ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸೇರಿ 15 ಕಾಂಗ್ರೆಸ್ ಸದಸ್ಯರ ಅಮಾನತು

Last Updated 15 ಡಿಸೆಂಬರ್ 2021, 20:10 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ರಾಜ್ಯದ ಸಚಿವ ಮತ್ತು ಶಾಸಕರೊಬ್ಬರು ಬೆಂಗಳೂರಿನಲ್ಲಿ ಬಹುಕೋಟಿ ಮೌಲ್ಯದ ಭೂ ಕಬಳಿಕೆ ಮಾಡಿರುವ ಪ್ರಕರಣದ ತನಿಖೆಗೆ ಆಗ್ರಹಿಸಿ ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದು ಧರಣಿ ನಡೆಸಿದ್ದು ಕೋಲಾಹಲಕ್ಕೆ ಕಾರಣವಾಯಿತು.

ಧಿಕ್ಕಾರ, ವಾಗ್ವಾದಗಳಿಂದ ಕಲಾಪ ಗೊಂದಲದ ಗೂಡಾಯಿತು. ಸಭಾಪತಿ ಬಸವರಾಜ ಹೊರಟ್ಟಿ ಧರಣಿ ಕೈಬಿಡಲು ಕೋರಿದರು. ಕಾಂಗ್ರೆಸ್ ಸದಸ್ಯರು ಒಪ್ಪದೇ ಇದ್ದಾಗ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಸೇರಿದಂತೆ 15 ಸದಸ್ಯರನ್ನು ಒಂದು ದಿನ ಮಟ್ಟಿಗೆ ಸಭಾಪತಿ ಕಲಾಪದಿಂದ ಅಮಾನತು ಮಾಡಿದರು.

ಸಚಿವ ಹಾಗೂ ಶಾಸಕರೊಬ್ಬರು ಭೂಕಬಳಿಕೆ ಮಾಡಿದ್ದಾರೆ ಎಂಬ ಆರೋಪದ ಕುರಿತು ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಕ್ರಿಮಿನಲ್‌ ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆಗೆ ಆದೇಶಿಸಿದೆ. ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ, ಈ ಪ್ರಕರಣದ ಕುರಿತು ಚರ್ಚೆಗೆ ಅವಕಾಶ ಕೋರಿ ನಿಲುವಳಿ ಸೂಚನೆ ಮಂಡಿಸಲು ವಿರೋಧ ಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣ ಸ್ವಾಮಿ ಮುಂದಾದರು. ಆದರೆ, ಸಭಾಪತಿ ಅವಕಾಶ ನಿರಾಕರಿಸಿ ದರು. ಆಗ, ಕಾಂಗ್ರೆಸ್‌ ಸದಸ್ಯರು ಸಭಾಪತಿ ಪೀಠದ ಎದುರು ಧರಣಿಗೆ ಮುಂದಾದರು. ಪ್ರಶ್ನೋತ್ತರ ಅವಧಿಯ ಬಳಿಕ ಚರ್ಚೆಗೆ ಅವಕಾಶ ನೀಡುವುದಾಗಿ ಹೊರಟ್ಟಿ ಅವರು ಮನವೊಲಿಸಿದರು.

ಪ್ರಶ್ನೋತ್ತರದ ಬಳಿಕ ಮತ್ತೆ ವಿಷಯ ಪ್ರಸ್ತಾಪಿಸಲು ನಾರಾಯಣಸ್ವಾಮಿ ಯತ್ನಿಸಿದರು. ಆಗ ಮಧ್ಯಪ್ರವೇಶಿಸಿದ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ‘ಪ್ರಕರಣನ್ಯಾಯಾಲಯದಲ್ಲಿದೆ. ಆ ಬಗ್ಗೆ ಸದನದಲ್ಲಿ ಚರ್ಚಿಸುವುದು ನ್ಯಾಯಾಂಗ ನಿಂದನೆ ಯಾಗುತ್ತದೆ. ಚರ್ಚೆಗೆ ಅವಕಾಶ ನೀಡಬಾರದು’ ಎಂದರು. ಬಿಜೆಪಿಯ ಹಲವು ಸದಸ್ಯರು ಅದಕ್ಕೆ ದನಿಗೂಡಿಸಿದರು.

ಕಾಂಗ್ರೆಸ್‌ ಮತ್ತ ಬಿಜೆಪಿ ಸದ ಸ್ಯರು ತಮ್ಮ ನಿಲುವುಗಳನ್ನು ಸಮರ್ಥಿಸಿ ಕೊಂಡು ಕೆಲಕಾಲ ಮಾತನಾಡಿದರು. ಎರಡೂ ಕಡೆಯ ವಾದ ಆಲಿಸಿದ ಸಭಾಪತಿ, ‘ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಚರ್ಚೆಗೆ ಅವಕಾಶ ನೀಡುವುದಿಲ್ಲ’ ಎಂದು ನಿರ್ಣಯ ಪ್ರಕಟಿಸಿದರು. ಆ ಬಳಿಕ ಮಧ್ಯಾಹ್ನದ ಭೋಜನ ವಿರಾಮದವರೆಗೂ ಕಾರ್ಯ ಸೂಚಿಯಂತೆ ಕಲಾಪ ನಡೆಯಿತು.

ಚರ್ಚೆಗೆ ಪಟ್ಟು: ಮಧ್ಯಾಹ್ನ 3 ಗಂಟೆಗೆ ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿಯವರ ನಿರ್ಣಯ ಮರು ಪರಿಶೀಲನೆಗೆ ಆಗ್ರಹಿಸಿ ಕಾಂಗ್ರೆಸ್‌ ಸದಸ್ಯರು ಧರಣಿ ಆರಂಭಿಸಿದರು. ತೀರ್ಮಾನ ಬದಲಿಸಲು ಸಭಾಪತಿ ನಿರಾ ಕರಿಸಿದರು.

ಕಾಂಗ್ರೆಸ್‌ ಸದಸ್ಯರು ಸಭಾಪತಿಯವರ ಪೀಠದ ಎದುರು ನಿಂತು ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು.

ಸಚಿವರಾದ ವಿ. ಸೋಮಣ್ಣ, ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಧರಣಿ ಕೈಬಿಡುವಂತೆ ಕಾಂಗ್ರೆಸ್‌ ಸದಸ್ಯರ ಮನವೊಲಿಸಲು ನಡೆಸಿದ ಯತ್ನ ಫಲ ನೀಡಲಿಲ್ಲ.ಧರಣಿನಿರತರ ವಿರುದ್ಧ ಕ್ರಮ ಜರುಗಿಸುವಂತೆ ಬಿಜೆಪಿಯ ಎನ್‌. ರವಿಕುಮಾರ್‌, ಆಯನೂರು ಮಂಜುನಾಥ್‌ ಆಗ್ರಹಿಸಿದರು. ಕೋಟ ಶ್ರೀನಿವಾಸ ಪೂಜಾರಿ ಕೂಡ ಈ ಬೇಡಿಕೆ ಮಂಡಿಸಿದರು.

ಸದಸ್ಯರ ಅಮಾನತು: ‘ಧರಣಿ ನಿರತರನ್ನು ದಿನದ ಮಟ್ಟಿಗೆ ಸದನದಿಂದ ಅಮಾನತು ಮಾಡಲಾಗಿದೆ’ ಎಂಬ ಆದೇಶಪ್ರಕಟಿಸಿದ ಬಸವರಾಜ ಹೊರಟ್ಟಿ, ತೇಜಸ್ವಿನಿ ಗೌಡ ಅವರನ್ನು ಪೀಠದಲ್ಲಿ ಕೂರಿಸಿ, ನಿರ್ಗಮಿಸಿದರು. ಅಷ್ಟರಲ್ಲಿ ಸದನಕ್ಕೆ ಬಂದ ಮಾಧುಸ್ವಾಮಿ ಕಾಂಗ್ರೆಸ್‌ ಸದಸ್ಯರ ವಿರುದ್ಧ ಹರಿಹಾಯ್ದರು.

ಬಳಿಕ ಕಾಂಗ್ರೆಸ್‌ ಸದಸ್ಯರು ಏರು ದನಿಯಲ್ಲಿ ಘೋಷಣೆ ಕೂಗಲಾರಂಭಿಸಿದರು. ಪ್ರತಿಪಕ್ಷ ನಾಯಕರೂ ಸೇರಿದಂತೆ 15 ಸದಸ್ಯರ ಹೆಸರನ್ನು ಪ್ರಕಟಿಸಿದ ತೇಜಸ್ವಿನಿ ಗೌಡ, ‘ಪೀಠಕ್ಕೆ ಅಗೌರವ ತೋರಿದ ಮತ್ತು ಕಲಾಪಕ್ಕೆ ಅಡ್ಡಿಪಡಿಸಿದ ಕಾರಣದಿಂದ ಈ ಎಲ್ಲರನ್ನೂ ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ’ ಎಂದರು.

ಕಾಂಗ್ರೆಸ್‌ ಸದಸ್ಯರನ್ನು ಮಾರ್ಷಲ್‌ಗಳನ್ನು ಬಳಸಿ ಹೊರಹಾಕಬೇಕೆಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು. ಮಾರ್ಷಲ್‌ಗಳು ಸದನದ ಒಳಕ್ಕೆ ಪ್ರವೇಶಿಸಲು ತಯಾರಾಗುತ್ತಿದ್ದಂತೆಯೇ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ವಿರೋಧ ವ್ಯಕ್ತಪಡಿಸಿದರು. ನಂತರವೂ ಧರಣಿ ಮುಂದುವರಿಯಿತು. 4.30ಕ್ಕೆ ಪೀಠಕ್ಕೆ ಹಿಂದಿರುಗಿದ ಹೊರಟ್ಟಿ, 4.35ರ ವೇಳೆಗೆ ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು.

ಅಮಾನತುಗೊಂಡವರು
* ಎಸ್‌.ಆರ್‌. ಪಾಟೀಲ
*ಎಂ. ನಾರಾಯಣಸ್ವಾಮಿ
* ಬಿ.ಕೆ. ಹರಿಪ್ರಸಾದ್
* ಕೆ. ಪ್ರತಾಪಚಂದ್ರ ಶೆಟ್ಟಿ
* ಸಿ.ಎಂ. ಇಬ್ರಾಹಿಂ
* ನಸೀರ್‌ ಅಹ್ಮದ್
* ಯು.ಬಿ. ವೆಂಕಟೇಶ್
* ಆರ್‌.ಬಿ. ತಿಮ್ಮಾಪೂರ
* ಬಸವರಾಜ ಪಾಟೀಲ ಇಟಗಿ
* ಅರವಿಂದ ಕುಮಾರ್ ಅರಳಿ
* ಪಿ.ಆರ್‌. ರಮೇಶ್
* ಸಿ.ಎಂ. ಲಿಂಗಪ್ಪ
* ಕೆ. ಹರೀಶ್‌ ಕುಮಾರ್
* ವೀಣಾ ಅಚ್ಚಯ್ಯ
* ಎಂ.ಎ. ಗೋಪಾಲಸ್ವಾಮಿ

‘ಬೈರತಿ, ಶಂಕರ್‌ರಿಂದ 35 ಎಕರೆ ಭೂಕಬಳಿಕೆ’
‘ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ನಕಲಿ ದಾಖಲೆ ಸೃಷ್ಟಿಸಿ 35 ಎಕರೆ ಜಮೀನು ಕಬಳಿಸಿದ್ದಾರೆ. ತಕ್ಷಣ ಅವರನ್ನು ಸಂಪುಟದಿಂದ ಕೈಬಿಡಬೇಕು’ ಎಂದು ಕಾಂಗ್ರೆಸ್‌ನ ಎಂ. ನಾರಾಯಣ ಸ್ವಾಮಿ ಆಗ್ರಹಿಸಿದರು.

ಬಿ.ಕೆ‌. ಹರಿಪ್ರಸಾದ್ ಮತ್ತು ಪಿ.ಆರ್. ರಮೇಶ್ ಜತೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೈರತಿ ಬಸವರಾಜು ಮತ್ತು ವಿಧಾನಪರಿಷತ್‌ನ ಬಿಜೆಪಿ ಸದಸ್ಯ ಆರ್. ಶಂಕರ್ ಮತ್ತು ಇತರ ಮೂರು ಮಂದಿ ಕೆ.ಆರ್‌. ಪುರ ವ್ಯಾಪ್ತಿಯಲ್ಲಿ ಅಣ್ಣಯ್ಯಪ್ಪ ಮತ್ತು ಇತರರಿಗೆ ಸೇರಿದ ನೂರಾರು ಕೋಟಿ ಮೌಲ್ಯದ 35 ಎಕರೆ ಜಮೀನನ್ನು ನಕಲಿ ದಾಖಲೆ ಮತ್ತು ನಕಲಿ ಮಾಲೀಕರನ್ನು ಸೃಷ್ಟಿಸಿ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ’ ಎಂದು ಆರೋಪಿಸಿದರು.

ಈ ಪ್ರಕರಣದಲ್ಲಿ ಸಚಿವರು, ವಿಧಾನ ಪರಿಷತ್‌ ಸದಸ್ಯ ಮತ್ತು ಇತರ ಮೂವರ ವಿರುದ್ಧ ಜಮೀನಿನ ಮಾಲೀಕರು ಸಲ್ಲಿಸಿದ ದೂರನ್ನು ಆಧರಿಸಿ ಬೆಂಗಳೂರಿನ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ನವೆಂಬರ್‌ 25ರಂದು ವಿಚಾರಣೆ ಆರಂಭಿಸಿದೆ. ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಂಡು ಸಚಿವರು ಸೇರಿದಂತೆ ಎಲ್ಲ ಆರೋಪಿಗಳಿಗೂ ಸಮನ್ಸ್‌ ಜಾರಿಗೊಳಿಸಲು ಆದೇಶಿಸಿದೆ ಎಂದು ನ್ಯಾಯಾಲಯದ ಆದೇಶದ ಪ್ರತಿಯನ್ನು ಪ್ರದರ್ಶಿಸಿದರು.

‘ಕೆ.ಆರ್‌. ಪುರದ ಕಲ್ಕೆರೆ ಗ್ರಾಮದ ಹಲವು ಸರ್ವೆ ನಂಬರ್‌ಗಳಲ್ಲಿ ಅಣ್ಣಯ್ಯಪ್ಪ ಹೊಂದಿದ್ದ ಜಮೀನಿಗೆ ಬೇರೆ ಮಾಲೀಕರನ್ನು ತೋರಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ.ಜಮೀನು ಕಳೆದುಕೊಂಡಿರುವುದು ಗೊತ್ತಾಗುತ್ತಿದ್ದಂತೆ ಅಣ್ಣಯ್ಯಪ್ಪ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. 2003ರಿಂದ ಇತ್ತೀಚಿನವರೆಗೂ ಪ್ರಕರಣದ ವಿಚಾರಣೆ ನಡೆದಿದೆ. ನ.25ರಂದು ನ್ಯಾಯಾಲಯ ಆದೇಶ ಪ್ರಕಟಿಸಿದೆ’ ಎಂದರು.

ಬೈರತಿ ಬಸವರಾಜ ಮತ್ತು ಆರ್‌. ಶಂಕರ್ ಸೇರಿ ಐದು ಮಂದಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120ಬಿ, 420, 427, 465, 467 ಮತ್ತು 471 ಅಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡು, ವಿಚಾರಣೆ ಆರಂಭಿಸಿದೆ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಪ್ರದೇಶದಲ್ಲಿ ಒಂದು ಎಕರೆ ಭೂಮಿಯ ಮೌಲ್ಯ ಸರಿಸುಮಾರು ₹24 ಕೋಟಿಯಷ್ಟಿದೆ.

‘ಮಾನನಷ್ಟ ಮೊಕದ್ದಮೆ ಹೂಡುವೆ’
‘ನನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವ ಎಂ. ನಾರಾಯಣಸ್ವಾಮಿ ಹಾಗೂ ಇತರರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ಸಚಿವ ಬೈರತಿ ಬಸವರಾಜ ಹೇಳಿದರು.

‘ನಾರಾಯಣಸ್ವಾಮಿ ದ್ವೇಷದಿಂದ ಈ ಆರೋಪ ಮಾಡಿದ್ದಾರೆ. ಇದರ ಹಿಂದೆ ಯಾರದ್ದೋ ಷಡ್ಯಂತ್ರ ಇದೆ. ನನ್ನ ವರ್ಚಸ್ಸಿಗೆ ಧಕ್ಕೆ ತರಲು ಇದನ್ನು ಮಾಡಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ಈ ಆರೋಪ ನಿರಾಧಾರ ಎಂದು ಹೈಕೋರ್ಟ್‌ 2020ರ ಮಾರ್ಚ್‌ 10ರಂದು ಆದೇಶ ನೀಡಿದೆ. ವಿಧಿ ವಿಜ್ಞಾನದ ಪ್ರಯೋಗಾಲಯದ ವರದಿ ನಾನು ತಪ್ಪೆಸಗಿಲ್ಲ ಎಂದಿದೆ. ಅದನ್ನು ಮರೆಮಾಚಿ ಈಗ ಆರೋಪ ಮಾಡುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT