ಗುರುವಾರ , ಸೆಪ್ಟೆಂಬರ್ 16, 2021
29 °C

ಶೌಚಾಲಯಕ್ಕೆ ಮೋದಿ ಹೆಸರಿಡಲು ಸೂಚಿಸಿದರೆ ಈಶ್ವರಪ್ಪಗೆ ಕೋಪವೇಕೆ?: ಹರಿಪ್ರಸಾದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ನವದೆಹಲಿ: ಸಚಿವ‌ ಕೆ.ಎಸ್. ಈಶ್ವರಪ್ಪ ಹರಕುಬಾಯಿ ದಾಸ. ಇದು ಎಲ್ಲರಿಗೂ ಗೊತ್ತಿರುವ ವಿಷಯ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

ಅವಾಚ್ಯ ಪದದಿಂದ ನಿಂದಿಸಿರುವ ಈಶ್ವರಪ್ಪ ಅವರ ಹೇಳಿಕೆಗೆ ಬುಧವಾರ ಇಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮೊನ್ನೆ ಅವರು ಹೇಳಿಕೆ ನೀಡಿದ ದಿನ ಅಮಾವಾಸ್ಯ ಆಗಿದ್ದರಿಂದ ಆ ರೀತಿ ಮಾತನಾಡಿರಬಹುದು ಎಂದರು.

ಮೇಲಿಂದ ಮೇಲೆ ಈಶ್ವರಪ್ಪ ಅವರು ಈ ರೀತಿಯ ಹೇಳಿಕೆ ಕೊಡುತ್ತಿರುವುದನ್ನು ಅವಲೋಕಿಸಿದರೆ, ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದರು.

ಈಶ್ವರಪ್ಪ ಈ ರೀತಿ ವರ್ತಿಸುವುದು ಹೊಸದೇನೂ ಅಲ್ಲ. ಬಿ.ಎಸ್. ಯಡಿಯೂರಪ್ಪ. ಅವರು  ಕೆಜೆಪಿ ಸ್ಥಾಪಿಸಿದಾಗ ಅವರ ಕುರಿತೂ ಎಂತೆಂಥ ಹೇಳಿಕೆ ನೀಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹರಿಪ್ರಸಾದ್ ಹೇಳಿದರು.

'ನಾಗಪುರದ ಆರ್.ಎಸ್.ಎಸ್.  ವಿಶ್ವವಿದ್ಯಾಲಯದ ಈಶ್ವರಪ್ಪ ನನ್ನ ಬಗ್ಗೆ ಮಾತನಾಡುತ್ತಿರುವುದೂ  ಹೊಸದಲ್ಲ. ಕೂಡಲೇ ಅವರಿಗೆ ಏಷ್ಯದ ಅತಿ ದೊಡ್ಡ ಮನೋ ಚಿಕಿತ್ಸಾಲಯವಾದ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ‌ ಕೊಡಿಸಿದರೆ ಒಳ್ಳೆಯದು ಎಂದು ಅವರು ಸಲಹೆ‌ ನೀಡಿದರು.

'ತಾವು ನಿಂದಿಸಿದ್ದು  ಹರಿಪ್ರಸಾದ್ ಅವರನ್ನೇ‌ ಹೊರತು, ಕಾಂಗ್ರೆಸ್ ನಾಯಕರನ್ನಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ. ನಾನೂ ಬಿಜೆಪಿ ನಾಯಕರೆಲ್ಲರೂ ಜೋಕರ್‌ಗಳು, ಹುಚ್ಚರು ಎಂದು ಹೇಳಿಲ್ಲ. ಬದಲಿಗೆ,  ಈಶ್ವರಪ್ಪ ಅವರನ್ನು ಟೀಕಿಸಿದ್ದೇನೆ. ನಮ್ಮ ಎಲ್ಲ  ಮುಖಂಡರೆಲ್ಲರೂ ಟೀಕಿಸಿರುವುದು  ಈಶ್ವರಪ್ಪನವರನ್ನು ಮಾತ್ರ ಎಂದು ಅವರು ತಿಳಿಸಿದರು.

'ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವುದನ್ನು ವಿರೋಧಿಸಿ ನಾನು ಮಾತನಾಡಿದ್ದೇನೆ. ತಮ್ಮ ನಾಯಕರ ಬಗ್ಗೆ ಬಿಜೆಪಿಗೆ ಅಷ್ಟೊಂದು ಅಭಿಮಾನವಿದ್ದರೆ, ಸುಲಭ ಶೌಚಾಲಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಡಿ ಎಂದು ಸಲಹೆ ನೀಡಿದ್ದೆ. ಈಗಲೂ ಅದೇ ಮಾತಿಗೆ ಬದ್ಧನಾಗಿದ್ದೇನೆ. ಇದರಲ್ಲಿ ಅವಮಾನಕಾರಿಯಾದ ಅಂಶ ಏನಿದೆ, ಶೌಚಾಲಯಗಳ ಬಗ್ಗೆ ಇವರಿಗೇಕೆ ಇಷ್ಟೊಂದು ತಾತ್ಸಾರ?' ಎಂದು ಅವರು ಪ್ರಶ್ನಿಸಿದರು.

ಸ್ವಚ್ಛ ಭಾರತ , ಮನೆಮನೆಗೆ ಶೌಚಾಲಯ ಎಂದೆಲ್ಲ ತಮ್ಮ  ಅಧಿಕಾರವಧಿಯ ಅಪ್ರತಿಮ ಸಾಧನೆ ಎಂದು ನರೇಂದ್ರ ಮೋದಿ ಹೇಳಿಕೊಳ್ಳುತ್ತಾರೆ. ಹಾಗಿದ್ದರೆ, ಆ ಶೌಚಾಲಯಗಳಿಗೆ ನರೇಂದ್ರ ಮೋದಿ ಹೆಸರಿಡಬಹುದು ಎಂದು ನಾನು ಗೌರವದಿಂದಲೇ ಹೇಳಿದ್ದೆ' ಎಂದು ಅವರು ವಿವರಿಸಿದರು.

ಕ್ರೀಡಾಂಗಣಕ್ಕೆ ಮೋದಿ ಹೆಸರು ಇಡುವುದಾದರೆ, ನಿತ್ಯ ಬಳಸುವ ಶೌಚಾಲಯಗಳಿಗೆ ಅವರ ಹೆಸರಿಡಲು ಸೂಚಿಸಿದರೆ ಈಶ್ವರಪ್ಪನವರ ರಕ್ತ ಏಕೆ ಕುದಿಯುತ್ತದೆ ಎಂಬುದನ್ನು ಅವರೇ ಸ್ಪಷ್ಟಪಡಿಸಲಿ ಎಂದು ವಿಧಾನ ಪರಿಷತ್ ಸದಸ್ಯರಾಗಿರುವ ಹರಿಪ್ರಸಾದ್ ಸವಾಲೆಸೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು