ಶುಕ್ರವಾರ, ಜುಲೈ 30, 2021
25 °C
3677 ಎಕರೆ ಭೂಮಿ ಕ್ರಯಕ್ಕೆ ಬಿಜೆಪಿ ಶಾಸಕರ ವಿರೋಧ: ಮಣಿದ ಸರ್ಕಾರ

ಜಿಂದಾಲ್‌ಗೆ ಭೂಮಿ ಮಾರಾಟ; ಸರ್ಕಾರದ ತೀರ್ಮಾನ ವಾಪಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿ ಶಾಸಕರ ಒತ್ತಡ ಹಾಗೂ ಸಾರ್ವಜನಿಕ ವಿರೋಧಕ್ಕೆ ಮಣಿದ ರಾಜ್ಯ ಸರ್ಕಾರ, ಜೆಎಸ್‌ಡಬ್ಲ್ಯೂ ಸ್ಟೀಲ್‌ ಕಂಪನಿಗೆ (ಜಿಂದಾಲ್‌) 3,667 ಎಕರೆ ಭೂಮಿಯನ್ನು ಶುದ್ಧ ಕ್ರಯ ಮಾಡಿಕೊಡುವ ನಿರ್ಧಾರವನ್ನು ಕೈಬಿಟ್ಟಿದೆ.

ಪ್ರತಿ ಎಕರೆಗೆ ₹ 1.27 ಲಕ್ಷ ದರದಲ್ಲಿ ಜಮೀನು ಕ್ರಯ ಮಾಡಿಕೊಡಲು ಸಚಿವ ಸಂಪುಟದ ಈ ಹಿಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಅದಕ್ಕೆ ಪಕ್ಷದೊಳಗಿಂದಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಬೆಳವಣಿಗೆ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿತ್ತು. ಈ ಕಾರಣ ಗುರುವಾರ ನಡೆದ ಸಚಿವ ಸಂಪುಟದಲ್ಲಿ ನಿರ್ಧಾರ ಕೈಬಿಡುವ ತೀರ್ಮಾನ ಕೈಗೊಳ್ಳಲಾಗಿದೆ.

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಬಸವರಾಜ ಬೊಮ್ಮಾಯಿ, ‘ಜಿಂದಾಲ್‌ಗೆ ಭೂಮಿಯನ್ನು ಶುದ್ಧಕ್ರಯ ಮಾಡಿಕೊಡುವ ನಿರ್ಣಯವನ್ನು ಇವತ್ತಿನ ಸಂಪುಟ ಸಭೆಯಲ್ಲಿ ದೃಢೀಕರಿಸಲಿಲ್ಲ’ ಎಂದು ಹೇಳಿದರು.

‘ಹಿಂದಿನ ಸಚಿವ ಸಂಪುಟದ ನಿರ್ಣಯವನ್ನು ತಡೆ ಹಿಡಿಯಲಾಗಿದೆ. ಸಂಪುಟ ತ‌ನ್ನ ವಿವೇಚನೆಯ ಮೇರೆಗೆ ಬಾಕಿ ಉಳಿದ ಪ್ರಕರಣಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತದೆ. ಈ ಸಂಬಂಧ ಸುಪ್ರೀಂಕೋರ್ಟ್‌ನಲ್ಲೂ ಪ್ರಕರಣ ಬಾಕಿ ಉಳಿದಿದೆ. ರಾಜ್ಯ ಸರ್ಕಾರ ಭವಿಷ್ಯದಲ್ಲಿ ತನ್ನ ನಿರ್ಣಯವನ್ನು ಬದಲಿಸಲೂಬಹುದು’ ಎಂದು ಬೊಮ್ಮಾಯಿ ಹೇಳಿದರು.

2019ರಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಜಿಂದಾಲ್‌ಗೆ ಭೂಮಿ ನೀಡುವ ತೀರ್ಮಾನ ಕೈಗೊಂಡಾಗ ಬಿಜೆಪಿ ವಿರೋಧಿಸಿತ್ತು.

ಆಗ ಆಡಳಿತ ಪಕ್ಷದ ಭಾಗವಾಗಿದ್ದ ಕಾಂಗ್ರೆಸ್‌ ಶಾಸಕರೂ ವಿರೋಧ ವ್ಯಕ್ತಪಡಿಸಿದ್ದರು. ಕೊನೆಗೆ ಸರ್ಕಾರ ಹಿಂದೆ ಸರಿದಿತ್ತು.

ಯಡಿಯೂರಪ್ಪ ಮುಖ್ಯಮಂತ್ರಿಯಾದ ಒಂದು ವರ್ಷದ ಬಳಿಕ ಮತ್ತೆ ಜಿಂದಾಲ್‌ಗೆ ಭೂಮಿ ನೀಡುವ ತೀರ್ಮಾನವನ್ನು ಸರ್ಕಾರ ಕೈಗೊಂಡಿತ್ತು. ಇದನ್ನು ವಿರೋಧಿಸಿ ಬಿಜೆಪಿಯ ಕೆಲವು ಶಾಸಕರು ಮುಖ್ಯಮಂತ್ರಿ ಮತ್ತು ಪಕ್ಷದ ವರಿಷ್ಠರಿಗೆ ಪತ್ರ ಬರೆದು ಅತೃಪ್ತಿ ಹೊರಹಾಕಿದ್ದರು. ವಕೀಲರಾದ ದೊರೆರಾಜು ಮತ್ತಿತರರು ಸೇರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನೂ ದಾಖಲಿಸಿದ್ದರು. ಹೈಕೋರ್ಟ್ ನಿರ್ದೇಶನದ ಅನ್ವಯ ಸಚಿವ ಸಂಪುಟದ ಎಲ್ಲ ಸದಸ್ಯರಿಗೂ ನೋಟಿಸ್‌ ಜಾರಿ ಮಾಡಲಾಗಿತ್ತು.

ಈ ವಿಷಯ ಚರ್ಚಿಸಲು ಶಾಸಕಾಂಗ ಪಕ್ಷದ ಸಭೆ ಕರೆದು, ಅಲ್ಲಿ ತೀರ್ಮಾನವನ್ನು  ವಿವರಣೆ ನೀಡಬೇಕು ಎಂದು ಕೆಲವು ಶಾಸಕರು ಒತ್ತಡ ಹೇರಿದ್ದರು. ಇದು ನಾಯಕತ್ವ ಬದಲಾವಣೆಯ ಚರ್ಚೆಗೂ ದಾರಿ ಮಾಡಿಕೊಟ್ಟಿತ್ತು.

ಜಿಂದಾಲ್‌ಗೆ ಇಷ್ಟು ಬೃಹತ್ ಪ್ರಮಾಣದ ಭೂಮಿ ನೀಡುವ ಅವಶ್ಯ ಏನಿದೆ ಎಂದು ಪಕ್ಷದ ವರಿಷ್ಠರು, ಯಡಿಯೂರಪ್ಪ ಅವರಿಂದ ವಿವರಣೆ ಕೇಳಿದ್ದರು ಎಂದೂ ಹೇಳಲಾಗುತ್ತಿದೆ.

ಏನಿದು ಭೂ ವ್ಯವಹಾರ
ಬಳ್ಳಾರಿ ಜಿಲ್ಲೆ ತೋರಣಗಲ್‌ನಲ್ಲಿ ಜಿಂದಾಲ್‌ಗೆ ಲೀಸ್‌ ಕಂ ಸೇಲ್‌ ಆಧಾರದಲ್ಲಿ ನೀಡಿದ್ದ 3,677 ಎಕರೆ ಜಮೀನನ್ನು ಶುದ್ಧಕ್ರಯ ಮಾಡಿಕೊಡಲು ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಇದೇ ವರ್ಷದ ಏಪ್ರಿಲ್ 26 ರಂದು ತೀರ್ಮಾನಿಸಿತ್ತು.

2019 ರಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಮುಂದೆಯೂ ಈ ಪ್ರಸ್ತಾವ ಇತ್ತು. ಆಗ ಎಕರೆಗೆ ₹ 1.50 ಲಕ್ಷದಂತೆ ಮಾರಲು ಮುಂದಾದಾಗ ವಿರೋಧ ಪಕ್ಷದಲ್ಲಿದ್ದ ಬಿಜೆಪಿ, ವಿರೋಧಿಸಿತ್ತು. ಯಡಿಯೂರಪ್ಪ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ಹೋರಾಟ ನಡೆದಿತ್ತು.

ಬಿಜೆಪಿ ಸರ್ಕಾರ ಬಂದ ಮೇಲೆ ಹಿಂದಿನ ಹೋರಾಟ ಮರೆತು, ಜಿಂದಾಲ್‌ಗೆ ಭೂಮಿ ನೀಡುವ ತೀರ್ಮಾನ ಕೈಗೊಳ್ಳಲಾಗಿತ್ತು.

‘2006 ರಲ್ಲಿ ಜಿಂದಾಲ್‌ ಕಂಪನಿಗೆ ಲೀಸ್‌ ಕಂ ಸೇಲ್‌ ಆಧಾರದಲ್ಲಿ ಜಮೀನು ನೀಡಲಾಗಿತ್ತು. ಗಣಿಗಾರಿಕೆಗೆ ನೀಡಿದ್ದ ಆ ಜಾಗವನ್ನು ಬಳಕೆ ಮಾಡಿದ್ದಾರೆ ಮತ್ತು ಅಲ್ಲಿ ಕಾರ್ಖಾನೆಯನ್ನೂ ಸ್ಥಾಪಿಸಿದ್ದಾರೆ. ಗುತ್ತಿಗೆ ಅವಧಿ ಮುಗಿದಿರುವುದರಿಂದ ಶುದ್ಧಕ್ರಯ ಮಾಡಲು ಹಿಂದಿನ ಸರ್ಕಾರ ಇದ್ದಾಗ ಪ್ರಸ್ತಾವ ಸಲ್ಲಿಸಿದ್ದರು. ಆಗ ಕೆಲವು ಆಕ್ಷೇಪಗಳು ಕೇಳಿ ಬಂದಿದ್ದವು. ನಮ್ಮ ಸರ್ಕಾರ ಬಂದ ಮೇಲೆ ಅದರ ಪರಿಶೀಲನೆಗೆ ಸಚಿವ ಸಂಪುಟ ಉಪ ಸಮಿತಿ ರಚಿಸಿತು. ಉಪ ಸಮಿತಿಯ ಶಿಫಾರಸ್ಸಿನ ಮೇರೆಗೆ 3,667 ಎಕರೆ ಜಮೀನನ್ನು ಶುದ್ಧಕ್ರಯ ಪತ್ರ ಮಾಡಿಕೊಡಲು ಒಪ್ಪಿಕೊಳ್ಳಲಾಗಿದೆ. ತೋರಣಗಲ್ಲು ಮತ್ತು ಕುರೇಕುಪ್ಪ ಗ್ರಾಮಗಳಲ್ಲಿನ 2,005.58 ಎಕರೆ ಮತ್ತು ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳಲ್ಲಿನ 1,666.73 ಎಕರೆ ಜಮೀನು ಸೇರಿದೆ’ ಎಂದು ಕಾನೂನು ಸಚಿವ ಬೊಮ್ಮಾಯಿ ಸರ್ಕಾರದ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದರು. ಈ ಮಧ್ಯೆ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್, ಅರವಿಂದ ಬೆಲ್ಲದ, ಕೆ.ಪೂರ್ಣಿಮಾ, ಉದಯ್ ಗರುಡಾಚಾರ್ ಮತ್ತು ಇತರರು ಈ ನಿರ್ಧಾರ ವಿರೋಧಿಸಿ ಪತ್ರ ಬರೆದು, ‘ಈ ನಿರ್ಣಯ ರಾಜ್ಯದ ಹಿತಕ್ಕೆ ವಿರುದ್ಧ’ ಎಂದು ಹೇಳಿದ್ದರು.

***
ಭೂಮಿ ಮಾರುವ ನಿರ್ಧಾರ ವಿರೋಧಿಸಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿ‌ತ್ ಶಾಗೆ ಪತ್ರ ಬರೆದಿದ್ದೆವು. ವರಿಷ್ಠರ ಖಡಕ್ ಸೂಚನೆ ಅನ್ವಯ ಸರ್ಕಾರ ನಿರ್ಧಾರ ಕೈಬಿಟ್ಟಿದೆ.
-ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಶಾಸಕ, ವಿಜಯಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು