ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Live | ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಕ್ಷೇತ್ರವಾರು ಫಲಿತಾಂಶದ ಸಂಪೂರ್ಣ ವಿವರ ಇಲ್ಲಿದೆ
LIVE

ರಾಜ್ಯದ 5 ನಗರ ಸಭೆಗಳು ಸೇರಿ ಅವಧಿಪೂರ್ಣಗೊಂಡಿರುವ 58 ನಗರ ಸ್ಥಳೀಯ ಸಂಸ್ಥೆಗಳು ಮತ್ತು 59 ಗ್ರಾಮ ಪಂಚಾಯಿತಿಗಳಿಗೆ ಸೋಮವಾರ ನಡೆದ ಚುನಾವಣೆಯ ಮತಗಳ ಎಣಿಕೆ ಇಂದು ನಡೆಯಿತು. ಬಿಜೆಪಿ ಮೂರು ನಗರಸಭೆಗಳಲ್ಲಿ ಅಧಿಕಾರ ಹಿಡಿಯುವುದು ಖಚಿತವಾಗಿದ್ದು, ಹೊಸಪೇಟೆ ಮತ್ತು ಶಿರಾದಲ್ಲಿ ಅತಂತ್ರ ಪರಿಸ್ಥಿತಿ ಎದುರಾಗಿದೆ.ಮತಗಳ ಎಣಿಕೆ ಬೆಳಿಗ್ಗೆ 8ಕ್ಕೆ ಆಯಾ ನಗರ ಸ್ಥಳೀಯ ಸಂಸ್ಥೆಗಳ ಕೇಂದ್ರ ಸ್ಥಾನದಲ್ಲೇ ಆರಂಭವಾಗಿದೆ. ಚಿಕ್ಕಮಗಳೂರು, ತುಮಕೂರು ಜಿಲ್ಲೆಯ ಶಿರಾ, ಗದಗ–ಬೆಟಗೇರಿ, ಬೆಂಗಳೂರು ನಗರ ಜಿಲ್ಲೆಯ ಹೆಬ್ಬಗೋಡಿ, ಹೊಸಪೇಟೆ ನಗರಸಭೆಗಳು, ವಿವಿಧ ಜಿಲ್ಲೆಗಳ 19 ಪುರಸಭೆಗಳು ಮತ್ತು 34 ಪಟ್ಟಣ ಪಂಚಾಯಿತಿಗಳ ಫಲಿತಾಂಶ ಹೊರಬಂದಿದೆ. 1,184 ವಾರ್ಡ್‌ಗಳಲ್ಲಿ 4,961 ಅಭ್ಯರ್ಥಿಗಳು ಚುನಾವಣೆ ಎದುರಿಸಿದ್ದಾರೆ. ಅಲ್ಲದೆ, ನಗರ ಸ್ಥಳೀಯ ಸಂಸ್ಥೆಗಳ 9 ವಾರ್ಡ್‌ಗಳಿಗೆ ಮತ್ತು ವಿವಿಧ ಗ್ರಾಮ ಪಂಚಾಯಿತಿಗಳ 401 ಸ್ಥಾನಗಳಿಗೂ ಉಪಚುನಾವಣೆ ನಡೆದಿತ್ತು.
Last Updated 30 ಡಿಸೆಂಬರ್ 2021, 15:22 IST
ಅಕ್ಷರ ಗಾತ್ರ
15:2130 Dec 2021

ಹೊಸಪೇಟೆ ನಗರಸಭೆ: ಕಡಿಮೆ ಅಂತರದ ಗೆಲುವು

ಹೊಸಪೇಟೆ ನಗರಸಭೆಗೆ ನಡೆದ ಚುನಾವಣೆಯಲ್ಲಿ 14ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ಸರವಣನ್ ಅವರು ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಎನ್.ಈಶ್ವರ್ ವಿರುದ್ಧ 59 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ. 35 ವಾರ್ಡ್‌ಗಳಲ್ಲಿ ಅತಿ ಕಡಿಮೆ ಅಂತರದಿಂದ ಜಯಗಳಿಸಿದ ಅಭ್ಯರ್ಥಿ ಇವರಾಗಿದ್ದಾರೆ.

8ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಹುಲುಗಪ್ಪ ವಡ್ಡರ್ ಪಕ್ಷೇತರ ಅಭ್ಯರ್ಥಿ ವಿ.ಗಾಳೆಪ್ಪ ವಿರುದ್ಧ 1741 ಮತಗಳ ಅಂತರದಿಂದ ಗೆದ್ದಿದ್ದಾರೆ. ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದ ಎನಿಸಿಕೊಂಡಿದ್ದಾರೆ.

ನೋಟಾಕ್ಕೆ 891 ಮತಗಳು
ನಗರಸಭೆ ಚುನಾವಣೆಯ 35 ವಾರ್ಡ್‌ಗಳಿಗೆ ನಡೆದ ಮತದಾನದಲ್ಲಿ ಒಟ್ಟು 891 ಮತಗಳು ನೋಟಾಕ್ಕೆ ಬಿದ್ದಿವೆ. 32ನೇ ವಾರ್ಡಿನಲ್ಲಿ 65 ಮತದಾರರು ನೋಟಾಗೆ ಮತ ಹಾಕಿದ್ದಾರೆ.

14:1030 Dec 2021

ಕ್ಷೇತ್ರವಾರು ಫಲಿತಾಂಶದ ವಿವರ

ಒಟ್ಟು ಸ್ಥಾನಗಳು: 1184

ಕಾಂಗ್ರೆಸ್: 501

ಬಿಜೆಪಿ: 433

ಜಿಡಿಎಸ್: 45

ಜನತಾ ಪಕ್ಷ: 1

ಎಎಪಿ: 1

ಎಐಎಂಐಎಂ: 2

ಎಸ್‌ಡಿಪಿಐ:  6

ಪಕ್ಷೇತರರು: 195
 

13:5930 Dec 2021

ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಕ್ಷೇತ್ರವಾರು ಫಲಿತಾಂಶದ ಸಂಪೂರ್ಣ ವಿವರ ಇಲ್ಲಿದೆ

12:4630 Dec 2021

ಬೆಳಗಾವಿ ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ

ಬೆಳಗಾವಿ: ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, 5 ಕ್ಷೇತ್ರಗಳಲ್ಲಿ ಕಮಲ ಅರಳಿದೆ. 3 ಕ್ಷೇತ್ರಗಳಲ್ಲಿ ಮತದಾರ ಕಾಂಗ್ರೆಸ್‌ ಕೈಹಿಡಿದಿದ್ದಾನೆ.  ಪಕ್ಷೇತರರಿಗೆ ಮಣೆ ಹಾಕಿದ್ದರಿಂದ 8 ಕ್ಷೇತ್ರಗಳ ಫಲಿತಾಂಶ ಅತಂತ್ರವಾಗಿದೆ.

12:0830 Dec 2021

ಹೊಸಪೇಟೆ ನಗರಸಭೆ ಫಲಿತಾಂಶ ಅತಂತ್ರ; ಸಚಿವರ ತವರು ಕ್ಷೇತ್ರದಲ್ಲೇ ಬಿಜೆಪಿಗೆ ಮುಖಭಂಗ

ನೂತನ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ನಡೆದ ಸ್ಥಳೀಯ ಸಂಸ್ಥೆಗಳ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ ಉತ್ತಮ ಸಾಧನೆ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರ ತವರು ಕ್ಷೇತ್ರ ವಿಜಯನಗರದಲ್ಲೇ ಬಿಜೆಪಿಗೆ ಮುಖಭಂಗವಾಗಿದೆ.

11:4430 Dec 2021

ಉಪ ಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿ ಪಿ.ಮಂಜಪ್ಪ ಗೆಲುವು 

ಉಚ್ಚಂಗಿದುರ್ಗ: ಗ್ರಾಮ ಪಂಚಾಯಿತಿಯ ಒಂದನೇ ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಮಂಜಪ್ಪ ಗೆಲುವು ಸಾಧಿಸಿದ್ದಾರೆ. 

ಪ್ರತಿಸ್ಪರ್ಧಿ ಎಂ.ಡಿ ನಾಗರಾಜ ಅವರನ್ನು ಅವರು 98 ಮತಗಳಿಂದ ಪರಾಭವಗೊಳಿಸಿದರು. ಚಲಾವಣೆಯಾಗಿದ್ದ 885 ಮತಗಳ ಪೈಕಿ 535 ಮತಗಳನ್ನು ಪಡೆದರೆ, ಎಂ.ಡಿ ನಾಗರಾಜ್ 385 ಮತಗಳನ್ನು ಪಡೆದಿದ್ದರು. 14 ಮತಗಳು ತಿರಸ್ಕೃತಗೊಂಡಿದ್ದವು. 

ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ಪಿ.ಮಂಜಪ್ಪ ಅವರ ಬೆಂಬಲಿಗರು ಗ್ರಾಮದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿರು. 

11:0530 Dec 2021

ಇಬ್ಬರಿಗೂ ಸಮಾನ ಮತ: ಚೀಟಿ ಎತ್ತುವ ಮೂಲಕ ಆಯ್ಕೆ

ಮೋಳೆ(ಬೆಳಗಾವಿ ಜಿಲ್ಲೆ): ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣ ಪಂಚಾಯ್ತಿ 12ನೇ ವಾರ್ಡ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಲಾಶ್ರೀ ಪವಾರ ಹಾಗೂ ಬಿಜೆಪಿ ಅಭ್ಯರ್ಥಿ ರೋಹಿಣಿ ಬಾಳಿ 284 ಮತ ಗಳಿಸಿದ್ದರು. ಇಬ್ಬರೂ ಅಭ್ಯರ್ಥಿಗಳು ಸಮಾನ ಮತ ಪಡೆದಿದ್ದರಿಂದ ಚುನಾವಣೆ ಅಧಿಕಾರಿಗಳು ಚೀಟಿ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಿದರು. ಅಂತಿಮವಾಗಿ ಬಿಜೆಪಿಯ ರೋಹಿಣಿ ವಿಜೇತ ಅಭ್ಯರ್ಥಿ ಎಂದು ಘೋಷಿಸಿದರು.

10:5330 Dec 2021

ಗುತ್ತಲ ಪಟ್ಟಣ ಪಂಚಾಯಿತಿ ‘ಕೈ’ ವಶ

ಹಾವೇರಿ ತಾಲ್ಲೂಕಿನ ಗುತ್ತಲ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿನ ನಗೆ ಬೀರಿದ್ದು, ಬಿಜೆಪಿಗೆ ನಿರಾಸೆಯಾಗಿದೆ. ಒಟ್ಟು 18 ಸ್ಥಾನಗಳಲ್ಲಿ ಕಾಂಗ್ರೆಸ್‌ 11, ಬಿಜೆಪಿ 6 ಹಾಗೂ ಪಕ್ಷೇತರ ಅಭ್ಯರ್ಥಿ 1 ಸ್ಥಾನವನ್ನು ಗೆದ್ದುಕೊಂಡಿದ್ದಾರೆ. 

10:5230 Dec 2021

ಹಾನಗಲ್‌ ಪುರಸಭೆ: ಪಕ್ಷೇತರ ಅಭ್ಯರ್ಥಿ ಗೆಲುವು

ಹಾನಗಲ್‌ ಪುರಸಭೆಯ 19ನೇ ವಾರ್ಡ್‌ಗೆ ನಡೆದ ಚುನಾವಣೆಯಲ್ಲಿ  ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ಅಭ್ಯರ್ಥಿಯನ್ನು ಮಣಿಸಿ, ಪಕ್ಷೇತರ ಅಭ್ಯರ್ಥಿ ಜಿಲಾನಿ ಶೇಖ್‌ ಜಯ ಗಳಿಸಿದ್ದಾರೆ. 

10:2430 Dec 2021

ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಮುಖಭಂಗ

ಹಾವೇರಿ: ಬಂಕಾಪುರ ಪುರಸಭೆ ಮತ್ತು ಗುತ್ತಲ ಪಟ್ಟಣ ಪಂಚಾಯಿತಿ ‘ಕೈ’ ವಶವಾಗಿದ್ದು, ಸಿಎಂ ತವರು ಜಿಲ್ಲೆ ಹಾವೇರಿಯಲ್ಲಿ ಬಿಜೆಪಿಗೆ ಭಾರಿ ಮುಖಭಂಗವಾಗಿದೆ. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾವಿ–ಸವಣೂರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ‘ಬಂಕಾಪುರ ಪುರಸಭೆ’ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿ, ಆಡಳಿತ ಚುಕ್ಕಾಣಿ ಹಿಡಿಯಲು ಸ್ಪಷ್ಟ ಬಹುಮತ ಪಡೆದಿದೆ. ಒಟ್ಟು 23 ಸ್ಥಾನಗಳಲ್ಲಿ ಕಾಂಗ್ರೆಸ್ 14, ಬಿಜೆಪಿ 7 ಹಾಗೂ ಪಕ್ಷೇತರ ಅಭ್ಯರ್ಥಿಗಳು 2 ಸ್ಥಾನ ಗಳಿಸಿದ್ದಾರೆ.