ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡದ ವಿವಿಧೆಡೆ ಗುಡ್ಡ ಕುಸಿತ

ಮಳೆಯ ಪ್ರಮಾಣ ಇಳಿಮುಖವಾದರೂ ಮುಂದುವರಿದ ಹಾನಿ
Last Updated 7 ಆಗಸ್ಟ್ 2020, 11:24 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಾದ್ಯಂತ ಶುಕ್ರವಾರ ಮಳೆಯ ಅಬ್ಬರ ಕಡಿಮೆಯಾಗಿದ್ದರೂ ಹಾನಿಯ ಸರಣಿ ಮುಂದುವರಿದಿದೆ. ವಿವಿಧೆಡೆ ಭೂ ಕುಸಿತವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಕಾರವಾರ ತಾಲ್ಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಗ್ರಾಮ ನಗೆ ಎಂಬಲ್ಲಿ ಅಂದಾಜು ಆರು ಎಕರೆಗಳಷ್ಟು ವಿಸ್ತೀರ್ಣದಲ್ಲಿ ಗುಡ್ಡ ಕುಸಿದಿದೆ. ನೂರಾರು ಮರಗಳು ಮಣ್ಣಿನೊಂದಿಗೆ ಸುಮಾರು ಒಂದು ಕಿಲೋಮೀಟರ್‌ನಷ್ಟು ದೂರಕ್ಕೆ ಜಾರಿವೆ. ಸಮೀಪದಲ್ಲಿ ಯಾವುದೇ ಮನೆಗಳಿಲ್ಲದ ಕಾರಣ ಜೀವಾಪಾಯವಾಗಿಲ್ಲ.

ಕುಮಟಾ ತಾಲ್ಲೂಕಿನ ಪುರಾಣ ಪ್ರಸಿದ್ಧ ಯಾಣ ಭೈರವೇಶ್ವರ ದೇಗುಲದ ಎದುರಿನ ಗುಡ್ಡ ಕುಸಿದಿದೆ. ಅದರ ಕೆಳಭಾಗದಲ್ಲಿದ್ದ ಎರಡು ಅಂಗಡಿಗಳಿಗೆ ಹಾನಿಯಾಗಿದೆ. ಕಳೆದ ವರ್ಷವೂ ಇದೇ ಜಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಮಣ್ಣು ಜಾರಿತ್ತು.

ಶಿರಸಿಯಲ್ಲಿ ವರದಾ ನದಿಯ ಪ್ರವಾಹ ಸ್ಥಿತಿ ಅಪಾಯದ ಮಟ್ಟದಲ್ಲೇ ಮುಂದುವರಿದಿದೆ. ಮುಂಡಗೋಡ ತಾಲ್ಲೂಕಿನ ಬಾಚಣಕಿ ಮತ್ತು ಧರ್ಮಾ ಜಲಾಶಯಗಳು ಭರ್ತಿಯಾಗಲು ಕೇವಲ ಎರಡು ಅಡಿಗಳಷ್ಟು ನೀರು ಹರಿಯಬೇಕಿದೆ. ಕರಾವಳಿಯಲ್ಲಿ ಅರಬ್ಬಿ ಸಮುದ್ರದ ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ವಿವಿಧೆಡೆ ಕಡಲ್ಕೊರೆತ ಉಂಟಾಗಿದೆ.

ಗುರುವಾರ ಬೆಳಿಗ್ಗೆ 8ರಿಂದ ಶುಕ್ರವಾರ ಬೆಳಿಗ್ಗೆ 8ರ ಅವಧಿಯಲ್ಲಿ ಯಲ್ಲಾಪುರದಲ್ಲಿ 11.3 ಸೆಂ.ಮೀ, ಶಿರಸಿಯಲ್ಲಿ 10.8 ಸೆಂ.ಮೀ, ಸಿದ್ದಾಪುರದಲ್ಲಿ 8.6 ಸೆಂ.ಮೀ. ಮಳೆಯಾಗಿದೆ ಎಂದು ನೈಸರ್ಗಿಕ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT