ಸೋಮವಾರ, ಮೇ 23, 2022
30 °C

ಕೆಎಸ್‌ಆರ್‌ಟಿಸಿ ನೌಕರರ ಕೂಟಕ್ಕೆ ನೀಡಿದ್ದ ಬೆಂಬಲ ವಾಪಸ್‌: ಹರೀಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕಾರ್ಮಿಕರ ಬೇಡಿಕೆ ಈಡೇರಿಕೆಗಾಗಿ ಈ ಹಿಂದೆ ನಡೆದಿದ್ದ ಬೃಹತ್‌ ಮುಷ್ಕರಕ್ಕೆ ನಾವೂ ಕೈಜೋಡಿಸಿದ್ದೆವು. ಆದರೆ ಈಗ ಕೆಎಸ್‌ಆರ್‌ಟಿಸಿ ನೌಕರರ ಕೂಟ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಹೀಗಾಗಿ ಈ ಕೂಟಕ್ಕೆ ನೀಡಿದ್ದ ಬೆಂಬಲ ಹಿಂಪಡೆಯುತ್ತಿದ್ದೇವೆ’ ಎಂದು ಕೆಎಸ್‌ಆರ್‌ಟಿಸಿ ಒಕ್ಕಲಿಗ ಅಧಿಕಾರಿಗಳು ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಹರೀಶ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು ‘ಮುಷ್ಕರದ ವೇಳೆ ಅನೇಕ ನೌಕರರನ್ನು ವಜಾಗೊಳಿಸಲಾಗಿದೆ. ಕೆಲವರನ್ನು ಅಮಾನತು ಮಾಡಲಾಗಿದೆ. ಹಲವರ ಮೇಲೆ ಪೊಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಇದನ್ನೆಲ್ಲಾ ಸರಿಪಡಿಸಬೇಕು ಎಂಬುದು ನಮ್ಮ ಮನವಿಯಾಗಿತ್ತು. ಕೆಎಸ್‌ಆರ್‌ಟಿಸಿ ನೌಕರರ ಕೂಟದ ಅಧ್ಯಕ್ಷ ಆರ್‌.ಚಂದ್ರಶೇಖರ್‌ ಹಾಗೂ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಈ ನಿಟ್ಟಿನಲ್ಲಿ ಯಾವ ನಿರ್ಣಯಗಳನ್ನೂ ಕೈಗೊಳ್ಳಲಿಲ್ಲ. ಇದರಿಂದ ನಮಗೆ ಬೇಸರವಾಗಿದೆ’ ಎಂದರು.

ಪ್ರಧಾನ ಕಾರ್ಯದರ್ಶಿ ಚನ್ನಕೇಶವ ‘ಚಂದ್ರಶೇಖರ್‌ ತಮಗೆ ಬೇಕಾದ ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸಂಘದ ಪದಾಧಿಕಾರಿಗಳನ್ನೂ ಉಚ್ಛಾಟಿಸಿದ್ದಾರೆ. ಅವರ ಸ್ವಾರ್ಥದಿಂದಾಗಿ ನೌಕರರಿಗೆ ನಾಲ್ಕು ತಿಂಗಳಿಂದ ಸಂಬಳ ಸಿಕ್ಕಿಲ್ಲ. ಇದರಿಂದ ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ’ ಎಂದು ದೂರಿದರು.

‘ಸಾರಿಗೆ ಸಚಿವರನ್ನು ಭೇಟಿಯಾಗಿ ನಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದೇವೆ. ಬೇಡಿಕೆಗಳನ್ನು ಈಡೇರಿಸುವಂತೆಯೂ ಮನವಿ ಮಾಡಿದ್ದೇವೆ. ಕೋವಿಡ್‌ನಿಂದಾಗಿ ಆರ್ಥಿಕ ಹಿನ್ನಡೆ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಅವರು ನೀಡಿದ್ದಾರೆ. ವಿವಿಧ ಘಟಕಗಳಲ್ಲಿ ನೌಕರರಿಗೆ ಕಿರುಕುಳ ಆಗುತ್ತಿರುವ ವಿಚಾರವನ್ನೂ ಅವರ ಗಮನಕ್ಕೆ ತಂದಿದ್ದೇವೆ. ಈ ಸಂಬಂಧ ವ್ಯವಸ್ಥಾಪಕ ನಿರ್ದೇಶಕರ ಜೊತೆ ಸಭೆ ನಡೆಸಿ ಚರ್ಚಿಸುವುದಾಗಿ ಹೇಳಿದ್ದಾರೆ. ನಮ್ಮ ಸಮಸ್ಯೆಯನ್ನು ಸಚಿವರಾದ ಆರ್‌.ಅಶೋಕ ಹಾಗೂ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೂ ತಂದಿದ್ದೇವೆ’ ಎಂದು ಹೇಳಿದರು.

ಉಪಾಧ್ಯಕ್ಷ ಕೆ.ನಾಗೇಶ್‌, ಖಜಾಂಚಿ ಎಚ್‌.ಆರ್‌.ಜಗದೀಶ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು