ಶನಿವಾರ, ಮೇ 21, 2022
28 °C

ವಿನಯ್‌ ಕುಲಕರ್ಣಿಯವರನ್ನು ಮಟ್ಟ ಹಾಕಲು ಬಿಜೆಪಿಯಿಂದ ಯತ್ನ: ಡಿ.ಕೆ.ಶಿವಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ವಿನಯ್ ಕುಲಕರ್ಣಿ ಪ್ರಭಾವಿ. ಹೀಗಾಗಿ, ಅವರನ್ನು ಮಟ್ಟಹಾಕಲು ಆ ಭಾಗದ ಬಿಜೆಪಿ ನಾಯಕರು ಹೊರಟಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ದೂರಿದರು.

ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿರುವುದನ್ನು ನಾನು ಗಮನಿಸಿದ್ದೇನೆ. ಈ ಹಿಂದೆ, ವಿನಯ್ ಕುಲಕರ್ಣಿ ಬಳಿ ಎಲ್ಲವನ್ನೂ ವಿಚಾರಿಸಿದ್ದೇನೆ. ಈಗಾಗಲೇ ಅವರ ಮೇಲೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ನಡೆಸಿ ಪೊಲೀಸರು ವರದಿ ನೀಡಿದ್ದಾರೆ’ ಎಂದರು.

‘ಸಿಬಿಐನವರು ರಾಜಕೀಯಕ್ಕೆ ತಲೆಬಾಗಬಾರದು. ಕೆ.ಜೆ. ಜಾರ್ಜ್‌ಗೆ ಸಿಬಿಐನವರು ಎಷ್ಟು ಕಿರುಕುಳ ಕೊಟ್ಟಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ. ರಾಜಕಾರಣದಲ್ಲಿ ಚಕ್ರ ತಿರುಗುತ್ತಿರುತ್ತದೆ. ಸಿಬಿಐನವರು ರಾಜಕೀಯ ಅಸ್ತ್ರ ಆಗಬಾರದು’ ಎಂದರು.

‘ವಿನಯ್ ಪ್ರಕರಣದಲ್ಲಿ ಕೆಲವು ಬಿಜೆಪಿಯವರಿಗೆ ಖುಷಿ ಆಗಿರಬಹುದು. ಆದರೆ, ದೇಶದ ಕಾನೂನಿ‌ನ ಬಗ್ಗೆ ನಮಗೆ ನಂಬಿಕೆ ಇದೆ. ನಮ್ಮವರು ಯಾರೂ ಯಾವುದೇ ತಪ್ಪು ಮಾಡಿಲ್ಲ. ನಮ್ಮ ನಾಯಕರನ್ನು ಮುಗಿಸಲು ಈ ರೀತಿ ಮಾಡುತ್ತಿದ್ದಾರೆ. ನನ್ನ ಮೇಲಿನ ಪ್ರಕರಣದಲ್ಲೂ ಯಡಿಯೂರಪ್ಪ ವಿಚಾರಣೆಗೆ ಅನುಮತಿ ಕೊಟ್ಟಿದ್ದರು. ಸಿಬಿಐನವರು ಕಾನೂನು ಬಿಟ್ಟು ಏನನ್ನೂ‌ ಮಾಡುವುದಿಲ್ಲವೆಂಬ ವಿಶ್ವಾಸವಿದೆ’ ಎಂದರು.

‘ಈ ಸಂದರ್ಭದಲ್ಲಿ ನಾನು ಹೆಚ್ಚು ಮಾತನಾಡುವುದಿಲ್ಲ.  ಬಿಜೆಪಿಯ ಒಬ್ಬರು ಸಚಿವರು ವಿನಯ್ ಅವರನ್ನು ತಮ್ಮ ಪಕ್ಷ ಸೇರುವಂತೆ ಆಹ್ವಾನಿಸಿದ್ದರು. ಪ್ರಧಾನಿಯವರೂ ಈ ಬಗ್ಗೆ ಮಾತನಾಡಿಲ್ವಾ. ಬಿಜೆಪಿ ನಾಯಕರೇ ಈ ಬಗ್ಗೆ ಸ್ಪಷ್ಟನೆ ನೀಡಲಿ’ ಎಂದರು.

ಇದನ್ನೂ ಓದಿ... ಆರೋಪ, ಸಾಕ್ಷ್ಯಾಧಾರ ಕಾರಣ ವಿನಯ ಕುಲಕರ್ಣಿ ಬಂಧನ: ಯಡಿಯೂರಪ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು