾಯಗೊಂಡರು. ಕುಂದಾಪುರ, ಕಾರ್ಕಳ, ಬ್ರಹ್ಮಾವರದಲ್ಲಿ15 ಮನೆಗಳಿಗೆ ಹಾನಿಯಾಗಿದೆ.ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT