ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ ನೇಮಕಾತಿ: ಸಂದರ್ಶನದ ಸುತ್ತ ಸಂಶಯದ ಹುತ್ತ

ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್ ಹುದ್ದೆ ₹ 40 ಲಕ್ಷಕ್ಕೆ ಬಿಕರಿ – ಆರೋಪ
Last Updated 17 ಜನವರಿ 2023, 21:48 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) 660 ಸಹಾಯಕ ಎಂಜಿನಿಯರ್ (ಎಇ) ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಸಂದರ್ಶನದ ಅಂಕ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗಿದೆ. ಸಂದರ್ಶನ ಪ್ರಕ್ರಿಯೆ ಬಗ್ಗೆಯೇ ಸಂದೇಹವಿದೆ’ ಎಂದು ಅಭ್ಯರ್ಥಿಗಳು ಆಯೋಗದ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.

‘400 ಅಂಕಗಳ ಲಿಖಿತ ಪರೀಕ್ಷೆಯಲ್ಲಿ ಕೇವಲ 83.50 ರಿಂದ 94 ಅಂಕ ಗಳಿಸಿದ ಅಭ್ಯರ್ಥಿಗಳಿಗೆ, ವ್ಯಕ್ತಿತ್ವ ಪರೀಕ್ಷೆಯಲ್ಲಿ (ಸಂದರ್ಶನ) ಒಟ್ಟು 50ಕ್ಕೆ 40 ಅಂಕಗಳನ್ನು ನೀಡಲಾಗಿದೆ. ಲಿಖಿತದಲ್ಲಿ 69 ಅಂಕ ಗಳಿಸಿದ ಅಭ್ಯರ್ಥಿಗೆ ಸಂದರ್ಶನದಲ್ಲಿ 39 ಅಂಕ ಕೊಡಲಾಗಿದೆ. ಆದರೆ, 236 ಅಂಕ ಗಳಿಸಿ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಅಭ್ಯರ್ಥಿಗೆ ಸಂದರ್ಶನದಲ್ಲಿ ಕೇವಲ 13.25 ಅಂಕ ನೀಡಲಾಗಿದೆ’ ಎಂದು ಕೆಲವೇ ಅಂಕಗಳಿಂದ ನೇಮಕಾತಿಯಿಂದ ವಂಚಿತ ರಾದ ಅಭ್ಯರ್ಥಿಗಳು ತಿಳಿಸಿದ್ದಾರೆ.

ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕದ ಆಧಾರದಲ್ಲಿ 1:3 ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನ ಮಂಡಳಿ ಈ ರೀತಿ ಅಂಕ ನೀಡಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

‘ಲಿಖಿತ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ್ದರೂ ವ್ಯಕ್ತಿತ್ವ ಪರೀಕ್ಷೆಯಲ್ಲಿ ಅಂಕ ನೀಡುವಾಗ ತಾರತಮ್ಯ ಮಾಡಲಾಗಿದೆ. ಲಕ್ಷಾಂತರ ರೂಪಾಯಿ ಪಡೆದು ಹುದ್ದೆಗಳನ್ನು ಬಿಕರಿ ಮಾಡಲಾಗಿದೆ’ ಎಂದು ಆರೋಪಿಸಿದ್ದಾರೆ.

ಈ ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ 2021 ರ ಡಿಸೆಂಬರ್‌ 13 ರಿಂದ 15ರವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. 2022ರ ನವೆಂಬರ್‌ 7ರಿಂದ 2023ರ ಜನವರಿ 6ರವರೆಗೆ ವ್ಯಕ್ತಿತ್ವ ಪರೀಕ್ಷೆ ನಡೆಸಿದ್ದ ಕೆಪಿಎಸ್‌ಸಿ, 24 ಗಂಟೆಯ ಒಳಗೇ (ಮರುದಿನ ರಾತ್ರಿ) ನೇಮಕಾತಿಗೆ ಅರ್ಹರಾಗಿರುವವರ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಿತ್ತು.

‘1:3 ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆಯಾದ 1,974 ಅಭ್ಯರ್ಥಿಗಳ ಪೈಕಿ 67 ಅಭ್ಯರ್ಥಿಗಳು ನಾನಾ ಕಾರಣಗಳಿಗೆ ಅಸಿಂಧು ಆಗಿದ್ದರು. ಉಳಿದ 1,907 ಅಭ್ಯರ್ಥಿಗಳಿಗೆ ಸಂದರ್ಶಕ ಮಂಡಳಿ ನೀಡಿರುವ ಅಂಕಗಳು ಸಂದೇಹಗಳನ್ನು ಮೂಡಿಸುವಂತಿವೆ’ ಎನ್ನುವುದು ಅಭ್ಯರ್ಥಿಗಳ ಆರೋಪ.

ವ್ಯಕ್ತಿತ್ವ ಪರೀಕ್ಷೆಯಲ್ಲಿ 497 ಅಭ್ಯರ್ಥಿಗಳಿಗೆ ತಲಾ 40 ಅಂಕ ನೀಡಲಾಗಿದೆ. ಈ ಪೈಕಿ, ಲಿಖಿತ ಪರೀಕ್ಷೆಯಲ್ಲಿ 150 ಕ್ಕಿಂತ ಕಡಿಮೆ ಅಂಕ ಗಳಿಸಿದ ಹಲವರಿದ್ದಾರೆ. 170 ಮಂದಿಗೆ ತಲಾ 38 ರಿಂದ 39 ಅಂಕ ನೀಡಲಾಗಿದೆ.

ಹೀಗೆ ಒಟ್ಟು 667 ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆಯಲ್ಲಿ ಗಳಿಸಿದ ಸರಾಸರಿ ಅಂಕ 39.66. ಆದರೆ, ಅರ್ಧಕ್ಕಿಂತಲೂ ಹೆಚ್ಚು (1,125) ಅಭ್ಯರ್ಥಿಗಳಿಗೆ 50ರಲ್ಲಿ 20 ರಿಂದ 26ವರೆಗೆ ಅಂಕ ನೀಡಲಾಗಿದೆ. ಅದರಲ್ಲೂ, 352 ಅಭ್ಯರ್ಥಿಗಳಿಗೆ 20 ಅಂಕಗಳನ್ನಷ್ಟೇ ನೀಡಲಾಗಿದೆ. ಅರ್ಹರ ತಾತ್ಕಾಲಿಕ ಪಟ್ಟಿಯಲ್ಲಿ ಮೊದಲ ಹತ್ತು ಸ್ಥಾನ ಪಡೆದವರು 400 ಅಂಕಗಳ ಲಿಖಿತ ಪರೀಕ್ಷೆಯಲ್ಲಿ 250 ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ. ವ್ಯಕ್ತಿತ್ವ ಪರೀಕ್ಷೆಯಲ್ಲಿ ಅವರಿಗೆ ಸಿಕ್ಕಿರುವ ಅಂಕ ಸರಾಸರಿ 23.8 ಮಾತ್ರ!

‘ವ್ಯಕ್ತಿತ್ವ ಪರೀಕ್ಷೆಯಲ್ಲಿ ಅಭ್ಯರ್ಥಿ ಗಳಿಸಿದ ಅಂಕ, ಸಂದರ್ಶನ ಮಂಡಳಿಯ ನಾಲ್ವರು ಸದಸ್ಯರು ನೀಡಿದ ಅಂಕಗಳ ಸರಾಸರಿ ಆಗಬೇಕು. ಹೀಗಿದ್ದರೂ ಒಟ್ಟು ಅಭ್ಯರ್ಥಿಗಳಲ್ಲಿ ಶೇ 25 ರಷ್ಟು ಮಂದಿಗೆ ನಾಲ್ವರೂ ಒಂದೇ ಸಮನಾದ, ಅದೂ 40 ಅಂಕಗಳನ್ನು ನೀಡಿರುವುದು ಹೇಗೆ? ಅವರೆಲ್ಲರಿಗೂ ಈ 497 ಅಭ್ಯರ್ಥಿಗಳೂ ಅತ್ಯಂತ ಪ್ರತಿಭಾನ್ವಿತರು ಎಂದು ಅನಿಸಿದ್ದಲ್ಲಿ, ಕೆಲವರಿಗಾದರೂ 40 ಕ್ಕಿಂತ ಹೆಚ್ಚು ಅಂಕಗಳನ್ನು ನೀಡಿ, ಷರಾ ಬರೆಯಬಹುದಿತ್ತಲ್ಲವೇ’ ಎನ್ನುವುದು ಹುದ್ದೆವಂಚಿತರ ಪ್ರಶ್ನೆ.

‘ಹಣ ಕೊಟ್ಟವರಿಗೆ ಗರಿಷ್ಠ, ಉಳಿದವರಿಗೆ ಕನಿಷ್ಠ’
‘ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್‌ ಹುದ್ದೆಗೆ ಅಭ್ಯರ್ಥಿಗಳ ವ್ಯಕ್ತಿತ್ವ ಪರೀಕ್ಷೆ ಪ್ರಕ್ರಿಯೆಯನ್ನು ಪಾರದರ್ಶಕ ಮತ್ತು ನ್ಯಾಯೋಚಿತವಾಗಿ ನಡೆಸಲು ಹಾಗೂ ಸಹಜ ನ್ಯಾಯ ಒದಗಿಸುವ ಉದ್ದೇಶದಿಂದ ಆಯ್ಕೆ ಪ್ರಾಧಿಕಾರದ ಅಧ್ಯಕ್ಷರು (ಕೆಪಿಎಸ್‌ಸಿ) ನಾಲ್ವರ ಸಂದರ್ಶಕ ಮಂಡಳಿ ರಚಿಸಬೇಕು. ಈ ಸದಸ್ಯರು ನೀಡುವ ಅಂಕಗಳ ಸರಾಸರಿಯನ್ನು ಒಟ್ಟು ಅಂಕವೆಂದು ಪರಿಗಣಿಸಬೇಕು. 50 ಅಂಕಗಳ ಸಂದರ್ಶನದಲ್ಲಿ 40ಕ್ಕಿಂತ ಹೆಚ್ಚು ಅಥವಾ 20ಕ್ಕಿಂತ ಕಡಿಮೆ ಅಂಕ ನೀಡಿದರೆ, ಅದಕ್ಕೆ ಮಂಡಳಿಯು ಕಾರಣ ದಾಖಲಿಸಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿತ್ತು. ಆದರೆ, ಈ ಚೌಕಟ್ಟಿನೊಳಗೇ, ಹಣ ನೀಡಿರುವ ಅಭ್ಯರ್ಥಿಗಳಿಗೆ ಗರಿಷ್ಠ, ಉಳಿದವರಿಗೆ ಕನಿಷ್ಠ ಅಂಕಗಳನ್ನು ನೀಡಿ ಅನ್ಯಾಯ ಎಸಗಲಾಗಿದೆ. 40 ಅಂಕ ಪಡೆದ ಬಹುತೇಕ ಅಭ್ಯರ್ಥಿಗಳು ₹ 30 ಲಕ್ಷದಿಂದ ₹ 50 ಲಕ್ಷವರೆಗೆ ಹಣ ನೀಡಿದ್ದಾರೆ ಎನ್ನಲಾಗುತ್ತಿದೆ. ಪ್ರತಿಭೆ ಇದ್ದರೂ ಹಣ ಇಲ್ಲದೇ ಇದ್ದರೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ’ ಎನ್ನುವುದು ಹುದ್ದೆ ವಂಚಿತರ ಆರೋಪ.

**

ದೂರು ಬಂದಿರುವುದು ನಿಜ. ಆಯೋಗದ ಇಬ್ಬರು, ವಿಷಯ ತಜ್ಞರಿಬ್ಬರನ್ನು ಒಳಗೊಂಡ ಸಂದರ್ಶಕ ಮಂಡಳಿ ವ್ಯಕ್ತಿತ್ವ ಪರೀಕ್ಷೆ ನಡೆಸಿದೆ. ಅಂಕ ನೀಡುವುದು ಮಂಡಳಿಯ ವಿವೇಚನಾಧಿಕಾರ.
–ವಿಕಾಸ್‌ ಕಿಶೋರ್‌ ಸುರಳ್ಕರ್‌, ಕಾರ್ಯದರ್ಶಿ, ಕೆಪಿಎಸ್‌ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT