ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತಿ ಬಳಿಕವೂ ಮುಖ್ಯ ಎಂಜಿನಿಯರ್ ಹುದ್ದೆ: ಗೌಡಯ್ಯ ಸೇವಾವಧಿ ಮತ್ತೆ ವಿಸ್ತರಣೆ?

ಪುನಃ ಅಧಿಕಾರ ಹಿಡಿಯಲು ಕಸರತ್ತು
Last Updated 3 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ನಿವೃತ್ತಿ ಬಳಿಕವೂ ಆರು ತಿಂಗಳಿನಿಂದ ಕರ್ನಾಟಕ ಪೊಲೀಸ್‌ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ (ಕೆಎಸ್‌ಪಿಎಚ್‌ಸಿ) ಮುಖ್ಯ ಎಂಜಿನಿಯರ್‌ ಹುದ್ದೆಯಲ್ಲಿದ್ದ ಎನ್‌.ಜಿ. ಗೌಡಯ್ಯ ಸೇವಾವಧಿಯನ್ನು ಮತ್ತೊಂದು ಅವಧಿಗೆ ವಿಸ್ತರಿಸಲು ತೆರೆಮರೆಯ ಸಿದ್ಧತೆ ನಡೆದಿದೆ.

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದಡಿ ಭ್ರಷ್ಟಾಚಾರ ನಿಗ್ರಹ ದಳದಿಂದ (ಎಸಿಬಿ) ದಾಳಿಗೊಳಗಾಗಿದ್ದ ಈ ಅಧಿಕಾರಿಯ ಸೇವಾವಧಿ ವಿಸ್ತರಣೆಗೆ ಅಧಿಕಾರಿಗಳ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.

ಕೆಎಸ್‌ಪಿಎಚ್‌ಸಿ ಮುಖ್ಯ ಎಂಜಿನಿಯರ್‌ ಹುದ್ದೆಯಲ್ಲಿದ್ದ ಗೌಡಯ್ಯ, ಈ ವರ್ಷದ ಫೆಬ್ರುವರಿ 28ರಂದು ವಯೋನಿವೃತ್ತಿ ಹೊಂದಿದ್ದರು. ‘ನಿಯಮಗಳಲ್ಲಿ ಅವಕಾಶವಿಲ್ಲದಿದ್ದರೂ ನಿಗಮಕ್ಕೆ ಅವರ ಸೇವೆಯ ಅಗತ್ಯವಿದೆ’ ಎಂಬ ಕಾರಣ ನೀಡಿ ಮಾರ್ಚ್‌ 1ರಿಂದ ಆರು ತಿಂಗಳ ಕಾಲ ಸೇವಾವಧಿ ವಿಸ್ತರಿಸಲಾಗಿತ್ತು.

‘ಆಗಸ್ಟ್‌ 31ಕ್ಕೆ ಸೇವಾ ಅವಧಿ ಅಂತ್ಯಗೊಂಡಿದ್ದು, ನಿಗಮದ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ರಘುನಂದನ್‌ ಸಿ.ಜಿ. ಅವರಿಗೆ ಹುದ್ದೆಯ ಪ್ರಭಾರವನ್ನು ವಹಿಸಲಾಗಿದೆ. ಆದರೆ, ರಾಜಕೀಯ ಪ್ರಭಾವ ಬಳಸಿಕೊಂಡು ಪುನಃ ಅದೇ ಹುದ್ದೆಗೆ ಬರಲು ಗೌಡಯ್ಯ ಯತ್ನಿಸುತ್ತಿದ್ದಾರೆ. ಸಚಿವ ಸಂಪುಟದ ಮುಂದಿನ ಸಭೆಯಲ್ಲೇ ಅವರ ಸೇವಾ ಅವಧಿ ವಿಸ್ತರಣೆಯ ಪ್ರಸ್ತಾವಕ್ಕೆ ಒಪ್ಪಿಗೆ ಪಡೆಯುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಅರ್ಹರಿದ್ದರೂ ನಿವೃತ್ತರಿಗೆ ಮಣೆ: ‘ಲೋಕೋಪಯೋಗಿ, ಜಲ ಸಂಪನ್ಮೂಲ, ನಗರಾಭಿವೃದ್ಧಿ ಇಲಾಖೆಗಳ ಹಲವು ಮಂದಿ ಮುಖ್ಯ ಎಂಜಿನಿ ಯರ್‌ಗಳಿಗೆ ಹುದ್ದೆ ತೋರಿಸಿಲ್ಲ. ಸೇವೆಯಲ್ಲಿರುವ ಅಧಿಕಾರಿಗಳಿಗೆ ಹುದ್ದೆ ನೀಡದೆ, ನಿವೃತ್ತಿ ಹೊಂದಿದವರ ಸೇವಾ ಅವಧಿ ವಿಸ್ತರಣೆ ಮಾಡುವುದು ಸರಿಯಲ್ಲ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

‘2022ರ ಮಾರ್ಚ್‌ನಲ್ಲಿ ಗೌಡಯ್ಯ ಅವರ ಸೇವೆ ಮುಂದುವರಿಸುವಂತೆ ನಿಗಮದಿಂದ ಯಾವ ಕೋರಿಕೆಯೂ ಸಲ್ಲಿಕೆಯಾಗಿರಲಿಲ್ಲ. ಆದರೆ, ಒಳಾಡಳಿತ ಇಲಾಖೆಯ ಮೂಲಕ ಟಿಪ್ಪಣಿಯೊಂದನ್ನು ಸಲ್ಲಿಸಿ ಈ ಅಧಿಕಾರಿಯ ಸೇವಾವಧಿ ವಿಸ್ತರಣೆಗೆ ಕೋರಲಾಗಿತ್ತು. ಈ ಬಾರಿಯೂ ಅಂತಹ ಪ್ರಯತ್ನ ನಡೆಯುತ್ತಿದೆ’ ಎಂದು ಅಧಿಕಾರಿಯೊಬ್ಬರು ದೂರಿದರು.

ನಿವೃತ್ತ ಅಧಿಕಾರಿಯ ಸೇವಾ ವಧಿಯನ್ನು ಮತ್ತೊಮ್ಮೆ ವಿಸ್ತರಿಸುವ ಪ್ರಸ್ತಾವದ ಕುರಿತು ಪ್ರತಿಕ್ರಿಯೆ ಪಡೆಯಲು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ, ಮೊಬೈಲ್‌ ಕರೆ ಮತ್ತು ಎಸ್‌ಎಂಎಸ್‌ಗಳಿಗೆ ಅವರಿಂದ ಪ್ರತಿಕ್ರಿಯೆ ಲಭ್ಯವಾಗಲಿಲ್ಲ.

ಎಸಿಬಿ ದಾಳಿಗೆ ಒಳಗಾಗಿದ್ದ ಅಧಿಕಾರಿ
2018ರ ಅಕ್ಟೋಬರ್‌ನಲ್ಲಿ ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಹುದ್ದೆಯಲ್ಲಿದ್ದ ಗೌಡಯ್ಯ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿಮಾಡಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ಹಣ, ಬ್ಯಾಂಕ್‌ ಠೇವಣಿ, ಸ್ಥಿರಾಸ್ತಿಯನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣದ ತನಿಖೆ ಅಂತಿಮ ಹಂತದಲ್ಲಿದೆ.

ದಾಳಿಯ ಬಳಿಕ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. ಅಮಾನತು ತೆರವಾದ ಬಳಿಕ ಗೌಡಯ್ಯ ಅವರನ್ನು ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್‌ ಹುದ್ದೆಗೆ ನಿಯೋಜಿಸಲಾಗಿತ್ತು. ಆದರೆ, ‘ಈ ಅಧಿಕಾರಿ ಸೇವೆ ಬಿಬಿಎಂಪಿಗೆ ಬೇಡ’ ಎಂದು ಪಾಲಿಕೆ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT