ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ ಚುನಾವಣೆ | ನಾಮಪತ್ರ ಸಲ್ಲಿಕೆ: ಶಕ್ತಿ ಪ್ರದರ್ಶನದ ವೇದಿಕೆ

ಸಾವಿರಾರು ಜನರನ್ನು ಸೇರಿಸಿದ್ದ ಪಕ್ಷೇತರ ಅಭ್ಯರ್ಥಿ ಲಖನ್‌
Last Updated 23 ನವೆಂಬರ್ 2021, 19:45 IST
ಅಕ್ಷರ ಗಾತ್ರ

ಬೆಳಗಾವಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಡಿ.10ರಂದು ನಡೆಯಲಿರುವ ಚುನಾವಣೆಗೆ ಮಂಗಳವಾರ ನಾಮಪತ್ರ ಸಲ್ಲಿಕೆಯನ್ನು ಪ್ರಮುಖ ಅಭ್ಯರ್ಥಿಗಳು ತಮ್ಮ ಶಕ್ತಿ ಪ್ರದರ್ಶನದ ವೇದಿಕೆಯನ್ನಾಗಿ ಮಾಡಿಕೊಂಡರು.

3ನೇ ಬಾರಿಗೆ ಆಯ್ಕೆ ಬಯಸಿರುವ ಮಹಾಂತೇಶ ಕವಟಗಿಮಠ ಬಿಜೆಪಿ ಅಭ್ಯರ್ಥಿಯಾಗಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ಕಿರಿಯ ಸಹೋದರ ಚನ್ನರಾಜ ಹಟ್ಟಿಹೊಳಿ ಮತ್ತು ಜಾರಕಿಹೊಳಿ ಕುಟುಂಬದ ಉದ್ಯಮಿ ಲಖನ್‌ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶಕುಮಾರ್ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು.

ಬಿಜೆಪಿಯಲ್ಲಿ ನಾಯಕರ ಸಂಖ್ಯೆ ಜಾಸ್ತಿ ಇತ್ತು. ಕಾಂಗ್ರೆಸ್‌ನವರು ನೂರಾರು ಕಾರ್ಯಕರ್ತರನ್ನು ಸೇರಿಸಿದ್ದರು. ಪಕ್ಷೇತರನಾಗಿ ಕಣಕ್ಕಿಳಿದಿರುವ ಲಖನ್‌ ಪರವಾಗಿ ಹೆಚ್ಚಿನ ಜನರು ಜಮಾಯಿಸಿದ್ದರು. ತ್ರಿಕೋನ ಹಣಾಹಣಿ ಇರಲಿದೆ ಎಂಬ ಸಂದೇಶ ರವಾನೆ ಆಯಿತು.

ನಾಮಪತ್ರ ಸಲ್ಲಿಕೆ ವೇಳೆ ಜಾರಕಿಹೊಳಿ ಸಹೋದರರು ಮತ್ತು ಕುಟುಂಬದವರು ಹೆಚ್ಚು ಗಮನಸೆಳೆದರು.ಜೀಪ್‌ನಲ್ಲಿ ಮೆರವಣಿಗೆಯಲ್ಲಿ ಬಂದ ಕಾಂಗ್ರೆಸ್‌ ಅಭ್ಯರ್ಥಿ ಜೊತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಇದ್ದರು. ಬಿಜೆಪಿ ಅಭ್ಯರ್ಥಿ ಜೊತೆಗೆ ಗೋಕಾಕದ ಶಾಸಕ ರಮೇಶ ಜಾರಕಿಹೊಳಿ ಹೆಜ್ಜೆ ಹಾಕಿದರು.ಪಕ್ಷೇತರ ಲಖನ್‌ ಜೊತೆ ರಮೇಶ ಅವರ ಪುತ್ರ ಅಮರನಾಥ್ ಜಾರಕಿಹೊಳಿ, ಅಳಿಯ ಅಂಬಿರಾವ್ ಪಾಟೀಲ ಮತ್ತು ಆಪ್ತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸಹೋದರರ ಸವಾಲ್‌ನಂತೆಯೂ ಇತ್ತು.

ಇತ್ತೀಚೆಗೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಲಖನ್ ಸ್ಪರ್ಧೆ ಬಿಜೆಪಿ, ಕಾಂಗ್ರೆಸ್‌ ಪಕ್ಷಗಳಿಗೆ ಆತಂಕ ಮೂಡಿಸಿದೆ ಎನ್ನಲಾಗುತ್ತಿದೆ. ಲಖನ್‌ಗೆ ಸಹೋದರರಾದ ಬಾಲಚಂದ್ರ ಮತ್ತು ರಮೇಶ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ ಎಂದುವಿಶ್ಲೇಷಿಸಲಾಗುತ್ತಿದೆ.

***

ಬಿಜೆಪಿ ಟಿಕೆಟ್‌ ಕೇಳಿರಲಿಲ್ಲ. ಬೆಂಬಲಿಗರು ಹಾಗೂ ಅಭಿಮಾನಿಗಳ ಆಶಯದಂತೆ ಪಕ್ಷೇತರನಾಗಿ ಸ್ಪರ್ಧಿಸಿದ್ದೇನೆ. ನಾನು ಬಂಡಾಯ ಅಭ್ಯರ್ಥಿ ಅಲ್ಲ. ನಾಮಪತ್ರ ವಾಪಸ್ ಪಡೆಯುವುದಿಲ್ಲ.

- ಲಖನ್ ಜಾರಕಿಹೊಳಿ, ಪಕ್ಷೇತರ ಅಭ್ಯರ್ಥಿ

***

ಕಾಂಗ್ರೆಸ್‌ ಅಭ್ಯರ್ಥಿ ಸೋಲಿಸಲು 2ನೇ ಅಭ್ಯರ್ಥಿಗೆ (ಲಖನ್‌) ಬೆಂಬಲ ನೀಡಲು ಸಂಬಂಧಿಸಿದಂತೆ, ನ.29ರಂದು ದೆಹಲಿಗೆ ಹೋಗಿ ವರಿಷ್ಠರನ್ನು ಒಪ್ಪಿಸುತ್ತೇನೆ

- ರಮೇಶ ಜಾರಕಿಹೊಳಿ, ಬಿಜೆಪಿ ಶಾಸಕ

***

ಬಿಜೆಪಿಯ ವರಿಷ್ಠರಿಂದ ಸೂಕ್ತ ಸ್ಥಾನಮಾನದ ಭರವಸೆ ಸಿಕ್ಕರೆ ಲಖನ್‌ ಜಾರಕಿಹೊಳಿ ಚುನಾವಣಾ ಕಣದಿಂದ ಹಿಂದೆ ಸರಿಯಲೂಬಹುದು. ನಾಮಪತ್ರ ವಾಪಸ್‌ಗೆ ಅವಕಾಶವಿದೆ

- ಸತೀಶ ಜಾರಕಿಹೊಳಿ, ಕಾರ್ಯಾಧ್ಯಕ್ಷ, ಕೆಪಿಸಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT