ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ನದಿಗಳು ಸಮುದ್ರ ಸೇರುವ ಜಾಗದಲ್ಲಿ ತಡೆಗೋಡೆ ನಿರ್ಮಿಸುವ ₹1,500 ಕೋಟಿಯ ‘ಕಾರ್ಲ್ಯಾಂಡ್’ ಯೋಜನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಈ ಯೋಜನೆಯಡಿ ತಡೆಗೋಡೆ ನಿರ್ಮಿಸುವುದರಿಂದಸಮುದ್ರದ ನೀರು ನದಿಗೆ ನುಗ್ಗಿ ಉಪ್ಪಾಗುವುದನ್ನು ತಡೆಯಲಾಗುತ್ತದೆ. ಸಂಗ್ರಹವಾಗುವ ಸಿಹಿ ನೀರನ್ನು ಕೃಷಿ, ಸಿಗಡಿ ಸಾಕಾಣಿಕೆ ಮತ್ತು ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಲು ಉದ್ದೇಶಿಸಲಾಗಿದೆ. ಈ ಯೋಜನೆಯಡಿ ಮೂರು ತಾಲ್ಲೂಕುಗಳಿಗೆ ತಲಾ ₹100 ಕೋಟಿಯಂತೆ ಒಟ್ಟು ₹300 ಕೋಟಿ ನೀಡಲು ಒಪ್ಪಿಗೆ ನೀಡಲಾಗಿದೆ ಎಂದರು.
ಇದು ಯಶಸ್ವಿಯಾದರೆ, ಮುಂದಿನ ಹಂತದಲ್ಲಿ ಮಾಸ್ಟರ್ ಪ್ಲ್ಯಾನ್ ಯೋಜನೆಯಡಿ ₹1,500 ಕೋಟಿ ವೆಚ್ಚದಲ್ಲಿ ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು. ಇದರಿಂದ ಸುಮಾರು 2–3 ತಿಂಗಳು ಸಿಹಿ ನೀರು ಶೇಖರಣೆಯಾಗುತ್ತದೆ ಎಂದು ಹೇಳಿದರು.
ಪ್ರಮುಖ ತೀರ್ಮಾನಗಳು
*ಉಡುಪಿ –ಖಾನಾಪುರ ಹೆದ್ದಾರಿಯಲ್ಲಿ 5 ಕಿ.ಮೀ ದ್ವಿಪಥ ನಿರ್ಮಿಸಲು ₹15 ಕೋಟಿ ಅನುದಾನಕ್ಕೆ ಒಪ್ಪಿಗೆ.
* ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ 32 ಎಕರೆ ಪ್ರದೇಶವನ್ನು ಪವನ ವಿದ್ಯುತ್ ಘಟಕ ಸ್ಥಾಪಿಸಲು ರೋಹನ್ ಸೋಲಾರ್ ಕಂಪನಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡಲು ಅನುಮೋದನೆ.
* ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನಲ್ಲಿ ಒಂದು ಹೋಬಳಿ ಸೃಷ್ಟಿಸಲು ಒಪ್ಪಿಗೆ.
* ಸಂಧ್ಯಾ ಸುರಕ್ಷಾ ಯೋಜನೆಯಡಿ 60 ವರ್ಷದವರಿಗೆ ನೀಡುತ್ತಿರುವ ₹600 ಮಾಸಾಶನವನ್ನು ₹800 ಕ್ಕೂ 65 ವರ್ಷ ಮೇಲ್ಪಟ್ಟವರಿಗೆ ನೀಡುವ ₹1,000 ಮಾಸಾಶನವನ್ನು ₹1,200 ಕ್ಕೆ ಹೆಚ್ಚಿಸುವ ಕಾರ್ಯಕ್ರಮಕ್ಕೆ ಘಟನೋತ್ತರ ಅನುಮತಿ. 36 ಲಕ್ಷ ಜನರಿಗೆ ಇದರಿಂದ ಅನುಕೂಲವಾಗಲಿದ್ದು, ಸರ್ಕಾರಕ್ಕೆ ₹207 ಕೋಟಿ ವೆಚ್ಚವಾಗಲಿದೆ.
*ಮೈಸೂರು ಸಾಬೂನು ಮತ್ತು ಮಾರ್ಜಕ ಕಾರ್ಖನೆ ವತಿಯಿಂದ ಶಾಲಾ ವಿದ್ಯಾರ್ಥಿನಿಯರಿಗೆ ಶುಚಿ ಕಿಟ್ ಪೂರೈಕೆಗೆ ನಿರ್ಧಾರ.
*ಹಿಪ್ಪರಗಿ ಬ್ಯಾರೇಜ್ ರಕ್ಷಣೆಗೆ ತಡೆಗೋಡೆ ನಿರ್ಮಿಸಲು ₹28.2 ಕೋಟಿ ಅನುದಾನಕ್ಕೆ ಒಪ್ಪಿಗೆ.
*ಪೊಲೀಸ್ ಆಧುನೀಕರಣ ಯೋಜನೆ ಅಡಿ ₹14.5 ಕೋಟಿ ವೆಚ್ಚದಲ್ಲಿ ಇಲಾಖೆಗೆ ನಿಸ್ತಂತು ಸಂಪರ್ಕ ಜಾಲವನ್ನು ಮೇಲ್ದರ್ಜೆಗೇರಿಸಲು ಅನುಮತಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.