ಸಾರಿಗೆ ನಿಗಮಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ: ಕೋಡಿಹಳ್ಳಿ ಚಂದ್ರಶೇಖರ್ ಆರೋಪ

ಬೆಳಗಾವಿ: ‘ಸಾರಿಗೆ ನಿಗಮಗಳನ್ನು ಖಾಸಗೀಕರಣಗೊಳಿಸುವ ಹುನ್ನಾರವನ್ನು ಸರ್ಕಾರ ನಡೆಸಿದೆ’ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಶನಿವಾರ ದೂರಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸರ್ಕಾರ ಸತ್ಯಾಗ್ರಹ ಹತ್ತಿಕ್ಕುವ ಕೆಲಸಕ್ಕೆ ಮುಂದಾಗುತ್ತಿದೆ. ಕುಟುಂಬ ನಿರ್ವಹಣೆ ಕಷ್ಟ ಆಗುತ್ತಿದೆ. ವೇತನ ಹೆಚ್ಚಿಸಿ ಎಂದು ಕೇಳುವುದು ದುರುದ್ದೇಶವೇ? ಸಾರಿಗೆ ನೌಕರರನ್ನು ಏಕೆ ಕಡೆಗಣಿಸಲಾಗುತ್ತಿದೆ? ಖಾಸಗಿಯವರಿಗೆ ಕೊಡುವ ತರಾತುರಿಯಲ್ಲಿ ಇದ್ದೀರಾ’ ಎಂದು ತರಾಟೆಗೆ ತೆಗೆದುಕೊಂಡರು.
‘ಸರ್ಕಾರ ತುರ್ತಾಗಿ ತೀರ್ಮಾನ ಕೈಗೊಳ್ಳಬೇಕು. ಸರ್ಕಾರದ ನಿರ್ಧಾರ ಆಧರಿಸಿ ಮುಷ್ಕರ ಮುಂದುವರಿಕೆ ಬಗ್ಗೆ ನಿರ್ಧರಿಸುತ್ತೇವೆ. ಬೇಡಿಕೆಗಳ ಬಗ್ಗೆ ಹಿಂದೆಯೇ ಒಪ್ಪಂದ ಆಗಿತ್ತು. ಆದರೆ, 6ನೇ ವೇತನ ಆಯೋಗದ ಶಿಫಾರಸು ಜಾರಿ ಮಾಡಿಲ್ಲ. ಈಗ ದಲ್ಲಾಳಿ ವ್ಯವಹಾರ ಶುರು ಮಾಡಿದ್ದಾರೆ’ ಎಂದು ಟೀಕಿಸಿದರು.
ಕೋಡಿಹಳ್ಳಿ ವಶ, ಬಿಡುಗಡೆ: ಇದಕ್ಕೂ ಮೊದಲು ಪೊಲೀಸರು ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಕ್ಯಾಂಪ್ ಠಾಣೆ ಪೊಲೀಸರು ಶನಿವಾರ ಬೆಳಿಗ್ಗೆ ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು. ರೈತ ಮುಖಂಡರು ಹಾಗೂ ಮುಷ್ಕರದಲ್ಲಿ ತೊಡಗಿರುವ ಸಾರಿಗೆ ನೌಕರರನ್ನು ಭೇಟಿಯಾಗಿ, ಮುಂದಿನ ಹೋರಾಟದ ಬಗ್ಗೆ ಚರ್ಚಿಸುವುದಕ್ಕಾಗಿ ಅವರು ‘ಮಿಲನ್’ ಹೋಟೆಲ್ಗೆ ಬಂದಿದ್ದರು. ಅಲ್ಲಿಂದಲೇ ಪೊಲೀಸರು ಕರೆದೊಯ್ದರು.
ಆಗ ಕೋಡಿಹಳ್ಳಿ ಅವರು ‘ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯಮೊಟಕುಗೊಳಿಸಲಾಗುತ್ತಿದೆ. ನನ್ನನ್ನು ವಶಕ್ಕೆ ಪಡೆದು ಸರ್ಕಾರ ತಪ್ಪು ನಿರ್ಧಾರ ತೆಗೆದುಕೊಂಡಿದೆ. ಇದನ್ನೂ ಸ್ವಾಗತಿಸುತ್ತೇನೆ’ ಎಂದು ಹೇಳಿದರು.
‘ಅವರು ಅನುಮತಿ ಪಡೆಯದೆ ಸಭೆ ಆಯೋಜಿಸಿದ್ದರು. ಹೀಗಾಗಿ, ಅವರನ್ನು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿಗೆ ಹೋಗುವುದಾಗಿ ಅವರು ತೆರಳಿದರು’ ಎಂದು ಡಿಸಿಪಿ ಯಶೋದಾ ವಂಟಗೋಡಿ ‘ಪ್ರಜಾವಾಣಿ’ಗೆ ತಿಳಿಸಿದರು. ಸಭೆಗೆ ಬರುತ್ತಿದ್ದ 23 ಜನರನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದರು.
ಮುಷ್ಕರ: 31 ಸಿಬ್ಬಂದಿ ವಜಾ
ಕಲಬುರ್ಗಿ: ಮೂರು ದಿನಗಳಿಂದ ಮುಷ್ಕರದಲ್ಲಿ ಪಾಲ್ಗೊಂಡ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 31 ಸಿಬ್ಬಂದಿಯನ್ನು ವಜಾಗೊಳಿಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮಾರಾವ್ ಶನಿವಾರ ಆದೇಶ ಹೊರಡಿಸಿದ್ದಾರೆ.
8 ಮಂದಿ ತರಬೇತಿ ಸಿಬ್ಬಂದಿ, 23 ಕಾಯಂ ಸಿಬ್ಬಂದಿ ಇವರಲ್ಲಿದ್ದಾರೆ. ಸಂಸ್ಥೆಗೆ ರೂಪಾಯಿ ಆದಾಯ ಕಡಿತವಾಗುತ್ತಿದೆ. ತಕ್ಷಣಕ್ಕೆ ಕೆಲಸಕ್ಕೆ ಹಾಜರಾಗಬೇಕು ಎಂದು ಎಚ್ಚರಿಕೆ ನೀಡಿದ ಮೇಲೂ ಇವರು ಹಾಜರಾಗಿಲ್ಲ. ಹಾಗಾಗಿ, ವಜಾ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
22 ಜನರಿಗೆ ‘ಡೀಮ್ಡ್ ಟು ಲೀವ್’ ಶಿಕ್ಷೆ
ಗದಗ: ಗದಗದಲ್ಲಿ 22 ಮಂದಿ ಸಾರಿಗೆ ಸಿಬ್ಬಂದಿಯನ್ನು ಶಿರಸಿ, ಚಿಕ್ಕೋಡಿ ವಿಭಾಗಕ್ಕೆ ವರ್ಗ ಮಾಡಲಾಗಿದೆ. ಗದಗ ವಿಭಾಗದಲ್ಲಿ ಶನಿವಾರ 37 ಬಸ್ಗಳು ಸಂಚರಿಸಿವೆ. ಭಾನುವಾರ 100ಕ್ಕೂ ಅಧಿಕ ಬಸ್ಗಳು ಸಂಚಾರ ಆರಂಭಿಸಲಿವೆ.
‘ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ ತರಲು ಸರ್ಕಾರ ‘ಪ್ರಭಾವಕಾರಿಯಾಗಿ ಬಿಡುಗಡೆ’ ಮಾಡುವ ‘ಡೀಮ್ಡ್ ಟು ಲೀವ್’ ಸೂತ್ರ ಅನುಸರಿಸಿದೆ. ವರ್ಗ ಆದವರು ನಾಳೆಯೇ ಸೂಚಿತ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು. ಮುಂದೆ ಈ ಡಿಪೋಗೂ ಅವರಿಗೂ ಸಂಬಂಧ ಇರುವುದಿಲ್ಲ. ಉಳಿದಂತೆ ಕರ್ತವ್ಯಕ್ಕೆ ಬರಲು ಸೂಚಿಸಿ 33 ಮಂದಿಗೆ ನೋಟಿಸ್ ನೀಡಲಾಗಿದೆ’ ಎಂದು ಗದಗ ವಿಭಾಗದ ಅಧಿಕಾರಿ ಜಿ.ಐ.ಬಸವಂತಪುರ ತಿಳಿಸಿದ್ದಾರೆ.
12 ಸಿಬ್ಬಂದಿ ವರ್ಗಾವಣೆ: ಕೆಎಸ್ಆರ್ಟಿಸಿ ಮಂಗಳೂರು ವಿಭಾಗದಲ್ಲಿ ಇಬ್ಬರು ತಾಂತ್ರಿಕ ಸಿಬ್ಬಂದಿ ಹಾಗೂ 15 ಚಾಲಕರು ಸೇರಿದಂತೆ 17 ಜನರನ್ನು ವರ್ಗಾವಣೆ ಮಾಡಲಾಗಿದೆ.
ಸಿಬ್ಬಂದಿ ನಿಧಾನವಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಶನಿವಾರ ಒಟ್ಟು 120 ಬಸ್ಗಳು ಸಂಚರಿಸಿದ್ದು, ಭಾನುವಾರ 200ಕ್ಕೂ ಅಧಿಕ ಬಸ್ಗಳು ಸಂಚರಿಸಲಿವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್ ತಿಳಿಸಿದ್ದಾರೆ.
*
ಈ ರೀತಿ ಬಂಧಿಸುವುದು ಸರಿಯಲ್ಲ. ದೆಹಲಿಯಲ್ಲಿ ಮಾಡಿದಂತೆ ಇಲ್ಲೂ ಮಾಡೋಣ ಎಂದು ಸರ್ಕಾರ ಮುಂದಾಗಿದೆ. ಇದು ಜಾಸ್ತಿ ದಿನ ಉಳಿಯುವುದಿಲ್ಲ.
-ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
*
ಸಾರಿಗೆ ನೌಕರರು ಮನುಷ್ಯರೇ. ಸರ್ಕಾರ ಶತ್ರುಗಳಂತೆ ನೋಡುತ್ತಿರುವುದು ಸಾಧುವಲ್ಲ. ಸೌಹಾರ್ದಯುತವಾಗಿ ಮಾತುಕತೆ ನಡೆಸಬೇಕು.
-ಕೆ.ಆರ್.ರಮೇಶ್ ಕುಮಾರ್, ಶಾಸಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.