ಮಂಗಳವಾರ, ಜನವರಿ 19, 2021
25 °C
ಸರ್ಕಾರ, ನಾಯಕತ್ವ ಟೀಕಿಸುವ ಪಕ್ಷದ ಮುಖಂಡರು, ಕಾರ್ಯಕರ್ತರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ

ಸಿ.ಎಂ ಬದಲು ಚರ್ಚೆಗೆ ತೆರೆ ಎಳೆದ ಬಿಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಬಿಜೆಪಿ ವಿಶೇಷ ಸಭೆಗೂ ಮೊದಲು ಜನಸಂಘದ ಹಿರಿಯರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿನಂದಿಸಿದರು.

ಶಿವಮೊಗ್ಗ: ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗೆ ತೆರೆ ಎಳೆದಿರುವ ಬಿಜೆಪಿ ವಿಶೇಷ ಸಭೆ, ಸರ್ಕಾರ ಮತ್ತು ನಾಯಕತ್ವ ಕುರಿತು ಬಹಿರಂಗವಾಗಿ ಟೀಕಿಸುವ ಪಕ್ಷದ ಮುಖಂಡರು, ಕಾರ್ಯಕರ್ತರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿ ಹಲವರ ವಿರುದ್ಧ ಕಠಿಣ ಕ್ರಮ ಜರುಗಿಸುವ ಕುರಿತು ಎರಡು ದಿನಗಳ ಕಾಲ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಸ್ವತಃ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿಷಯ ಪ್ರಸ್ತಾಪಿಸಿ, ‘ಪಕ್ಷದ ಮುಖಂಡರೇ ಸರ್ಕಾರ, ನಾಯಕತ್ವ ಕುರಿತು ಹೇಳಿಕೆಗಳನ್ನು ನೀಡುವ ಮೂಲಕ ಮುಜುಗರ ತರುತ್ತಿದ್ದಾರೆ. ನಮ್ಮವರ ಹೇಳಿಕೆಗಳನ್ನೇ ಉದಾಹರಿಸಿ ವಿರೋಧ ಪಕ್ಷದ ಮುಖಂಡರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ’ ಎಂದು ರಾಜ್ಯ ಉಸ್ತುವಾರಿ ಅರುಣ್‌ಸಿಂಗ್ ಸೇರಿದಂತೆ ಪಕ್ಷದ ಪ್ರಮುಖರ ಎದುರು ಅಳಲು ತೋಡಿಕೊಂಡಿದ್ದಾರೆ.

‘2018ರ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ, ಬಹುಮತ ಸಿಗಲಿಲ್ಲ. ಬೇರೆ ಪಕ್ಷಗಳ ಶಾಸಕರು ತಮ್ಮ ಮೇಲೆ ವಿಶ್ವಾಸವಿಟ್ಟು ರಾಜೀನಾಮೆ ನೀಡಿ, ಪಕ್ಷಕ್ಕೆ ಬಂದಿದ್ದಾರೆ. ಅವರ ಸಹಕಾರದಿಂದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅಂದು ಸರ್ಕಾರ ರಚನೆಗೆ ಸಹಕರಿಸಿದವರಿಗೆ ಸ್ಥಾನಮಾನ ನೀಡುವುದು ಅನಿವಾರ್ಯ. ಇಂತಹ ಸಮಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಮಾತನಾಡುವುದು ಎಷ್ಟು ಸರಿ? ಎಲ್ಲರೂ ಸಹಕರಿಸಿದರೆ ಉಳಿದ ಎರಡೂವರೆ ವರ್ಷ ಉತ್ತಮ ಆಡಳಿತ ನೀಡಿ, ಮುಂದಿನ ಚುನಾವಣೆಯಲ್ಲಿ 140 ಸ್ಥಾನಗಳನ್ನು ಗೆಲ್ಲಬಹುದು. ಆಗ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರ ಗಳಿಗೆ ಬದ್ಧನಾಗಿಯೇ ಇರುವೆ’ ಎಂದು ಭರವಸೆ ನೀಡಿದ್ದಾರೆ.

‘ನಾನು ಹೈಕಮಾಂಡ್‌ ಸೂಚನೆ ಯಂತೆ ನಡೆದುಕೊಂಡಿರುವೆ. ಯಾವುದೇ ದೇವಸ್ಥಾನಕ್ಕೆ ಹೋದರೂ ಮೊದಲು ಮೋದಿಜೀ ನೆನಪು ಮಾಡಿಕೊಳ್ಳುತ್ತೇನೆ. ಅವರ ಆಯುಷ್ಯ, ಆರೋಗ್ಯಕ್ಕೆ ಬೇಡಿಕೊಳ್ಳುವೆ. ನನ್ನ ಮೇಲೆ ವಿಶ್ವಾಸವಿಟ್ಟು ಕೆಲಸ ಮಾಡಲು ಬಿಡಿ’ ಎಂದು ಅವರು ಗದ್ಗದಿತರಾಗಿದ್ದಾರೆ.

ಯಡಿಯೂರಪ್ಪ ಅವರ ಮಾತು ಗಳಿಗೆ ಸಹಮತ ವ್ಯಕ್ತಪಡಿಸಿದ ಮುಖಂಡರು ಮುಖ್ಯಮಂತ್ರಿ ಬದಲಾ ವಣೆ, ಯಡಿಯೂರಪ್ಪ ನಾಯಕತ್ವದ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯದ ಚರ್ಚೆ ಅನಗತ್ಯ. ಪಕ್ಷದ ಶಾಸಕರಲ್ಲಿ ಅಸಮಾ ಧಾನ ಮೂಡದಂತೆ ಕಾರ್ಯನಿರ್ವಹಿಸಬೇಕು. ಕುಟುಂಬದವರ ಹಸ್ತಕ್ಷೇಪಕ್ಕೆ ಅವಕಾಶ ನೀಡದೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಅರುಣ್‌ ಸಿಂಗ್ ಸಲಹೆ ನೀಡಿದ್ದಾರೆ.

11ರಿಂದ ‘ಜನ ಸೇವಕ್‌’ ಸಮಾವೇಶ

ಗ್ರಾಮ ಪಂಚಾಯಿತಿ ಚುನಾವಣೆಯ ಯಶಸ್ಸಿನ ಯಾತ್ರೆಯನ್ನು ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಮುಂದುವರಿಸಲು ನಿರ್ಧರಿಸಲಾಗಿದೆ.

ಅದಕ್ಕಾಗಿ ಜನಸೇವಕ್‌ ಸಮಾವೇಶ ಹಮ್ಮಿಕೊಳ್ಳಲಾಗುವುದು. ಮೊದಲ ಹಂತದಲ್ಲಿ ಜನವರಿ 11ರಿಂದ ಮೂರು ದಿನಗಳು ಸಮಾವೇಶ ನಡೆಯಲಿದೆ. ಮೈಸೂರಿನಲ್ಲಿ 11ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಸಮಾವೇಶಕ್ಕೆ ಚಾಲನೆ ನೀಡುವರು. ಪ್ರತಿ ಜಿಲ್ಲೆಯಲ್ಲೂ ಎರಡು ಸಮಾವೇಶ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ ಅವರು ಮಾಹಿತಿ ನೀಡಿದರು.

ರೈತರ ಹೋರಾಟ: ರಾಜ್ಯದಲ್ಲೂ ಮುನ್ನೆಚ್ಚರಿಕೆ

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ದಿಕ್ಕು ತಪ್ಪಿದೆ. ಅವರ ಬೇಡಿಕೆಗಳ ಸ್ವರೂಪ ಬದಲಾಗಿದೆ. ರಾಜ್ಯದಲ್ಲೂ ಇಂತಹ ಪ್ರತಿಭಟನೆಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆಯ ಹೆಜ್ಜೆ ಇಡಲು ಬಿಜೆಪಿ ವಿಶೇಷ ಸಭೆ ನಿರ್ಧರಿಸಿತು.

ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಸುಧಾರಣಾ ಕಾಯ್ದೆಗಳು ರೈತರಿಗೆ ಪೂರಕವಾಗಿವೆ. ಅವುಗಳ ಮಹತ್ವ, ದೆಹಲಿ ರೈತ ಹೋರಾಟದ ಹಿಂದಿರುವ ರಾಜಕೀಯ ಷಡ್ಯಂತ್ರಗಳನ್ನು ರಾಜ್ಯದ ರೈತರಿಗೂ ಮನವರಿಕೆ ಮಾಡಿಸಬೇಕು. ಪಕ್ಷದ ಕಾರ್ಯಕರ್ತರು ಮನೆಮನೆಗೆ ತೆರಳಿ ಅರ್ಥ ಮಾಡಿಸಬೇಕು. ವಿರೋಧ ಪಕ್ಷಗಳು ಅಸಮಾಧಾನದ ಲಾಭ ಪಡೆಯದಂತೆ ನೋಡಿಕೊಳ್ಳುವ ಕುರಿತು ಸುದೀರ್ಘ ಚರ್ಚೆ ನಡೆಯಿತು.

‘ಯತ್ನಾಳಗೆ ಪರಿಮಿತಿ ಗೊತ್ತಿಲ್ಲವೇ?’ ಮುಖ್ಯಮಂತ್ರಿ ಬದಲಾವಣೆ ವಿಷಯ ಚರ್ಚಿಸಲು ಯತ್ನಾಳ ಯಾರು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್ ಪ್ರಶ್ನಿಸಿದರು.

ರಾಜ್ಯ ಬಿಜೆಪಿ ವಿಶೇಷ ಸಭೆಯ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ರಾಜ್ಯ ಸರ್ಕಾರ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಆದರೂ, ಮಾಧ್ಯಮಗಳಲ್ಲಿ ಇದೇ ವಿಷಯ ಚರ್ಚೆಯಾಗುತ್ತಿದೆ. ಇಂತಹ ವಿಷಯಗಳ ಕುರಿತು ಬೀದಿಗಳಲ್ಲಿ ಮಾತನಾಡಲು ಯತ್ನಾಳ ಯಾರು? ಎಲ್ಲರೂ ಅವರ ಪರಿಮಿತಿಯಲ್ಲೇ ಕೆಲಸ ಮಾಡಬೇಕು. ಸಮಸ್ಯೆ, ಅಸಮಾಧಾನವಿದ್ದರೆ ಪಕ್ಷದ ವೇದಿಕೆಗಳಲ್ಲಿ ಚರ್ಚಿಸಬೇಕು ಎಂದು ತಾಕೀತು ಮಾಡಿದರು.

ನಾಯಕತ್ವದ ಟೀಕೆ: ಬಿಎಸ್‌ವೈ ದೂರು

ಬೆಂಗಳೂರು/ಶಿವಮೊಗ್ಗ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಪದೇ ಪದೇ ತಮ್ಮ ನಾಯಕತ್ವದ ಬಗ್ಗೆ ಟೀಕೆ ಮಾಡುತ್ತಿರುವುದು ಮತ್ತು ಅದನ್ನು ಕೇಳಿಕೊಂಡು ಸುಮ್ಮನೆ ಇರುವ ರಾಜ್ಯ ಘಟಕ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಅವರ ವರ್ತನೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉಸ್ತುವಾರಿ ಅರುಣ್‌ಸಿಂಗ್ ಅವರಿಗೆ ದೂರು ನೀಡಿದ್ದಾರೆ.

‘ಯತ್ನಾಳ ನಿರಂತರವಾಗಿ ಟೀಕಾ ಪ್ರಹಾರ ನಡೆಸುತ್ತಿದ್ದರೂ, ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಧ್ಯಕ್ಷರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಬಗ್ಗೆ ನೀವೇ ಕಟೀಲ್‌ ಅವರಿಗೆ ಸೂಚನೆ ನೀಡಬೇಕು ಎಂಬುದಾಗಿ ಯಡಿಯೂರಪ್ಪ ಮನವಿ ಮಾಡಿದರು’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು