ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ವಿಶೇಷ | ಕೆಪಿಟಿಸಿಎಲ್‌ ನೇಮಕಾತಿ: ಮಾನಸಿಕ ಅಸ್ವಸ್ಥರಿಗೆ ಅವಕಾಶವಿಲ್ಲ

ಕುಷ್ಠರೋಗದಿಂದ ಗುಣಮುಖ ಆದವರಿಗೂ ಮೀಸಲಾತಿ ಅಲಭ್ಯ
Last Updated 19 ಫೆಬ್ರುವರಿ 2022, 20:35 IST
ಅಕ್ಷರ ಗಾತ್ರ

ಬೆಂಗಳೂರು: ಕೆಪಿಟಿಸಿಎಲ್‌ನಲ್ಲಿ ಖಾಲಿ ಇರುವ ಎಂಜಿನಿಯರ್ ಮತ್ತು ಕಿರಿಯ ಸಹಾಯಕರ ಹುದ್ದೆಗಳ ನೇಮಕಾತಿಯಲ್ಲಿ ಅಂಗವಿಕಲರ ಮೀಸಲಾತಿ ಒಳ ವರ್ಗೀಕರಣ ಅಸಮರ್ಪಕವಾಗಿದ್ದು, ಕುಷ್ಠರೋಗದಿಂದ ಗುಣಮುಖರಾದವರು, ಬುದ್ಧಿಮಾಂದ್ಯರು, ಮಾನಸಿಕ ಅಸ್ವಸ್ಥತೆ ಉಳ್ಳವರಿಗೆ ಅವಕಾಶವೇ ಅಲಭ್ಯವಾಗಿದೆ.

ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್, ಕಿರಿಯ ಸಹಾಯಕರು ಸೇರಿ ಒಟ್ಟು 1,492 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಕೆಪಿಟಿಸಿಎಲ್ ಹೊರಡಿಸಿದೆ. ಇದರಲ್ಲಿ 360 ಕಿರಿಯ ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಶೇ 5 ರಷ್ಟು ಹುದ್ದೆಗಳನ್ನು ಅಂಗವಿಕಲರಿಗೆ ಮೀಸಲಿರಿಸಲಾಗಿದೆ. ಅಂಗವಿಕರಿಗೆ ಲಭ್ಯ ಇರುವ 20 ಹುದ್ದೆಗಳಲ್ಲಿ ಅಂಧರಿಗೆ 11, ಚಲನ ಸಂಬಂಧ ವೈಕಲ್ಯ (ಕೈ ಅಥವಾ ಕಾಲುಗಳು ವಿಕಲರಾದವರು) ಉಳ್ಳವರಿಗೆ 5 ಹುದ್ದೆ, ಶ್ರವಣದೋಷ ಉಳ್ಳವರಿಗೆ 4 ಹುದ್ದೆಗಳನ್ನು ವಿಭಾಗಿಸಲಾಗಿದೆ.

‘ಕುಷ್ಠರೋಗದಿಂದ ಗುಣಮುಖರಾದವರು ಮತ್ತು ಮಾನಸಿಕ ಅಸ್ವಸ್ಥರಿಗೆ ಮೀಸಲಾತಿಯನ್ನೇ ಕಲ್ಪಿಸಿಲ್ಲ. ಈ ವರ್ಗದವರನ್ನು ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ. ಇದು ಅವರ ಮೂಲಭೂತ ಹಕ್ಕಿನ ಉಲ್ಲಂಘನೆ’ ಎಂದು ಉದ್ಯೋಗಾಕಾಂಕ್ಷಿಯ ಪೋಷಕರೊಬ್ಬರು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ಆಟಿಸಂ, ಬೌದ್ಧಿಕ ಅಸಾಮರ್ಥ್ಯ, ಕಲಿಕೆಯಲ್ಲಿ ಅಸಮರ್ಥತೆ ಮತ್ತು ಮಾನಸಿಕ ಅಸ್ವಸ್ಥತೆ ಶೇ 40ಕ್ಕಿಂತ ಹೆಚ್ಚಿಗೆ ಇದ್ದವರಿಗೆ ಮಾತ್ರ ಬುದ್ದಿಮಾಂದ್ಯರ ಪ್ರಮಾಣ ಪತ್ರ ನೀಡಲಾಗುತ್ತದೆ. 2016 ರ ಅಂಗವಿಕಲರ ಹಕ್ಕುಗಳ ಕಾಯ್ದೆ ಪ್ರಕಾರ ಅಂತವರಿಗೆ ಮಾನವೀಯತೆ ಆಧಾರದಲ್ಲಿ ಉದ್ಯೋಗ ಅವಕಾಶ ಕಲ್ಪಿಸಬೇಕು ಮತ್ತು ಸೂಕ್ತ ಹುದ್ದೆಯನ್ನೂ ಸೃಷ್ಟಿಸಿಕೊಡಬೇಕು. ಬುದ್ಧಿಮಾಂದ್ಯರೆಂದ ಕೂಡಲೇ ಕೆಲಸ ಮಾಡಲು ಅಸಮರ್ಥರು ಎಂಬ ನಿರ್ಧಾರಕ್ಕೆ ಬಂದು ಅವಕಾಶ ನಿರಾಕರಿಸಿದರೆ ಕಾಯ್ದೆಯ ಉದ್ದೇಶವೇ ಬುಡಮೇಲಾಗುತ್ತದೆ’ ಎಂದು ಅವರು ಹೇಳಿದರು.

‘ಕಿರಿಯ ಸಹಾಯಕ ಹುದ್ದೆಗೆ ದ್ವಿತೀಯ ಪಿಯುಸಿ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಅಷ್ಟು ವಿದ್ಯಾಭ್ಯಾಸ ಮಾಡಿದವರಿಗೆ ಕೆಲಸ ಮಾಡುವ ಸಾಮರ್ಥ್ಯ ಇದ್ದೇ ಇರುತ್ತದೆ, ಸ್ವಲ್ಪ ನಿಧಾನ ಆಗಬಹುದು ಅಷ್ಟೆ’ ಎಂದರು.

‘ಅವಕಾಶ ಕಲ್ಪಿಸದಿರುವ ಬಗ್ಗೆ ಪ್ರಶ್ನೆ ಮಾಡಿದರೆ ಕೆಪಿಟಿಸಿಎಲ್ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಿದ್ದಾರೆ. ಕೆಲ ವರ್ಗದ ಅಂಗವಿಕಲರನ್ನು ನೇಮಕಾತಿಯಿಂದ ಹೊರಗಿಡಲು ವಿನಾಯಿತಿ ಇದೆ ಎಂದು ಹೇಳುತ್ತಿದ್ದಾರೆ. ಸರ್ಕಾರ ಮೀಸಲಾತಿ ವರ್ಗೀಕರಣ ಮಾಡಿ ಹೊರಡಿಸಿರುವ ಅಧಿಸೂಚನೆ ಉಲ್ಲಂಘಿಸಿ ವಿನಾಯಿತಿ ಪಡೆದುಕೊಳ್ಳಲು ಕೆಪಿಟಿಸಿಎಲ್‌ಗೆ ಅಧಿಕಾರ ಎಲ್ಲಿದೆ’ ಎಂದು ಪ್ರಶ್ನಿಸಿದರು.

‌‘ಅಧಿಸೂಚನೆ ರದ್ದುಗೊಳಿಸಿ ಹೊಸದಾಗಿ ಮೀಸಲಾತಿ ಒಳ ವರ್ಗೀಕರಣ ಮಾಡದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು’ ಎಂದು ಅವರು ಎಚ್ಚರಿಸಿದರು.‌ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತು. ಕೆಪಿಟಿಸಿಎಲ್ ಅಧಿಕಾರಿಗಳು ಸಂಪರ್ಕಕ್ಕೆಬರಲಿಲ್ಲ.

ಒಳ ವರ್ಗೀಕರಣವೂ ಅಸಮರ್ಪಕ

‘ಕೆಲವರಿಗೆ ಅವಕಾಶ ಸಿಗದಂತೆ ಮಾಡಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಅಂಗವಿಕಲರ ಹಕ್ಕುಗಳ ಕಾಯ್ದೆ 2016ರ ಅಡಿಯಲ್ಲಿ ಮೀಸಲಾತಿ ಒಳ ವರ್ಗೀಕರಣ ಮಾಡಿ 2020ರಲ್ಲಿ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನೂ ಕೆಪಿಟಿಸಿಎಲ್ ಉಲ್ಲಂಘಿಸಿದೆ. 2009ರ ಆದೇಶವನ್ನೇ ಪಾಲನೆ ಮಾಡಲಾಗಿದೆ’ ಎಂದು ದೂರಿದರು.

‘ಹೊಸ ಆದೇಶದ ಪ್ರಕಾರ ಚಲನ ಸಂಬಂಧಿ ವೈಕಲ್ಯ ಉಳ್ಳವರಿಗೆ ಶೇ 2ರಷ್ಟು ಮೀಸಲಾತಿ ನಿಗದಿಯಾಗಿದೆ. ಕೆಪಿಟಿಸಿಎಲ್ ಅಧಿಸೂಚನೆಯಲ್ಲಿ 2009ರ ಆದೇಶದಲ್ಲಿ ಇರುವಂತೆ ಇವರಿಗೆ ಶೇ 1ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಅಂಧರಿಗೆ ಶೇ 2ರಷ್ಟು ಮೀಸಲಾತಿ ದೊರಕಿಸಲಾಗಿದೆ. ಕೆಪಿಟಿಸಿಎಲ್‌ ತನ್ನ ತಪ್ಪು ಸರಿಪಡಿಸಿಕೊಂಡು 2020ರ ಅಧಿಸೂಚನೆಯಂತೆ ಮೀಸಲಾತಿ ಒಳ ವರ್ಗೀಕರಣ ಮಾಡಬೇಕು’ ಎಂಬುದು ಉದ್ಯೋಗಾಕಾಂಕ್ಷಿಯ ಪೋಷಕರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT