ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ, ರವೀಂದ್ರ ಕಲಾಕ್ಷೇತ್ರದಲ್ಲಿ ಸಂಭ್ರಮ

ರಾಜ್ಯೋತ್ಸವ ಪ್ರಶಸ್ತಿ: ವಯೋಮಿತಿ‌ ನಿಗದಿ ಬದಲಾವಣೆಗೆ ಸಿ.ಎಂ ಸೂಚನೆ
Last Updated 1 ನವೆಂಬರ್ 2022, 15:52 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿಗೆ 60 ವರ್ಷದ ವಯೋಮಿತಿ ನಿಗದಿ ಪಡಿಸಿರುವುದು ಸರಿಯಲ್ಲ. ಈ ವಯೋಮಿತಿ ಬದಲಾವಣೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ರಾತ್ರಿ 67 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮೊದಲು ಮಾತನಾಡಿದ ಅವರು, ಸಣ್ಣ ವಯಸ್ಸಿನಲ್ಲಿ ಸಾಧನೆ ಮಾಡಿದರೂ 60 ವರ್ಷದ ತನಕ ಪ್ರಶಸ್ತಿಗೆ ಕಾಯುವ ಸ್ಥಿತಿಯಿದೆ.

ಸಣ್ಣ ವಯಸ್ಸಿನಲ್ಲಿಯೇ ಸಾಧನೆ ಮಾಡಿದವರನ್ನು ಗುರುತಿಸಿದರೆ ಇತರರಿಗೂ ಪ್ರೇರಣೆ ಆಗಲಿದೆ. ವಯಸ್ಸಿನ ಗಡಿಮಿತಿ ಬೇಡ. ಈ ಮಿತಿಹೇರಿ ಸರ್ಕಾರವು ತಪ್ಪು ಮಾಡಿದೆ. ಈ ಕುರಿತು ಹಿಂದಿನ ಕನ್ನಡ ಮತ್ತು ಸಂಸ್ಕೃತಿಯ ಇಲಾಖೆ ಸಚಿವರನ್ನು ಪ್ರಶ್ನಿಸಿದ್ದೆ ಎಂದರು.
ಇದುವರೆಗೂ ರಾಜ್ಯೋತ್ಸವ ಪಡೆದವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಪರ್ಕಿಸಿ ಅವರ ಕುರಿತು ಕೃತಿ ತರಬೇಕು. ಅವರ ಅನುಭವ ಹಾಗೂ ನಾಡು ಕಟ್ಟುವ ಬಗೆ ಕೃತಿಯಲ್ಲಿ ಇರಬೇಕು. ಸಾಹಿತಿಗಳು, ವಕೀಲರು, ಕವಿಗಳು, ವೈದ್ಯರು ಹಾಗೂ ಎಂಜಿನಿಯರ್‌ಗಳು ಸೇರಿ ನಾಡು ಕಟ್ಟೋಣ ಎಂದರು.

ವಯಸ್ಸಿಗೂ ಸಾಧನೆಗೂ ಸಂಬಂಧ ಇಲ್ಲ. ಯಾವ ವಯಸ್ಸಿನಲ್ಲೂ ಸಾಧನೆ ಸಾಧ್ಯವಿದೆ. ಸಾಧಕರು ಸಣ್ಣ ವಯಸ್ಸಿನಲ್ಲೇ ಬಿಟ್ಟು ಹೋಗುತ್ತಿದ್ದಾರೆ. ದಿವಂಗತ ಪುನೀತ್ ಸಣ್ಣ ವಯಸ್ಸಿನಲ್ಲೇ ಸಾಧನೆ ಮಾಡಿದ್ದವರು. ಪ್ರತಿ ಹಳ್ಳಿಯಲ್ಲೂ ಅವರನ್ನೂ ಗೌರವಿಸುತ್ತಿದ್ದಾರೆ. ಅದಕ್ಕೆ ಅವರ ಮುಗ್ಧತೆ ಹಾಗೂ ಸೇವಾ ಮನೋಭಾವ ಸಾಕ್ಷಿ ಎಂದು ನುಡಿದರು.

ಈ ಬಾರಿಯೂ ತಮ್ಮಷ್ಟಕ್ಕೆ ಸಾಧನೆ ಮಾಡುತ್ತಿದ್ದವರನ್ನು ಗುರುತಿಸಿದ್ದೇವೆ. ಪ್ರಶಸ್ತಿಯೇ ಮೆರುಗು ಹೆಚ್ಚಿಸಿಕೊಂಡಿದೆ. ಇಂದು ದುಡ್ಡುಕೊಟ್ಟು ಡಾಕ್ಟರೇಟ್ ಪದವಿ ಪಡೆಯುತ್ತಿದ್ದಾರೆ. ಶಾಲೆಯಷ್ಟೇ ಜಾಗದಲ್ಲಿ ವಿವಿಗಳು ತಲೆಯೆತ್ತಿವೆ ಎಂದ ಅವರು, ಬದುಕಿನ ಕೊನೆಯ ತನಕ ಮುಗ್ಧತೆ ಉಳಿಸಿಕೊಳ್ಳಬೇಕು. ಆತ್ಮಸಾಕ್ಷಿಯಂತೆ ಬದುಕಬೇಕು ಎಂದು ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ‌ಸಚಿವ ಸುನೀಲ್‌ಕುಮಾರ್ ಮಾತನಾಡಿ, ಇಸ್ರೋ ಮಾಜಿ ನಿರ್ದೇಶಕ ಕೆ.ಶಿವನ್ ಅವರಿಂದ ಹಿಡಿದು ಪೌರಕಾರ್ಮಿಕ ಮಹಿಳೆಯವರೆಗೆ ಸಾಧನೆ ಮಾಡಿದವರನ್ನು ಗುರುತಿಸಲಾಗಿದೆ. ಸಮಿತಿಯೇ ಸಾಧಕರನ್ನು ಹುಡುಕಿ‌ ಪ್ರಶಸ್ತಿ ನೀಡಿದೆ. ಸಮತೋಲನಾ ಪಟ್ಟಿ ಇದಾಗಿತ್ತು ಎಂದು ಹೇಳಿದರು.

ಅರ್ಜಿ ಹಾಕಿದವರಿಗಿಂತ ತಮ್ಮಷ್ಟಕ್ಕೆ ಇದ್ದವರನ್ನು ಹುಡುಕಿ ಪ್ರಶಸ್ತಿ ನೀಡಲಾಗಿದೆ. 67 ಮಂದಿಗೆ ಪಟ್ಟಿ ಸೀಮಿತ ಮಾಡುವುದು ಕಷ್ಟಕರವಾಗಿತ್ತು ಎಂದರು.ಅ.28ರಂದು ಒಂದೂವರೆ ಕೋಟಿ ಮಂದಿ ಗಾಯನದಲ್ಲಿ ‌ಭಾಗಿಯಾಗಿದ್ದರು ಎಂದರು.

ಇಲಾಖೆ‌ ಕಾರ್ಯದರ್ಶಿ ಡಾ.ಎನ್.ಮಂಜುಳಾ ಮಾತನಾಡಿ, 15 ಸಾವಿರ ಕಲಾವಿದರಿಗೆ ಪಿಂಚಣಿ ನೀಡಲಾಗುತ್ತಿದೆ. ಕಲಾವಿದರ ಪಿಂಚಣಿಯನ್ನು ₹ 1,500ರಿಂದ ₹ 2 ಸಾವಿರಕ್ಕೆ ಹೆಚ್ಚಿಸಲಾಗಿದೆ. 16 ಸಾವಿರ ಕಲಾವಿದರ ದತ್ತಾಂಶ ಸಂಗ್ರಹಿಸುವ ಹಾಗೂ ಗುರುತಿನ ಚೀಟಿ ವಿತರಣೆ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ, ಶಾಸಕ ಉದಯ ಗರುಡಾಚಾರ್, ವಿಧಾ‌ನ ಪರಿಷತ್ ಸದಸ್ಯ ಶರವಣ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT