ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

221 ವಿಧಾನಸಭಾ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿ; 5 ಕೋಟಿ ದಾಟಿದ ಮತದಾರರ ಸಂಖ್ಯೆ

ಮೊದಲ ಬಾರಿ ಹಕ್ಕು ಪಡೆದವರು 7 ಲಕ್ಷ
Last Updated 5 ಜನವರಿ 2023, 20:41 IST
ಅಕ್ಷರ ಗಾತ್ರ

ಬೆಂಗಳೂರು: ಇದೇ ವರ್ಷದ ಏಪ್ರಿಲ್–ಮೇ ತಿಂಗಳಿನಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಹೊಸ ಸರ್ಕಾರವನ್ನು ಚುನಾಯಿಸುವ ಅರ್ಹ ಮತದಾರರ ಸಂಖ್ಯೆ ಐದು ಕೋಟಿ ದಾಟಿದೆ.

224 ವಿಧಾನಸಭಾ ಕ್ಷೇತ್ರಗಳ ಪೈಕಿ 221 ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. 57,388 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, 5,05,48,553 ಮಂದಿ ಮತದಾನದ ಅರ್ಹತೆ ಪಡೆದಿದ್ದಾರೆ.

ಶಿವಾಜಿ ನಗರ, ಚಿಕ್ಕಪೇಟೆ ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರಗಳ ಪಟ್ಟಿಯನ್ನು ಜ.15ರ ಒಳಗೆ ಅಂತಿಮಗೊಳಿಸಲಾಗುವುದು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ಕುಮಾರ್ ಮೀನಾ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪಟ್ಟಿಯಲ್ಲಿ 2,54,49,725 ಪುರುಷ, 2,50,94,326 ಮಹಿಳೆ, 47,814 ಸೇವಾ ಮತದಾ
ರರು ಹಾಗೂ 4,502 ಲಿಂಗತ್ವ ಅಲ್ಪಸಂಖ್ಯಾತರು ಇದ್ದಾರೆ. ಆಯೋಗ ಕಳೆದ ನವೆಂಬರ್‌ನಲ್ಲಿ ಪ್ರಕಟಿಸಿದ ಕರಡು ಮತದಾರರ ಪಟ್ಟಿಗಿಂತ 6,13,823 ಹೆಚ್ಚುವರಿ ಮತದಾರರು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮತದಾರರು
ಜಾಲತಾಣ https://ceo.karnataka.gov.in ನಲ್ಲಿ ಪರಿಶೀಲಿಸಬಹುದು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಅತಿ ಹೆಚ್ಚು ಅಂದರೆ 6,50,532 ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರ ಅತಿ ಕಡಿಮೆ ಅಂದರೆ 1,66,521 ಮತದಾರರನ್ನು ಹೊಂದಿದೆ.

ನಾಮಪತ್ರ ಸಲ್ಲಿಕೆವರೆಗೂ ಅವಕಾಶ: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ನಾಮಪತ್ರ ಸಲ್ಲಿಕೆ ಆರಂಭಕ್ಕೆ 10 ದಿನ ಇರುವವರೆಗೂ ಅವಕಾಶ ನೀಡಲಾಗುವುದು. ಮತದಾನ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.

7 ಲಕ್ಷ ಹೊಸ ಮತದಾರರು: 18 ವರ್ಷ ತುಂಬಿದ 7,01,243 ಮತದಾರರು ಇದೇ ಮೊದಲ ಬಾರಿಗೆ ಮತದಾನದ ಹಕ್ಕು ಪಡೆದಿದ್ದಾರೆ. ಅವರಲ್ಲಿ 3.38 ಲಕ್ಷ ಯುವಕ, 3.13 ಲಕ್ಷ ಯುವತಿಯರು ಇದ್ದಾರೆ. 17 ವರ್ಷ ಮೇಲ್ಪಟ್ಟ 25,299 ಮತದಾರರು ಮುಂಗಡ ನೋಂದಣಿ ಮಾಡಿಕೊಂಡಿದ್ದಾರೆ. ಮೊದಲು ಜನವರಿ 1ಕ್ಕೆ 18 ವರ್ಷ ತುಂಬಿದವರು ನೋಂದಣಿ ಮಾಡಿಕೊಳ್ಳಲು ಅವಕಾಶ ಇತ್ತು. ಈಗ ನಿಯಮ ಸಡಿಲಿಸಲಾಗಿದೆ. ದಾಖಲೆಗಳ ಪ್ರಕಾರ ಜನವರಿ 1ಕ್ಕೆ 18 ವರ್ಷ ತುಂಬಿದ 9.80 ಲಕ್ಷ ಜನರು ಇದ್ದು, ಉಳಿದವರ ಸೇರ್ಪಡೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿಗಳಾದ
ಆರ್‌.ವೆಂಕಟೇಶ್‌, ರಾಜೇಂದ್ರ ಜೋಳನ್‌ ಇದ್ದರು.

6.18 ಲಕ್ಷ ಹೆಸರು ಪಟ್ಟಿಯಿಂದ ಹೊರಗೆ

ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ 2,62,854 ಮೃತ ಮತದಾರರು ಹಾಗೂ ಈಗಾಗಲೇ ಬೇರೆ ಸ್ಥಳಗಳಿಗೆ ವರ್ಗಾಯಿಸಿಕೊಂಡಿರುವ, ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಹೆಸರಿದ್ದ ಒಟ್ಟು 6,18,965 ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT