ಬುಧವಾರ, ಡಿಸೆಂಬರ್ 1, 2021
20 °C

ಮೈಸೂರು ಮಹಾರಾಜರ ವಂಶಸ್ಥರ ಸ್ವತ್ತು; ರಾಜ್ಯದ ಮೇಲ್ಮನವಿ ವಜಾಗೊಳಿಸಿದ ‘ಸುಪ್ರೀಂ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: 1,561.31 ಎಕರೆ ಜಮೀನಿನ ಒಡೆತನ ಮೈಸೂರಿನ ಮಹಾರಾಜರ ವಂಶಸ್ಥರಿಗೆ ಸೇರಿದ್ದು ಎಂದು ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ, ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಈ ಹಿಂದೆ ತಿರಸ್ಕರಿಸಿದ್ದ ಜುಲೈ 26ರ ತನ್ನ ಆದೇಶವನ್ನು ಮರು ಪರಿಶೀಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. 

ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಮತ್ತು ಅಜಯ್ ರಸ್ತೋಗಿ ಅವರ ಪೀಠ ತಿರಸ್ಕರಿಸಿದೆ. ‘ಮೇಲ್ಮನವಿಯಲ್ಲಿ ಸರ್ಕಾರ ಪ್ರಸ್ತಾಪಿಸಿರುವ ಅಂಶಗಳನ್ನು ಗಮನಿಸಿದ್ದೇವೆ. ಇದರಲ್ಲಿ ಮಧ್ಯಪ್ರವೇಶಿಸುವಂತಹ ಯಾವುದೇ ಅಂಶಗಳು ನಮಗೆ ಗೋಚರಿಸಿಲ್ಲ’ ಎಂದು ನವೆಂಬರ್‌ 23ರಂದು ಹೊರಡಿಸಿದ ಆದೇಶದಲ್ಲಿ ಪೀಠ ತಿಳಿಸಿದೆ. 

2020ರ ಡಿಸೆಂಬರ್ 15ರಂದು ಹೈಕೋರ್ಟ್ ನೀಡಿದ್ದ ಅಭಿಪ್ರಾಯವನ್ನು ಪರಿಶೀಲಿಸಿದ ಬಳಿಕವೇ, ಈ ಹಿಂದೆ ಅರ್ಜಿದಾರರು ಎತ್ತಿದ್ದ ವಿಚಾರದ ಕುರಿತು ಆದೇಶ ಹೊರಡಿಸಲಾಗಿತ್ತು ಎಂಬುದನ್ನು ಕೋರ್ಟ್ ತಿಳಿಸಿತು.

1,561.31 ಎಕರೆ ಜಮೀನಿನ ಮೇಲೆ ನಿಯಂತ್ರಣ ಸಾಧಿಸುವ ಯತ್ನದ ಭಾಗವಾಗಿ ರಾಜ್ಯ ಸರ್ಕಾರವು ಮತ್ತೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು. ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡಿರುವ ಜನರು ಈ ಆದೇಶದಿಂದ ನಿರಾಳರಾಗಿದ್ದಾರೆ. ಈ ಜಮೀನು ಸರ್ಕಾರಕ್ಕೆ ಸೇರಿದ ಆಸ್ತಿ ಎಂಬುದಾಗಿ ಜಿಲ್ಲಾಧಿಕಾರಿ ನೀಡಿದ್ದ ಆದೇಶವನ್ನು ಹೈಕೋರ್ಟ್ ಈ ಮೊದಲು ರದ್ದುಪಡಿಸಿತ್ತು. 

1950ರ ಸೇರ್ಪಡೆ ಒಪ್ಪಂದ ಹಾಗೂ ಇದು ‘ಖರಾಬು’ ಜಮೀನು ಎಂಬುದಾಗಿ ಬ್ರಿಟಿಷ್ ಸರ್ಕಾರ ತೆಗೆದುಕೊಂಡಿದ್ದ ನಿರ್ಣಯಗಳಿಗೆ ಹೈಕೋರ್ಟ್ ಆದೇಶ ವಿರುದ್ಧವಾಗಿದೆ ಎಂದು ಸರ್ಕಾರ ವಾದ ಮಂಡಿಸಿತ್ತು. ಇಂತಹ ಜಮೀನು ಸಾರ್ವಜನಿಕ ಆಸ್ತಿಯಾಗಿರುತ್ತದೆ.

‘ಜನರು ಈಗಾಗಲೇ ಈ ಜಮೀನು ಖರೀದಿಸಿದ್ದಾರೆ. ಆದರೆ ದಶಕಗಳ ಬಳಿಕ ಸರ್ಕಾರ ಎಚ್ಚೆತ್ತುಕೊಂಡಿದೆ. 1950ರ ಬಳಿಕ ಸರ್ಕಾರವು ಜಮೀನುಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಅಂದರೆ, ಜಮೀನು ಅದಕ್ಕೂ ಮುನ್ನ ಮಹಾರಾಜರಿಗೆ ಸೇರಿತ್ತು ಎಂಬುದು ಇದರರ್ಥ’ ಎಂದು ಕೋರ್ಟ್ ಹೇಳಿತು. 

1,563.31 ಎಕರೆ ಪೈಕಿ 600 ಎಕರೆಯಲ್ಲಿ ಸರ್ಕಾರ ಮತ್ತು ಸಾರ್ವಜನಿಕ ಆಸ್ತಿಯಿದೆ. ಕೆರೆಗಳು, ಅರಣ್ಯ ಪ್ರದೇಶ, ರಾಜ್ಯ ಆಡಳಿತ ತರಬೇತಿ ಸಂಸ್ಥೆ, ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಜಾಕಿ ಕ್ವಾರ್ಟರ್ಸ್, ರಸ್ತೆಗಳು, ಪ್ರಾಣಿ ಸಂಗ್ರಹಾಲಯ, ರೇಸ್ ಕೋರ್ಸ್, ಲಲಿತ್‌ ಮಹಲ್ ಅರಮನೆ, ಮಸೀದಿ ಮೊದಲಾದವು ಇವೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು