ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಎಂಜಿನ್‌ ಮೇಲೆ ಮಣ್ಣು ಕುಸಿತ; ಪ್ರಾಣಾಪಾಯವಿಲ್ಲ

Last Updated 5 ಆಗಸ್ಟ್ 2020, 14:25 IST
ಅಕ್ಷರ ಗಾತ್ರ

ಬೆಳಗಾವಿ: ನೈರುತ್ಯ ರೈಲ್ವೆ ವ್ಯಾಪ್ತಿಯ ಕ್ಯಾಸಲ್‌ರಾಕ್‌–ಕರಂಜಲ್‌ ನಡುವಿನ ಹಳಿಯಲ್ಲಿ ಚಲಿಸುತ್ತಿದ್ದ ರೈಲು ಎಂಜಿನ್ ಮೇಲೆ ಮಣ್ಣು ಕುಸಿದು ಬಿದ್ದ ಘಟನೆ ಬುಧವಾರ ಮುಂಜಾನೆ ನಡೆದಿದೆ. ಚಾಲಕ ತಕ್ಷಣ ರೈಲು ನಿಲ್ಲಿಸಿ ಸಮಯಪ್ರಜ್ಞೆ ಮೆರೆದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.

ಆ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಳಿ ಪಕ್ಕದ ಗುಡ್ಡ ಕುಸಿದಿದೆ.

‘ನಿಜಾಮುದ್ದೀನ್–ಗೋವಾ ವಿಶೇಷ ಎಕ್ಸ್‌ಪ್ರೆಸ್‌ ರೈಲು ಹೋಗುವಾಗ ಮುಂಜಾನೆ 5.30ರ ವೇಳೆಗೆ ಸುಮಾರ 700 ಕ್ಯುಬಿಕ್‌ ಮೀಟರ್‌ನಷ್ಟು ಮಣ್ಣು ಹಳಿಯ ಮೇಲೆ ಕುಸಿದಿತ್ತು. 80 ಮಂದಿ ಒಟ್ಟು 8 ಗಂಟೆಗಳವರೆಗೆ ಕಾರ್ಯಾಚರಣೆ ನಡೆಸಿ, ಮಣ್ಣನ್ನು ತೆರವುಗೊಳಿಸಿದ್ದಾರೆ. ಆ ಪ್ರದೇಶಕ್ಕೆ ರಸ್ತೆ ಸಂಪರ್ಕ ಇಲ್ಲ. ಹೀಗಾಗಿ, ಲೋಂಡಾದಿಂದ ಬಿಎಫ್‌ಆರ್‌ (ಬೋಗಿ ಫ್ಲಾಟ್ವ ವ್ಯಾಗನ್‌) ಮೂಲಕ ಪ್ರೊಕ್ಲೇಮರ್‌ ಅನ್ನು ಮಧ್ಯಾಹ್ನ 12.30ರ ವೇಳೆಗೆ ಸಾಗಿಸಿ ಕಾರ್ಯಾಚರಣೆಯಲ್ಲಿ ಬಳಸಲಾಯಿತು. ಮಧ್ಯಾಹ್ನ 2ರ ನಂತರ ಸಂಪೂರ್ಣ ಮಣ್ಣನ್ನು ತೆರವುಗೊಳಿಸಲಾಯಿತು’ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾರ್ಯಾಚರಣೆ ನಡೆಯುತ್ತಿದ್ದ ವೇಳೆಯೇ ರೈಲಿನ ಕೋಚ್‌ಗಳನ್ನು ಇನ್ನೊಂದು ಎಂಜಿನ್‌ ಬಳಸಿ ಕ್ಯಾಸಲ್‌ರಾಕ್‌ ನಿಲ್ದಾಣಕ್ಕೆ ಸಾಗಿಸಲಾಯಿತು. 149 ಪ್ರಯಾಣಿಕರಿಗೂ ಅಲ್ಲಿಯೇ ಉಪಾಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಯಿತು. ಪ್ರಯಾಣಿಕರನ್ನು ಸಾಗಿಸಲು ಬಸ್‌ಗಳನ್ನು ಬೆಳಗಾವಿಯಿಂದ ತರಿಸಲು ಯೋಜಿಸಲಾಗಿತ್ತು. ಆ ವೇಳೆಗಾಗಲೇ ಹಳಿ ಸಿದ್ಧಗೊಂಡಿದ್ದರಿಂದ ರೈಲಿನಲ್ಲೇ ಅವರನ್ನು ಕಳುಹಿಸಲಾಯಿತು. ಹಿರಿಯ ವಿಭಾಗೀಯ ಎಂಜಿನಿಯರ್‌ ನೀರಜ್‌ ಬಾಪ್ನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯ ಮೇಲ್ವಿಚಾರಣೆ ನೋಡಿಕೊಂಡರು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT