ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 35ಕ್ಕೆ ಏರಿದೆ.
ರಾಯಬಾಗ ತಾಲ್ಲೂಕಿನ ಕೋಳಿಗುಡ್ಡ ಗ್ರಾಮದ ಸೋಮನಗೌಡ ಶಂಕರಗೌಡ ಪಾಟೀಲ (36) ಬಂಧಿತ. ಗದಗ ನಗರದ ಮುನ್ಸಿಪಲ್ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರದಿಂದ ಪ್ರಶ್ನೆ ಪತ್ರಿಕೆಯನ್ನು ಬಹಿರಂಗ ಮಾಡುವಲ್ಲಿ ಈ ಆರೋಪಿಯ ಪಾತ್ರ ಪ್ರಮುಖವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದರು.
ಗದಗನ ಮುನ್ಸಿಪಲ್ ಕಾಲೇಜು ಉಪ ಪ್ರಾಂಶುಪಾಲ ಮಾರುತಿ ಶಂಕರ ಸೋನವಣೆ ಹಾಗೂ ಇವರ ಪುತ್ರ ಸಮಿತ್‌ಕುಮಾರ್ ಮಾರುತಿ ಸೋನವಣೆ ಅವರನ್ನು ಈಗಾಗಲೇ ಬಂಧನವಾಗಿದೆ. ಸಮಿತ್‌ಕುಮಾರ್ ಜತೆಗೆ ಸೇರಿಕೊಂಡು ಡೀಲ್ ಕುದುರಿಸಿದ ಸೋಮನಗೌಡ ಅಭ್ಯರ್ಥಿಗಳಿಂದ ಮುಂಗಡವಾಗಿ ₹ 7.10 ಲಕ್ಷ ಪಡೆದಿದ್ದ. ಇದರಲ್ಲಿ ₹ 4.50 ಲಕ್ಷ ಸಮಿತ್‌ಕುಮಾರ್‌ಗೆ ನೀಡಿ, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಹೇಳಿದ್ದ.
ಡೀಲ್ ಪ್ರಕಾರ ಸಮಿತ್‌ಕುಮರ್ ಪರೀಕ್ಷೆ ನಡೆದ ದಿನ ಪ್ರಶ್ನೆ ಪತ್ರಿಕೆಯ ಪ್ರತಿಯನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದ್ದ. ಇದೇ ಕಾಪಿಯನ್ನು ಸೋಮನಗೌಡ ಉತ್ತರ ಹೇಳುವ ತಮ್ಮ ತಂಡಕ್ಕೆ ಕಳುಹಿಸಿ, ಅಲ್ಲಿಂದ ಅಭ್ಯರ್ಥಿಗಳಿಗೆ ಉತ್ತರ ಮುಟ್ಟಿಸಿದ್ದ. ಸಮಿತ್‌ಕುಮಾರ್‌ಗೆ ಒಂದು ಸಿಮ್‌ಕಾರ್ಡ್ ಹಾಗೂ ಅಭ್ಯರ್ಥಿಗಳಿಗೆ ಎಲೆಕ್ಟ್ರಾನಕ್ ಡಿವೈಸ್ ಕೂಡ ಇದೇ ಆರೋಪಿ ಸಂದಾಯ ಮಾಡಿದ್ದ ಎಂದು ಎಸ್ಪಿ ತಿಳಿಸಿದರು.
ನಾಲ್ಕು ತಿಂಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪ್ರಕರಣದ ತನಿಖಾಧಿಖಾರಿ ಡಿವೈಎಸ್ಪಿ ವೀರೇಶ್ ದೊಡಮನಿ ಯಶಸ್ವಿಯಾಗಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.