ಶುಕ್ರವಾರ, ಮಾರ್ಚ್ 24, 2023
22 °C

ಕೆಪಿಎಸ್‌ಸಿ ನೇಮಕಾತಿ ರದ್ದು: ಸಿ.ಎಸ್‌ಗೆರಾಷ್ಟ್ರಪತಿ ಭವನದಿಂದ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2011ರ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವಿಧಾನ ಪರಿಷತ್‌ ಸದಸ್ಯರಾದ ಪಿ.ಆರ್‌. ರಮೇಶ್‌ ಮತ್ತು ಇತರರು ಬರೆದ ಪತ್ರವನ್ನು ರಾಜ್ಯ ಮುಖ್ಯ ಕಾರ್ಯದರ್ಶಿಗೆ (ಸಿಎಸ್‌) ಮರಳಿಸಿರುವ ರಾಷ್ಟ್ರಪತಿ ಸಚಿವಾಲಯ, ಈ ಬಗ್ಗೆ ಸೂಕ್ತ ಗಮನವಹಿಸುವಂತೆ ಸೂಚಿಸಿದೆ.

‘ಈ ಸಾಲಿನ ಅಧಿಸೂಚನೆಯನ್ನೇ ರದ್ದುಗೊಳಿಸಿ 2014ರ ಆಗಸ್ಟ್ 14ರಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆದು, ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೂ ನೇಮಕಾತಿ ಆದೇಶ ನೀಡಬೇಕು’ ಎಂದು ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಹಲವು ಸದಸ್ಯರು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಜೂನ್‌ 28ರಂದು ಪತ್ರ ಬರೆದಿದ್ದರು. ಈ ಪತ್ರದ ವಿಚಾರದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ರಾಷ್ಟ್ರಪತಿ ಭವನದ ವಿಶೇಷ ಕರ್ತವ್ಯಾಧಿಕಾರಿ ಆರ್‌.ಕೆ. ಶರ್ಮಾ ಸೂಚಿಸಿದ್ದಾರೆ.

ರಾಷ್ಟ್ರಪತಿಗೆ ಬರೆದಿದ್ದ ಪತ್ರಕ್ಕೆ ವಿಧಾನ ಪರಿಷತ್‌ ಸದಸ್ಯರಾದ ಆಯನೂರು ಮಂಜುನಾಥ, ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಪಿ. ಕುಮಾರಸ್ವಾಮಿ, ಶಾಸಕರಾದ ಈಶ್ವರ ಖಂಡ್ರೆ, ಎ.ಟಿ. ರಾಮಸ್ವಾಮಿ, ಆರಗ ಜ್ಞಾನೇಂದ್ರ, ರಾಜಾ ವೆಂಕಟಪ್ಪ ನಾಯಕ, ಅಖಂಡ ಶ್ರೀನಿವಾಸ ಮೂರ್ತಿ, ಕೆ.ಬಿ. ಅಶೋಕ ನಾಯ್ಕ, ಎನ್‌. ಮಹೇಶ್‌, ವಿಧಾನ ಪರಿಷತ್‌ ಸದಸ್ಯರಾದ ಆರ್‌. ಧರ್ಮಸೇನ, ಯು.ಬಿ. ವೆಂಕಟೇಶ್, ಮೋಹನ್‌ ಕುಮಾರ್‌ ಕೊಂಡಜ್ಜಿ, ವಿವೇಕರಾವ್‌ ವ. ಪಾಟೀಲ, ಕೆ.ಟಿ. ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಎನ್‌. ಅಪ್ಪಾಜಿ ಗೌಡ ಮತ್ತು ನಜೀರ್‌ ಅಹ್ಮದ್‌ ಸಹಿ ಮಾಡಿದ್ದರು.

‘2011ರ ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿ ಪ್ರಕ್ರಿಯೆಯ ವಿಚಾರದಲ್ಲಿ ಸಂವಿಧಾನದ ಉಲ್ಲಂಘನೆಯಾಗಿದೆ. ಸಂವಿಧಾನಕ್ಕೆ ವಿರುದ್ಧವಾಗಿ ಇಡೀ ಪ್ರಕ್ರಿಯೆಯನ್ನೇ ರದ್ದು ಮಾಡಲಾಗಿದೆ. ಇದರಿಂದ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಲ್ಲ. ನ್ಯಾಯ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ ಆಯ್ಕೆಯಾದ ಎಲ್ಲ ಅಭ್ಯರ್ಥಿಗಳಿಗೂ 2017ರ ಮಾರ್ಚ್‌ 17ರ ಆದೇಶದಂತೆ ನೇಮಕಾತಿ ಆದೇಶ ನೀಡಬೇಕು’ ಎಂದು ಎಂಟು ಪುಟಗಳ  ಪತ್ರದಲ್ಲಿ ಆಗ್ರಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು