ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷದ ನಾಯಕರಾಗಲು ಸಿದ್ದರಾಮಯ್ಯ ಅಯೋಗ್ಯ: ಕೆ.ಎಸ್‌.ಈಶ್ವರಪ್ಪ ವಾಗ್ದಾಳಿ

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ವಾಗ್ದಾಳಿ
Last Updated 6 ನವೆಂಬರ್ 2020, 7:43 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಬಗ್ಗೆ ಮಾತನಾಡಿದರೆ ದೊಡ್ಡ ಮನುಷ್ಯನಾಗುತ್ತೇನೆ ಎಂಬ ಭ್ರಮೆ ಸಿದ್ದರಾಮಯ್ಯ ಅವರಲ್ಲಿದೆ. ವಿರೋಧ ಪಕ್ಷದ ನಾಯಕರಾಗಲು ಅವರೊಬ್ಬ ಅಯೋಗ್ಯ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಯಾರ ಬಗ್ಗೆ ಮಾತನಾಡಬೇಕು ಎಂಬುದು ಸಿದ್ದರಾಮಯ್ಯ ಅವರಿಗೆ ಇನ್ನೂ ಅರ್ಥವಾಗಿಲ್ಲ. ರಾಜ್ಯದ ಜನರು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದ ಬಳಿಕವೂ ಅವರಲ್ಲಿ ಬದಲಾವಣೆ ಕಂಡಿಲ್ಲ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಕಂಡರೂ ಬುದ್ದಿ ಬಂದಿಲ್ಲ’ ಎಂದು ಕಿಡಿಕಾರಿದರು.

‘ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲದಿದ್ದರೂ ಕಾಂಗ್ರೆಸ್‌ ನಾಯಕರು ತಿರುಕನ ಕನಸು ಕಾಣುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಭ್ರಮೆಯಲ್ಲಿದ್ದಾರೆ. ನಾಯಕರಾಗಿ ಬಿಂಬಿಸಿಕೊಳ್ಳಲು ಇಬ್ಬರ ನಡುವೆ ಪೈಪೋಟಿ ನಡೆಯುತ್ತಿದೆ. ಮುಖ್ಯಮಂತ್ರಿಯಾಗುವ ಈ ಹಗಲು ಕನಸು ಯಶಸ್ಸು ಕಾಣುವುದಿಲ್ಲ’ ಎಂದರು.

‘ವಿನಯ್‌ ಕುಲಕರ್ಣಿ ಬಂಧನ ಸ್ವಾಗತಾರ್ಹ. ಕೊಲೆ, ಹವಾಲಾ ದಂಧೆ, ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಕಾಂಗ್ರೆಸ್‌ನವರು ಸಿಕ್ಕರೆ ಮುಟ್ಟಬೇಕಾಗುತ್ತದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದ ಅವಧಿಯಲ್ಲಿ ಹೀಗೆ ಹಲವು ಜನರ ಮನೆ ಮೇಲೆ ದಾಳಿ ಮಾಡಿಲ್ಲವೇ’ ಎಂದು ಪ್ರಶ್ನಿಸಿದರು.

‘ಹೆಣ್ಣು ಹಾಗೂ ಗೋವನ್ನು ತಾಯಿ ಅಂಥ ಪೂಜಿಸುವ ದೇಶ ಭಾರತ. ಆದರೆ, ಹೆಣ್ಣಿಗೆ ಭದ್ರತೆ ಇಲ್ಲ, ಗೋವಿಗೆ ರಕ್ಷಣೆ ಇಲ್ಲ. ಇಂತಹ ಸಂದರ್ಭದಲ್ಲಿ ಬಿಜೆಪಿ ಹೆಣ್ಣು ಹಾಗೂ ಗೋವು ರಕ್ಷಣೆಗೆ ಮುಂದಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಕನಸು ನನಸು ಮಾಡುವ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ. ಲವ್‌ ಜಿಹಾದ್‌ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನಡೆಯಲು ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT