ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರೇ ಬಂದು ಸಂಧಾನ ಸೂತ್ರ ಸಲ್ಲಿಸಲಿ: ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ

Last Updated 14 ಡಿಸೆಂಬರ್ 2020, 6:40 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ನಿಗಮಗಳ ನೌಕರರ ಸಂಘಟನೆಗಳು ಮತ್ತು ಸರ್ಕಾರದ ನಡುವೆ ಭಾನುವಾರ ನಡೆದ ಸಭೆಯಲ್ಲಿ ಅಂತಿಮಗೊಳಿಸಿರುವ ಸಂಧಾನ ಸೂತ್ರಗಳನ್ನು ಸಚಿವರು ಮುಷ್ಕರದ ವೇದಿಕೆಗೆ ಬಂದು ಸಲ್ಲಿಸಬೇಕು ಎಂಬ ಬೇಡಿಕೆಯನ್ನು ‌ಕೋಡಿಹಳ್ಳಿ ಚಂದ್ರಶೇಖರ್ ಮುಂದಿಟ್ಟಿದ್ದಾರೆ.

ಸ್ವಾತಂತ್ರ್ಯ ಉದ್ಯಾನದ ಆವರಣದಲ್ಲಿ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿರುವ ಸ್ಥಳದಲ್ಲಿ ಸೋಮವಾರ ಮಾತನಾಡಿದ ಅವರು, 'ನಾವು ಹತ್ತು ಬೇಡಿಕೆಗಳನ್ನು ಮುಂದಿಟ್ಟಿದ್ದೆವು. ಒಂಭತ್ತು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿಕೊಂಡಿದೆ. ಸಂಧಾನ ಸೂತ್ರದ ಪ್ರತಿಯನ್ನು ಸಚಿವರು ಇಲ್ಲಿಗೆ ತಂದು ಒಪ್ಪಿಸಲಿ. ಆ ಬಳಿಕ ಹೋರಾಟದ ಮುಂದಿನ ಹೆಜ್ಜೆ ಕುರಿತು ನಿರ್ಧರಿಸುತ್ತೇವೆ' ಎಂದರು.

ಭಾನುವಾರ ರಾತ್ರಿಯಿಂದಲೂ ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ. ಎಲ್ಲರನ್ನೂ ಕತ್ತಲೆಯಲ್ಲಿಟ್ಟು ನಿರ್ಧಾರಕ್ಕೆ ಬರಲಾಗದು. ಈ ಕಾರಣದಿಂದ ಸೋಮವಾರ ಬೆಳಿಗ್ಗೆ ಸಭೆ ನಡೆಸಿ ನಿರ್ಧಾರಕ್ಕೆ ಬರಲು ತೀರ್ಮಾಬಿಸಲಾಗಿತ್ತು ಎಂದರು.

ಮುಖಂಡರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ: 'ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಸಂಘಟನೆಯ ಎಂಟು ಮುಖಂಡರು ಸೋಮವಾರ ಬೆಳಿಗ್ಗೆಯಿಂದ ಎರಡು ಗಂಟೆಗಳ ಕಾಲ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಎಲ್ಲರ ಮೊಬೈಲ್ ಫೋನ್ ಗಳು ಸ್ವಿಚ್ಡ್ ಆಫ್ ಆಗಿದ್ದವು. ಮುಖಂಡರ ಅಪಹರಣ ನಡೆದಿರಬಹುದು ಎಂಬ ಆತಂಕ ಸೃಷ್ಟಿಯಾಗಿತ್ತು.‌ ಪೊಲೀಸರಿಗೆ ದೂರು ನೀಡಲು ಯೋಚಿಸಲಾಗಿತ್ತು' ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

'ಎರಡು ಗಂಟೆಗಳ ಬಳಿಕ ಒಂದು ನಂಬರ್ ನಿಂದ ಕರೆ ಬಂತು. ಆ ಕಡೆಯಿಂದ ಮಾತನಾಡಿದ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಮಾತನಾಡಿದರು. ಆತಂಕಪಡಬೇಡಿ ಸಂಘಟನೆಯ ಮುಖಂಡರು ನಮ್ಮೊಂದಿಗೆ ಇದ್ದಾರೆ ಎಂದರು. ಆ ಬಳಿಕ ಮುಖಂಡರು ನಮ್ಮ ಸಂಪರ್ಕಕ್ಕೆ ಬಂದರು' ಎಂದು ತಿಳಿಸಿದರು.

ಸಚಿವರು ಸಂಧಾನ ಸೂತ್ರದ ಲಿಖಿತ ಪ್ರತಿಯೊಂದಿಗೆ ಇಲ್ಲಿಗೆ ಬರಲು. ಅಷ್ಟರವರೆಗೆ ಭಾನುವಾರದಿಂದ ನಡೆದಿರುವ‌ ಎಲ್ಲ ಬೆಳವಣಿಗೆಗಳ ಕುರಿತು ಚರ್ಚೆ ನಡೆಯಲಿ. ಸಚಿವರು ಬಂದ ಬಳಿಕ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದರು.

ಆಮಿಷಕ್ಕೆ ಒಳಗಾಗಿಲ್ಲ: ಸಾರಿಗೆ ನೌಕರರ ಕೂಟದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ' ನಮ್ಮ ಯಾವುದೇ ಬೇಡಿಕೆಗಳಿಂದ ಹಿಂದೆ ಸರಿದಿಲ್ಲ. ಸರ್ಕಾರಿ ನೌಕರರು ಎಂದು ಪರಿಗಣಿಸುವ ವಿಚಾರದಲ್ಲಿ ಆರ್ಥಿಕ ತೊಡಕುಗಳಿವೆ ಎಂದು ಸರ್ಕಾರ ಹೇಳಿದೆ' ಎಂದರು.

'ಜಾತಿ ಸಂಘಟನೆಗಳ ಕುರಿತು ಕೆಲವು ಆರೋಪಗಳು ಕೇಳಿಬರುತ್ತಿವೆ. ಯಾವುದೇ ಜಾತಿ ಸಂಘಟನೆಗಳ ಮಾತನ್ನು ನಾವು ಕೇಳಿಲ್ಲ. ಯಾವುದೇ ರೀತಿಯ ಆಮಿಷಕ್ಕೆ ಒಳಗಾಗಿಲ್ಲ. ಯಾರಿಂದಲೂ ಹಣ ಸೇರಿದಂತೆ ಯಾವುದನ್ನೂ ನಾವು ಪಡೆದಿಲ್ಲ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT