ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಕ್ಕೆ ಬಂದೇ ಬರುತ್ತೇವೆ: ಎಲ್ಲ ಟೆಂಡರ್‌ ರದ್ದು ಮಾಡುತ್ತೇವೆ– ಡಿಕೆಶಿ

ಚುನಾವಣೆಗೆ ಹಣ ವಸೂಲಿಗೆ ತರಾತುರಿಯಲ್ಲಿ ಟೆಂಡರ್‌– ಕಾಂಗ್ರೆಸ್‌ ಆರೋಪ
Last Updated 15 ಫೆಬ್ರುವರಿ 2023, 4:58 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯದಲ್ಲಿ ವಸೂಲಿ ಹೆಚ್ಚಿದೆ. ಇದನ್ನು ಸುಮ್ಮನೆ ಬಿಡುವುದಿಲ್ಲ. ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ಆರು ತಿಂಗಳ ಹಿಂದಿನ ಎಲ್ಲ ಟೆಂಡರ್‌ಗಳನ್ನು ರದ್ದು ಮಾಡುತ್ತೇವೆ. ಅಧಿಕಾರಿಗಳನ್ನು, ಗುತ್ತಿಗೆದಾರರು, ರಾಜಕಾರಣಿಗಳನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಎಚ್ಚರಿಕೆ ನೀಡಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಮತ್ತು ಶಾಸಕ ಪ್ರಿಯಾಂಕ ಖರ್ಗೆ ಜೊತೆ ಬುಧವಾರ ಬೆಳಿಗ್ಗೆ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂಥ ಕೆಟ್ಟ ಸರ್ಕಾರ, ಭ್ರಷ್ಟ ಸರ್ಕಾರ ರಾಜ್ಯದಲ್ಲಿ ಹಿಂದೆಂದೂ ಇರಲಿಲ್ಲ’ ಎಂದರು.

‘ಸರ್ಕಾರ ಇನ್ನು ಒಂದು ತಿಂಗಳು ಮಾತ್ರ ಇರಲಿದೆ. ಬಜೆಟ್ ಅಧಿವೇಶನ ಬಳಿಕ ಮಾರ್ಚ್‌ 7ರಿಂದ ನೀತಿಸಂಹಿತೆ ಬರಲಿದೆ. ಹೀಗಾಗಿ, ಎಲ್ಲ ಇಲಾಖೆಗಳಲ್ಲಿ ತರಾತುರಿಯಲ್ಲಿ ಟೆಂಡರ್ ಮಾಡುತ್ತಿದ್ದಾರೆ. ಜಲಸಂಪನ್ಮೂಲ, ಆರೋಗ್ಯ, ಲೋಕೋಪಯೋಗಿ ಇಲಾಖೆ ಸೇರಿದಂತೆ ಹಲ‌ವು ಇಲಾಖೆಗಳಲ್ಲಿ ತರಾತುರಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ‌₹ 500 ಕೋಟಿ ಟೆಂಡರ್ ಮೊತ್ತ ಇದ್ದರೆ, ಅದನ್ನು ₹ 1 ಸಾವಿರ ಕೋಟಿ ಅಂದಾಜು ಪಟ್ಟಿ ತಯಾರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಏಳು ದಿನ ಮಾತ್ರ ಸಮಯ ಕೊಟ್ಟು ಶಾಸಕರಿಗೇ ಹಂಚಿದ್ದಾರೆ. ಗುತ್ತಿಗೆದಾರರನ್ನು ಸೆಟ್ ಮಾಡಬೇಕು ಎಂದು ಶಾಸಕರಿಗೇ ಹಂಚಿ ಬಿಟ್ಟಿದ್ದಾರೆ. ಬೀದಿಯಲ್ಲಿ ನಿಂತು ಬನ್ನಿ ಎಂದು ಗುತ್ತಿಗೆದಾರರನ್ನು ಕರೆಯುತ್ತಿದ್ದಾರೆ. ಮಂತ್ರಿ ಮಾಡದೇ ಇರುವವರಿಗೆ ₹ 2 ಸಾವಿರ ಕೋಟಿ, ₹ 3 ಸಾವಿರ ಕೋಟಿ ಮೊತ್ತದ ಕೆಲಸ ಹಂಚಿಕೆ ಮಾಡುತ್ತಿದ್ದಾರೆ. ನಮಗೆ ಅವರದೇ ಪಕ್ಷದ ಶಾಸಕರು ಮಾಹಿತಿ ಕೊಡುತ್ತಿದ್ದಾರೆ’ ಎಂದರು.

‘ಪಾರದರ್ಶಕವಾಗಿ ಯಾವುದೇ ಟೆಂಡರ್ ನಡೆಯುತ್ತಿಲ್ಲ. ಬಿಡಿಎ ಕಾರಂತ ಬಡಾವಣೆ ಇನ್ನೂ ಹಂಚಿಕೆ ಆಗಿಲ್ಲ. ಅಲ್ಲಿ ₹ 3 ಸಾವಿರ ಕೋಟಿ ಟೆಂಡರ್ ಕರೆದಿದ್ದಾರೆ. ಚುನಾವಣೆಗೆ ವಸೂಲಿ ವಸೂಲಿ ಬಾಜಿ ನಡೆಯುತ್ತಿದೆ’ ಎಂದು ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

‘ಹಾಲು ಒಕ್ಕೂಟಗಳು ಸೇರಿದಂತೆ ನಿಗಮ ಮಂಡಳಿಗಳು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ಎಲ್ಲ ನೇಮಕಾತಿಗಳನ್ನು ತನಿಖೆ ನಡೆಸಬೇಕು. ಲೋಕಾಯುಕ್ತ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು‘ ಎಂದೂ ಆಗ್ರಹಿಸಿದರು.

ನ್ಯಾಯಾಲಯದ ಮೊರೆ ಹೋಗುತ್ತೇವೆ– ಸಿದ್ದರಾಮಯ್ಯ

‘ಸರ್ಕಾರದಲ್ಲಿ ಅಸಮಾಧಾನ ಇರುವವರು ಯೋಜನೆಗಳಿಗೆ ಅನುಮತಿ ಪಡೆದುಕೊಳ್ಳತ್ತಿದ್ದಾರೆ. ಹಣ ಮಾಡಲು ತರಾತುರಿಯಲ್ಲಿ ಅನುಮತಿ ನೀಡಲಾಗುತ್ತಿದೆ. ಕಮಿಷನ್ ಹೊಡೆಯಲು ಹೀಗೆ ಮಾಡುತ್ತಿದ್ದಾರೆ. ಇದು ಶೇ 40 ಕಮಿಷನ್‌ನ ಮುಂದುವರೆದ ಭಾಗ. ಇದು ಜನರ ತೆರಿಗೆ ಹಣ. ಜನರ ಬೆವರಿನ ಹಣ. ಅದನ್ನು ರಕ್ಷಣೆ ಮಾಡುವುದು ನಮ್ಮ ಜವಬ್ದಾರಿ’ ಎಂದು ಸಿದ್ದರಾಮಯ್ಯ ಹೇಳಿದರು.

‘ಟೆಂಡರ್ ಹಣವನ್ನು ಹೆಚ್ಚು ಮಾಡಿದ್ದಾರೆ‌. ಹೆಚ್ಚು ಕಮಿಷನ್ ಕೊಟ್ಟವರಿಗೆ ಟೆಂಡರ್ ಕೊಡಲಾಗುತ್ತಿದೆ. ಅವರಿಗೆ ಬೇಕಾದವರಿಗೆ ಟೆಂಡರ್ ಕೊಟ್ಟು ಕಮಿಷನ್ ವಸೂಲಿ ನಡೆಯುತ್ತಿದೆ. ಮುಖ್ಯಮಂತ್ರಿ ಕಚೇರಿಯಿಂದಲೇ ಕಮಿಷನ್ ದಂಧೆ ಆರಂಭವಾಗಿದೆ. ಇದಕ್ಕಾಗಿಯೇ ಮುಖ್ಯಮಂತ್ರಿ ಕಚೇರಿಯಲ್ಲಿ ಒಬ್ಬರನ್ನು ಕೂರಿಸಲಾಗಿದೆ. ಚುನಾವಣೆ ಬರುತ್ತಿರುವ ಕಾರಣ ದುಡ್ಡು ದೋಚಲು ಹೊರಟಿದ್ದಾರೆ. ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗುತ್ತೇವೆ. ಕಾನೂನಾತ್ಮಕ ಹೋರಾಟ ನಡೆಸುತ್ತೇವೆ’ ಎಂದು ಗುಡುಗಿದರು.

‘ಈ ಸರ್ಕಾರಕ್ಕೆ ಮಾನ ಮರ್ಯಾದೆ ಏನಾದರೂ ಇದೆಯಾ? ಇಂತಹ ಭ್ರಷ್ಟ ಸರ್ಕಾರ ಯಾವ ಕಾಲದಲ್ಲೂ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಮುಖ್ಯಸ್ಥ. ಇವರ ಸರ್ಕಾರದಲ್ಲಿ ಅತ್ಯಂತ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ. ಸರ್ಕಾರ, ಅಧಿಕಾರಿಗಳು, ಗುತ್ತಿಗೆದಾರರಿಗೆ ಎಚ್ಚರಿಕೆ ನೀಡುತ್ತೇವೆ. ನಾವು ಇದನ್ನು ಸುಮ್ಮನೆ ಬಿಡುವುದಿಲ್ಲ. ಇದರ ವಿರುದ್ಧ ಕೋರ್ಟ್‌ಗೂ ಹೋಗುತ್ತೇವೆ. ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ. ತನಿಖಾ ಸಮಿತಿ ರಚನೆ ಮಾಡುತ್ತೇವೆ. ಯಾರ‍್ಯಾರ ಮೇಲೆ ಆರೋಪ ಇದೆ ಅವೆಲ್ಲವನ್ನೂ ಬಯಲಿಗೆ ಎಳೆಯುತ್ತೇವೆ’ ಎಂದರು.

‘ಒಂದೇ ದಿನ ₹ 18 ಸಾವಿರ ಕೋಟಿ ಟೆಂಡರ್ ಆಗಿದೆ ಎಂದು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಪತ್ರ ಬರೆದಿದ್ದಾರೆ. ಇದು ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದೆ. ಚುನಾವಣೆಗೆ ಹಣ ಮಾಡಲು ಹೀಗೆ ಮಾಡುತ್ತಿದ್ದಾರೆ’ ಎಂದೂ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT