ಮಂಗಳವಾರ, ಜನವರಿ 31, 2023
27 °C
ಕವಿವಿಯಲ್ಲಿ ಎನ್‌ಇಪಿ ಅಳವಡಿಕೆಯಲ್ಲಿ ಗೊಂದಲ: ಮೂರನೇ ಸೆಮಿಸ್ಟರ್‌ ವಿದ್ಯಾರ್ಥಿಗಳ ಕಳವಳ

ಧಾರವಾಡ | ಇನ್ನೂ ಬಾರದ ಕರ್ನಾಟಕ ವಿವಿಯ ಎರಡು ಸೆಮಿಸ್ಟರ್‌ಗಳ ಫಲಿತಾಂಶ

ಇ.ಎಸ್.ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ನೂತನ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸಿದ ಕರ್ನಾಟಕ ವಿಶ್ವವಿದ್ಯಾಲಯವು ಎರಡು ಸೆಮಿಸ್ಟರ್‌ಗಳ ಫಲಿತಾಂಶವನ್ನು ಪ್ರಕಟಿಸಲು ಏದುಸಿರು ಬಿಡುತ್ತಿದೆ.

ಕವಿವಿ ಎನ್‌ಇಪಿಯನ್ನು ಅಳವಡಿಸಿಕೊಂಡ ರಾಜ್ಯದ ಮೊದಲ ವಿಶ್ವವಿದ್ಯಾಲಯ ಎಂದು ಅಧಿಕಾರಿಗಳು ಹೇಳಿಕೊಂಡಿದ್ದರು. ಎನ್‌ಇಪಿ ಅಡಿ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಇದೀಗ ಮೂರನೇ ಸೆಮಿಸ್ಟರ್‌ ಪೂರ್ಣಗೊಳಿಸುವ ಹಂತದಲ್ಲಿದ್ದಾರೆ. ಆದರೆ, ಈವರೆಗೂ ಮೊದಲ ಹಾಗೂ ಎರಡನೇ ಸೆಮಿಸ್ಟರ್‌ ಫಲಿತಾಂಶಗಳು ಬಾರದೆ, ಅವರೆಲ್ಲರೂ ಗೊಂದಲದಲ್ಲಿದ್ದಾರೆ.

ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ವ್ಯಾಪ್ತಿ ಹೊಂದಿರುವ ವಿವಿ ಅಡಿ 270 ಕಾಲೇಜುಗಳಿವೆ. ಸುಮಾರು 40 ಸಾವಿರ ವಿದ್ಯಾರ್ಥಿಗಳು ಬಿ.ಎ, ಬಿಎಸ್ಸಿ ಹಾಗೂ ಬಿ.ಕಾಂ. ಪದವಿ ಪಡೆಯುತ್ತಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಮೊದಲ ಸೆಮಿಸ್ಟರ್‌ ಹಾಗೂ ಸೆಪ್ಟೆಂಬರ್‌ನಲ್ಲಿ ಎರಡನೇ ಸೆಮಿಸ್ಟರ್ ಪರೀಕ್ಷೆ ಬರೆದಿದ್ದರು. 2023ರ ಜನವರಿಯಲ್ಲಿ ಮೂರನೇ ಸೆಮಿಸ್ಟರ್ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದಾರೆ. ಆದರೆ, ಎರಡು ಸೆಮಿಸ್ಟರ್‌ಗಳ ಫಲಿತಾಂಶ ಏನು ಎಂಬುದೇ ಇವರಿಗೆ ತಿಳಿಯದಾಗಿದೆ.

‘ದಾವಣಗೆರೆ ವಿಶ್ವವಿದ್ಯಾಲಯವು ಪರೀಕ್ಷೆ ನಡೆಸಿದ 10 ನಿಮಿಷದೊಳಗೆ ಫಲಿತಾಂಶ ಪ್ರಕಟಿಸಿ, ದಾಖಲೆ ನಿರ್ಮಿಸಿದ ಉದಾಹರಣೆ ನಮ್ಮ ಮುಂದಿದೆ. ಆದರೆ, ಸೆಮಿಸ್ಟರ್‌ಗಳೇ ಮುಗಿದರೂ ಕವಿವಿ ಫಲಿತಾಂಶ ಪ್ರಕಟಿಸಿಲ್ಲ. ಹೀಗಾದರೆ, ಎನ್‌ಇಪಿ ಜಾರಿಯಲ್ಲಿ ಮೊದಲಾದರೆ ಏನು ಪ್ರಯೋಜನ’ ಎಂದು ವಿದ್ಯಾರ್ಥಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

‘ಸಮಗ್ರ ವಿಶ್ವವಿದ್ಯಾಲಯ ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್‌) ಜತೆಗೆ ಪರೀಕ್ಷೆ ನಡೆಸಬೇಕು ಎಂಬುದು ಎನ್‌ಇಪಿ ನಿಯಮ. ಆದರೆ, ಕವಿವಿಯ ತಂತ್ರಾಂಶ ತಡವಾಗಿ ಅಭಿವೃದ್ಧಿಗೊಂಡ ಪರಿಣಾಮ ಎರಡನೇ ಸೆಮಿಸ್ಟರ್ ಪರೀಕ್ಷೆ ಮುಗಿದರೂ, ಮೊದಲ ಸೆಮಿಸ್ಟರ್‌ನ ಪತ್ರಿಕೆಗಳ ಮೌಲ್ಯಮಾಪನ ಆರಂಭಿಸಿರಲಿಲ್ಲ. ಬಳ್ಳಾರಿ, ದಾವಣಗೆರೆ, ಬೆಂಗಳೂರು ವಿಶ್ವವಿದ್ಯಾಲಯಗಳು ತಂತ್ರಾಂಶ ಅಭಿವೃದ್ಧಿಪಡಿಸಿಕೊಂಡು ಪರೀಕ್ಷೆಯನ್ನು ಸುಗಮವಾಗಿ ನಡೆಸಿವೆ’ ಎಂದು ಉಪನ್ಯಾಸಕರೊಬ್ಬರು ತಿಳಿಸಿದರು.

‘ಮೌಲ್ಯಮಾಪನ ವಿಳಂಬದಿಂದಾಗಿ ಸುಮಾರು 4.5 ಲಕ್ಷ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮತ್ತು ಅದರ ಮಾಹಿತಿ ತಂತ್ರಾಂಶದಲ್ಲಿ ಅಳವಡಿಸುವ ಹೊಣೆ ಮೌಲ್ಯಮಾಪಕರ ಮೇಲಿದೆ. ಈ ಮೊದಲ ವ್ಯವಸ್ಥೆಯಲ್ಲಿ ನಿತ್ಯ ಒಂದು ಸಾವಿರ ಪತ್ರಿಕೆಗಳ ದಾಖಲಾತಿ ನಡೆದರೆ, ಈಗ ಸರ್ವರ್ ಸಮಸ್ಯೆಯಿಂದ ನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳ ಅಂಕಗಳು ದಾಖಲಾಗುತ್ತಿವೆಯಷ್ಟೇ. ಇದರಿಂದ 10 ದಿನಗಳಲ್ಲಿ ಮುಗಿಯಬೇಕಿದ್ದ ಮೌಲ್ಯಮಾಪನ, 30ರಿಂದ 45 ದಿನಗಳವರೆಗೆ ಸಾಗುತ್ತಿದೆ. ಇದರ ನೇರ ಪರಿಣಾಮ ಬೋಧನೆ ಮೇಲಾಗುತ್ತಿದೆ. ತರಗತಿಯಲ್ಲಿ ಬೋಧಕರಿಲ್ಲ. ಹೀಗಾಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಪ್ರಾಚಾರ್ಯರೊಬ್ಬರು ಪರಿಸ್ಥಿತಿ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.