ಗುರುವಾರ , ಮೇ 19, 2022
20 °C

ಶಿವಮೊಗ್ಗದಲ್ಲಿ ಕೋಮು ಗಲಭೆಗೆ ಪ್ರಭಾವಿಗಳಿಂದ ಸಂಚು: ಡಿ.ಕೆ. ಶಿವಕುಮಾರ್‌ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆ ಪ್ರಕರಣದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಶಿವಮೊಗ್ಗ ನಗರದಲ್ಲಿ ಕೋಮು ಗಲಭೆ ಸೃಷ್ಟಿಸಲು ಪ್ರಭಾವಿ ವ್ಯಕ್ತಿಗಳು ಸಂಚು ನಡೆಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಶಿವಮೊಗ್ಗದಲ್ಲಿ ಮುಸ್ಲಿಂ ಹತ್ಯೆಗೆ ಸಂಚು ನಡೆಸಿದ್ದ ಪ್ರಕರಣವನ್ನು ಪೊಲೀಸರು ಬಯಲಿಗೆ ತಂದಿದ್ದಾರೆ. ಅದೇ ಗುಂಪು ಕೋಮು ಗಲಭೆ ನಡೆಸಲು ಸಂಚು ನಡೆಸಿರುವ ಮಾಹಿತಿ ಇದೆ’ ಎಂದರು.

‘ಶಿವಮೊಗ್ಗದಲ್ಲಿ ಒಂದು ಟ್ರಸ್ಟ್ ಇದೆ. ಅದರಲ್ಲಿ ದೊಡ್ಡವರು ಸದಸ್ಯರಾಗಿದ್ದಾರೆ. ಆ ಟ್ರಸ್ಟ್ ಸದಸ್ಯರು ಹಾಗೂ ಇತರರು ಸೇರಿ ಕೊಲೆಗೆ ತಯಾರಿ ಮಾಡಿದ್ದಾರೆ. ಶಿವಮೊಗ್ಗ ಪೊಲೀಸರು ಬುದ್ಧಿವಂತಿಕೆ ಪ್ರದರ್ಶಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಈ ಕ್ರಮ ತೆಗೆದುಕೊಳ್ಳದಿದ್ದರೆ ರಾಜ್ಯದಲ್ಲಿ ಕೋಮು ಗಲಭೆ ನಡೆಯುವ ಸಂಭವವಿತ್ತು. ಈ ಪ್ರಕರಣದ ಎಫ್ಐಆರ್ ನನ್ನ ಬಳಿ ಇದೆ. ಟ್ರಸ್ಟ್ ಸದಸ್ಯನೂ ಆಗಿರುವ ಪ್ರಮುಖ ಆರೋಪಿಯೊಬ್ಬ ತಲೆಮರೆಸಿಕೊಂಡಿದ್ದಾನೆ’ ಎಂದರು.

ಈ ಪ್ರಕರಣದ ಕುರಿತು ತನಿಖೆ ನಡೆಸಿದರೆ ಆರೋಪಿಗಳು ಸದಸ್ಯರಾಗಿರುವ ಟ್ರಸ್ಟ್ ಯಾವುದು, ಅದರಲ್ಲಿ ಯಾರೆಲ್ಲಾ ಪ್ರಭಾವಿಗಳು ಇದ್ದಾರೆ, ಕೊಲೆ ಸಂಚಿನಲ್ಲಿ ಅವರ ಪಾತ್ರ ಏನಿದೆ ಎಂಬುದು ಬಹಿರಂಗವಾಗಲಿದೆ ಎಂದು ಹೇಳಿದರು.

ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ. ಜಾರ್ಜ್‌ ಅವರನ್ನು ಕಾಂಗ್ರೆಸ್‌ ರಕ್ಷಿಸಿತ್ತು ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ಈಶ್ವರಪ್ಪ ವಿರುದ್ಧ ಎಫ್‌ಐಆರ್‌ ದಾಖಲಿಸುವಾಗಲೇ ಅವರ ರಕ್ಷಣಗೆ ಪ್ರಯತ್ನ ನಡೆದಿದೆ. ದೂರಿನಲ್ಲಿ ಶೇಕಡ 40ರಷ್ಟು ಲಂಚಕ್ಕೆ ಬೇಡಿಕೆ ಇಟ್ಟ ಆರೋಪವಿದ್ದರೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿಲ್ಲ’ ಎಂದರು.

‘ತನಿಖೆ ಇನ್ನೂ ನಡೆಯುತ್ತಿದೆ. ಆದರೆ, ಈಶ್ವರಪ್ಪ ನಿರ್ದೋಷಿಯಾಗಿ ಬರುತ್ತಾರೆ ಎಂದು ಮುಖ್ಯಮಂತ್ರಿಯವರು ಈಗಲೇ ಹೇಳುತ್ತಿದ್ದಾರೆ. ಮತ್ತೆ ಮಂತ್ರಿ ಆಗುತ್ತಾರೆ ಎಂದೂ ಹೇಳಿದ್ದಾರೆ. ಬೊಮ್ಮಾಯಿ ಅವರು ನ್ಯಾಯಾಧೀಶರೆ? ಅವರ ಈ ಹೇಳಿಕೆಯಿಂದ ತನಿಖೆಯ ಮೇಲೆ ಪ್ರಭಾವ ಬೀರಿದಂತಾಗುವುದಿಲ್ಲವೆ? ಮುಖ್ಯಮಂತ್ರಿಯೇ ಈ ರೀತಿ ಹೇಳಿದರೆ ಪೊಲೀಸರು ಹೇಗೆ ತನಿಖೆ ನಡೆಸುತ್ತಾರೆ’ ಎಂದು ಪ್ರಶ್ನಿಸಿದರು.

‘ಈಶ್ವರಪ್ಪನವರ ಬಂಧನ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಬಂಧಿಸುವುದು ನಂತರದ ವಿಚಾರ. ಆದರೆ, ಮೊದಲು ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಅದರ ಬದಲು ಮುಖ್ಯಮಂತ್ರಿಗಳೇ ನ್ಯಾಯಾಧೀಶರಾಗಿ ಆಗಿ ಕ್ಲೀನ್ ಚಿಟ್ ನೀಡುತ್ತಿದ್ದಾರೆ. ನಾವು ಈ ನೆಲದ ಕಾನೂನು ರಕ್ಷಣೆಗೆ ಜನರ ಮುಂದೆ ಹೋಗುತ್ತೇವೆ. ನಮ್ಮ ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡಿ ತಿಳಿಸುತ್ತೇವೆ’ ಎಂದರು.

ಧಮಕಿ ಹಾಕಿದ ದಾಖಲೆಗಳಿವೆ: ‘ಡಿ.ಕೆ. ಶಿವಕುಮಾರ್‌ ಬಹಳ ಪ್ರಾಮಾಣಿಕ ವ್ಯಕ್ತಿ. ಅವರಿಗೆ ಅಣ್ಣಾ ಹಜಾರೆ ಅವರ ವರ್ಚಸ್ಸು ಇದೆ’ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ವ್ಯಂಗ್ಯವಾಗಿ ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಸಿ.ಟಿ. ರವಿ ಅವರು ಬಹಳ ದೊಡ್ಡವರು. ಅವರ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಅವರು ಅಧಿಕಾರಿಗಳಿಗೆ ಫೋನ್ ಕರೆ ಮಾಡಿ ಧಮಕಿ ಹಾಕಿರುವ ಬಗ್ಗೆ ಮಾಹಿತಿ, ದಾಖಲೆಗಳಿವೆ. ಸಮಯ ಬಂದಾಗ ಎಲ್ಲವನ್ನು ಬಹಿರಂಗಪಡಿಸುತ್ತೇವೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು