ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಟಿಜಿಟಿ ಮಳೆ, ಗಾಳಿ: ನೆಲಕ್ಕುರುಳಿದ ಭತ್ತದ ಬೆಳೆ

Last Updated 17 ನವೆಂಬರ್ 2021, 21:21 IST
ಅಕ್ಷರ ಗಾತ್ರ

ಕೊಪ್ಪಳ/ರಾಯಚೂರು: ಜಿಟಿಜಿಟಿ ಮಳೆ ಹಾಗೂ ಗಾಳಿಯಿಂದಾಗಿ ಕೊಪ್ಪಳ, ರಾಯಚೂರು ಜಿಲ್ಲೆಗಳ ಹಲವೆಡೆ, ಕಟಾವು ಹಂತಕ್ಕೆ ಬಂದಿದ್ದ ಭತ್ತದ ಬೆಳೆ ನೆಲಕ್ಕೆ ಉರುಳಿದೆ. ಮೋಡ ಕವಿದ ವಾತಾವರಣ, ತೇವಾಂಶ ಹೆಚ್ಚಾಗಿರುವುದರಿಂದ ಕಟಾವು ಮಾಡಲು ಆಗುತ್ತಿಲ್ಲ. ಭತ್ತ ಕಪ್ಪಾಗುವ ಆತಂಕ ಎದುರಾಗಿದೆ.

ಕೊಪ್ಪಳ ಜಿಲ್ಲೆಯ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ 35 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದು, ಗಂಗಾವತಿ, ಕಾರಟಗಿ ತಾಲ್ಲೂಕುಗಳಲ್ಲಿ ಹೆಚ್ಚು ಬೆಳೆ ನೆಲಕ್ಕುರುಳಿದೆ.

‘ನಾಲ್ಕು ತಿಂಗಳಗಳ ಕಾಲ‌ ಬೆಳೆಯನ್ನು ಜೋಪಾನವಾಗಿ ಕಾಪಾಡಿಕೊಂಡಿದ್ದೆವು. ಆದರೆ, ಇದೀಗ ಬೆಳೆ ಸಂಪೂರ್ಣ ನಾಶವಾಗಿದೆ' ಎನ್ನುತ್ತಾರೆ ಗಂಗಾವತಿಯ ರೈತ ಶಂಕ್ರಪ್ಪ.

ಒಟ್ಟು ಬಿತ್ತನೆಯಲ್ಲಿ ಶೇ 30 ರಷ್ಟು ಬೆಳೆ ಕಟಾವು ಮಾಡಿದ್ದು, ಭತ್ತಕ್ಕೆ ಸರಿಯಾದ ಬೆಲೆ ಸಿಗದೆ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ 1010 ತಳಿಯ ಭತ್ತ ಪ್ರತಿ ಕ್ವಿಂಟಲ್‌ಗೆ ₹ 1,100ರಿಂದ ₹1120, ಕಾವೇರಿ ಸೋನಾ ₹ 1230ರಿಂದ ₹ 1300, ಆರ್.ಎನ್.ಆರ್ ₹ 1350ರಿಂದ ₹ 1430, ಸೋನಾ ₹ 1220ರಿಂದ ₹ 1270 ಬೆಲೆ ಇದೆ.

‘ದೀಪಾವಳಿ ಹಬ್ಬದ ನಂತರ ಭತ್ತ ಖರೀದಿ ಮಾಡುವುದು ವಾಡಿಕೆ. ಆದರೆ ಈ ಬಾರಿ ದೀಪಾವಳಿ ಕಳೆದು 15 ದಿನಗಳಾದರೂ ಭತ್ತಖರೀದಿಗೆ ವರ್ತಕರು ಆಸಕ್ತಿ ತೋರುತ್ತಿಲ್ಲ. ಸರ್ಕಾರ ಬೆಂಬಲ ಬೆಲೆಯಡಿ ನೋಂದಣಿ ಮಾಡಿಕೊಳ್ಳಲು ತಿಳಿಸಿದ್ದರೂ, ಅಲ್ಲಿ ಗುಣಮಟ್ಟ ಕೇಳುತ್ತಾರೆ’ ಎನ್ನುತ್ತಾರೆ ಸಣಾಪುರದ ರೈತಶಾಂತುಕುಮಾರ.‌

ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿರಾಯಚೂರು ತಾಲ್ಲೂಕಿನ ಚಂದ್ರಬಂಡಾ, ದೇವುಸುಗೂರು ಹೋಬಳಿ, ಸಿಂಧನೂರು ತಾಲ್ಲೂಕಿನ ಗಾಂಧಿನಗರ, ಸಾಸಲಮರಿ ಕ್ಯಾಂಪ್, ಜವಳಗೇರಾ, ಪಗಡದಿನ್ನಿ, ಕುರುಕುಂದಿ, ಹಂಚಿನಾಳ, ಹಂಚಿನಾಳ ಕ್ಯಾಂಪ್, ಉಪ್ಪಲದೊಡ್ಡಿ, ಕೋಳಬಾಳ, ಮಸ್ಕಿ ತಾಲ್ಲೂಕಿನ ಕಾಚಾಪುರ, ಸಿರವಾರ ತಾಲ್ಲೂಕಿನ ಶಿವನಗರ ಕ್ಯಾಂಪ್‌ ಹಾಗೂ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಹೋಬಳಿ ಗ್ರಾಮಗಳಲ್ಲಿ ಭತ್ತ ನೆಲಕಚ್ಚಿದೆ.

‘ಹತ್ತಿ ಬಿಡಿಸುವುದಕ್ಕೆ ಕೂಲಿಕಾರರು ಸಿಗುವುದೇ ದುರ್ಲಬವಾಗಿತ್ತು. ಈಗ ಮಳೆ ಕಾರಣದಿಂದ ರೈತರು ನಷ್ಟ ಅನುಭವಿಸುವ ಸ್ಥಿತಿ ಬಂದಿದೆ. ಇದೇ ಸ್ಥಿತಿ ಮುಂದುವರೆದರೆ ಹತ್ತಿ ಕಪ್ಪಾಗುತ್ತದೆ’ ಎಂದು ಜಾಲಿಬೆಂಚಿ ಗ್ರಾಮದ ಹತ್ತಿ ಬೆಳೆಗಾರ ಹುಲಿಗೆಪ್ಪ ಅಳಲು ತೋಡಿಕೊಂಡರು.

ಈರುಳ್ಳಿ ಬೆಳೆಗೆ ಹಾನಿ: ರಾಯಚೂರು ಜಿಲ್ಲೆಯ ಕವಿತಾಳಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಈರುಳ್ಳಿ ಬೆಳೆಗೆ ಹಾನಿಯಾಗಿದೆ.

‘ಕೊಳೆ ರೋಗದಿಂದ ಈರುಳ್ಳಿ ಭೂಮಿಯಲ್ಲಿಯೇ ಕೊಳೆಯುತ್ತಿದೆ. ಇದೀಗ ಉಳಿದ ಅಲ್ಪ ಸ್ವಲ್ಪ ಬೆಳೆಯೂ ಮಳೆಯಿಂದ ಹಾನಿಯಾಗಿದೆ’ ಎಂದು ಮಸ್ಕಿ ತಾಲ್ಲೂಕಿನ ಕಾಚಾಪುರ ಗ್ರಾಮದ ರೈತ ಪೊತ್ನಾಳ ಈರಣ್ಣ ನಾಯಕ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT