ಶುಕ್ರವಾರ, ಆಗಸ್ಟ್ 19, 2022
22 °C

ಮಸೀದಿಗಳಲ್ಲಿ ರಾತ್ರಿ 10 ರಿಂದ ಬೆ. 6ರವರೆಗೆ ಧ್ವನಿವರ್ಧಕ ನಿರ್ಬಂಧ: ವಕ್ಫ್ ಮಂಡಳಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಸೀದಿಗಳು ಮತ್ತು ದರ್ಗಾಗಳಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಲೌಡ್‌ ಸ್ಪೀಕರ್‌ಗಳನ್ನು ಬಳಸುವುದಕ್ಕೆ ನಿರ್ಬಂಧ ವಿಧಿಸಿ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ ಸುತ್ತೋಲೆ ಹೊರಡಿಸಿದೆ.

ಶಬ್ದ ಮಾಲಿನ್ಯ(ನಿಯಂತ್ರಣ ಮತ್ತು ನಿರ್ವಹಣೆ) ಕಾನೂನು, 2000ದ ಅಡಿ ಮಂಡಳಿ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ. ಅಲ್ಲದೆ, ಹಗಲು ಹೊತ್ತಿನಲ್ಲೂ ಲೌಡ್‌ ಸ್ಪೀಕರ್‌ಗಳನ್ನು ಸುತ್ತಲಿನ ಗಾಳಿಯ ಗುಣಮಟ್ಟಕ್ಕೆ ಅನುಗುಣವಾಗಿ ಬಳಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದು, ಈ ಸಂಬಂಧ ಮಾರ್ಚ್‌ 9 ರಂದು ಸುತ್ತೋಲೆ ಹೊರಡಿಸಲಾಗಿದೆ.

ಮಸೀದಿ ಮತ್ತು ದರ್ಗಾಗಳಲ್ಲಿ ಲೌಕ್‌ ಸ್ಪೀಕರ್‌ಗಳ ಸದ್ದು, ಜನರೇಟರ್‌ಗಳ ಸದ್ದು ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವ ಭಾಷಣಗಳಿಂದ ಶಬ್ದದ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ಜನರ ಆರೋಗ್ಯ ಮತ್ತು ಮಾನಸಿಕ ಸ್ವಾಸ್ಥ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂದು ವಕ್ಫ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ಮಸೀದಿಗಳಲ್ಲಿ ಲೌಡ್‌ಸ್ಪೀಕರ್‌ಗಳ ಬಳಕೆಯನ್ನು ಪ್ರಶ್ನಿಸಿ ಹಲವು ರಾಜ್ಯಗಳ ನ್ಯಾಯಾಲಯಗಳಲ್ಲಿ  ವಿಷಯ ಪ್ರಸ್ತಾಪವಾಗಿದೆ. ಕೆಲವು ಮಸೀದಿಗಳು ನಿಯಮಗಳನ್ನು ಅತ್ಯಂತ ಗಂಭೀರವಾಗಿ ಪಾಲನೆ ಮಾಡುತ್ತಿವೆ. ಇಸ್ಲಾಂ ಕೂಡ ನಮ್ಮ ಸುತ್ತಲಿನ ಪರಿಸರದ ಜತೆ ಸಾಮರಸ್ಯದಿಂದ ಬಾಳ್ವೆ ನಡೆಸುವುದಕ್ಕೆ ಪರಮೋಚ್ಛ ಆದ್ಯತೆ ನೀಡಿದೆ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಎಲ್ಲ ಮಸೀದಿ ಮತ್ತು ದರ್ಗಾಗಳ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಲಾಗಿದೆ. ಆಝಾನ್ ಮತ್ತು ಪ್ರಮುಖ ಸೂಚನೆಗಳನ್ನು ನೀಡಲು (ಸಾವು, ಸಮಾಧಿ ಮಾಡುವ ಸಮಯ, ಚಂದ್ರ ಕಾಣಿಸುವ ಮತ್ತು ಹಗಲು ಹೊತ್ತಿನಲ್ಲಿ) ಮಾತ್ರ ಲೌಡ್‌ ಸ್ಪೀಕರ್‌ ಬಳಸಬೇಕು.

ಧಾರ್ಮಿಕ ಸ್ಥಳಗಳಲ್ಲಿ ನಮಾಜ್‌ ಸಂದರ್ಭದಲ್ಲಿ ಜನ ಸೇರಿದಾಗ, ಶುಕ್ರವಾರದ ಕಾರ್ಯಕ್ರಮಗಳು, ಧಾರ್ಮಿಕ ಮತ್ತು ಸಾಮಾಜಿಕ ಹಾಗೂ ಸಾಂಸ್ಕೃತಿಕ, ಜ್ಞಾನಧಾರಿತ ಕಾರ್ಯಕ್ರಮಗಳಲ್ಲಿ ಲೌಡ್‌ ಸ್ಪೀಕರ್‌ ಬಳಸಬಹುದು. ಎಷ್ಟು ಪ್ರಮಾಣದಲ್ಲಿ ಶಬ್ದ ಬಳಸಬೇಕು ಎಂಬುದನ್ನು ಸ್ಥಳೀಯ ಪರಿಸರ ಅಧಿಕಾರಿಗಳ ಜತೆ ಸಮಾಲೋಚಿಸಿ ನಿಗದಿ ಮಾಡಬೇಕು. ಮಸೀದಿ ಮತ್ತು ದರ್ಗಾ ಸುತ್ತಮುತ್ತ ಪಟಾಕಿಗಳನ್ನು ಸುಡಬಾರದು. ಧಾರ್ಮಿಕ ಸ್ಥಳದ ಸುತ್ತಮುತ್ತ ಭಿಕ್ಷಾಟನೆಗೆ ಪ್ರೋತ್ಸಾಹ ನೀಡಬಾರದು. ಅಂತಹವರಿಗೆ ನೆರವು ನೀಡಲು ಸಾಂಸ್ಥಿಕ ಮಟ್ಟದಲ್ಲೇ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

‘ಅಝಾನ್‌ಗೆ ನಿರ್ಬಂಧ ಹೇರಿಲ್ಲ’

‘ಅಝಾನ್ ಬಗ್ಗೆ ರಾಜ್ಯ ವಕ್ಫ್ ಮಂಡಳಿ ಯಾವುದೇ ನಿರ್ಬಂಧ ಹೇರಿಲ್ಲ’ ಎಂದು ಮಂಡಳಿ ಸದಸ್ಯರೂ ಆಗಿರುವ ಕರ್ನಾಟಕ ರಾಜ್ಯ ಮುಸ್ಲಿಂ ಜಮಾ ಅತ್‌ನ ಪ್ರಧಾನ ಕಾರ್ಯದರ್ಶಿ ಮೌಲಾನಾ ಶಾಫಿ ಸಾದಿ ಟ್ವೀಟ್ ಮಾಡಿದ್ದಾರೆ.

‘ಸುತ್ತೋಲೆಯ ಕ್ರಮ ಸಂಖ್ಯೆ ಮೂರರಲ್ಲಿ ಅಝಾನ್ ಮತ್ತು ಇತರ ಯಾವ ವಿಚಾರಗಳಿಗೆ ಧ್ವನಿವರ್ಧಕ ಬಳಸಬಹುದೆಂದು ಸ್ಪಷ್ಟಪಡಿಸಲಾಗಿದೆ. ಈ ನಿರ್ಣಯದಲ್ಲಿ ಯಾವುದೇ ಲೋಪದೋಷಗಳಿದ್ದರೂ ಮುಂದಿನಸಭೆಯಲ್ಲಿ ಚರ್ಚಿಸಿ ಸರಿಪಡಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು