ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಎಸ್‌ ಯಡಿಯೂರಪ್ಪ ಪರ ‘ಶ್ರೀ’ ಶಕ್ತಿ: ಮಠಾಧೀಶರ ಬೆಂಬಲ

ಸಿದ್ಧಗಂಗಾ, ರಂಭಾಪುರಿ, ಸಾಣೇಹಳ್ಳಿ, ನಿಡುಮಾಮಿಡಿ ಮಠಾಧೀಶರ ಬೆಂಬಲ
Last Updated 21 ಜುಲೈ 2021, 18:07 IST
ಅಕ್ಷರ ಗಾತ್ರ

ಬೆಂಗಳೂರು: ‘ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ಮಾಡಬಾರದು, ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು’ ಎಂದು ನಾಡಿನ ಪ್ರಭಾವಿ ಮಠಾಧೀಶರು ಬಿಜೆಪಿ ವರಿಷ್ಠರನ್ನು ಒತ್ತಾಯಿಸಿದ್ದಾರೆ.

ನಾಯಕತ್ವ ಬದಲಾವಣೆಯ ವದಂತಿ ಬಿರುಸುಗೊಂಡ ಬೆನ್ನಲ್ಲೇ, ಯಡಿಯೂರಪ್ಪ ಪರ ‘ಒಗ್ಗೂಡುತ್ತಿರುವ’ ವಿವಿಧ ಸಮುದಾಯಗಳ ಮಠಾಧೀಶರು, ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರವನ್ನು ಆರಂಭಿಸಿ ದ್ದಾರೆ. ಸತತ ಮೂರನೇ ದಿನವೂ ಮಠಾ
ಧೀಶರ ಸಮೂಹ ಯಡಿಯೂರಪ್ಪ ಅವರನ್ನು ಬುಧವಾರ ಭೇಟಿ ಮಾಡಿ, ಬೆಂಬಲಿಸುವ ಮಾತಗಳನ್ನಾಡಿದೆ.

‘ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ಬದಲಿಸಿದರೆ ಬಿಜೆಪಿ ನಾಮಾವಶೇಷ ಆಗುತ್ತದೆ’ ಎಂದೂ ಹಲವು ಮಠಾಧೀಶರು ಬಿಜೆಪಿ ವರಿಷ್ಠರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಇಷ್ಟೆಲ್ಲ ಗೊಂದಲಗಳ ಮಧ್ಯೆಯೂ ನಾಯಕತ್ವ ಬದಲಾವಣೆ ಸಂಬಂಧ ಇದೇ 25 ರಂದು ವರಿಷ್ಠರಿಂದ ಸಂದೇಶ ಬರಬಹುದು ಎಂಬ ಅಂದಾಜು ಯಡಿಯೂರಪ್ಪ ಅವರದ್ದಾಗಿದೆ ಎಂಬ ಚರ್ಚೆಗಳೂ ನಡೆದಿವೆ.

ತುಮಕೂರು ಸಿದ್ದಗಂಗಾ ಮಠಾಧೀಶ ಸಿದ್ಧಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ 50 ಕ್ಕೂ ಹೆಚ್ಚು ಮಠಾಧೀಶರು ಮುಖ್ಯಮಂತ್ರಿಯವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಬೆಂಬಲ ವ್ಯಕ್ತಪಡಿಸಿದರು.

ಆ ವೇಳೆ ಮಠಾಧೀಶರನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ‘ಪ್ರಧಾನಿಯವರಿಗೆ ನನ್ನ ಬಗ್ಗೆ ವಿಶೇಷ ಕಾಳಜಿ ಇದೆ. 75 ವರ್ಷ ವಯಸ್ಸಿನ ಬಳಿಕವೂ ನನಗೆ ಮಾತ್ರ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಿದ್ದಾರೆ. ಇದೇ 25 ರಂದು ವರಿಷ್ಠರಿಂದ ಸಂದೇಶ ಬರುವ ಸಾಧ್ಯತೆ ಇದೆ’ ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿದ್ಧಲಿಂಗ ಸ್ವಾಮೀಜಿ, ‘ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಎಲ್ಲ ಮಠಾಧೀಶರ ಅಭಿಪ್ರಾಯ ಒಂದೇ ಆಗಿದೆ. ಇಂತಹ ಸಂದಿಗ್ಧ ಕಾಲದಲ್ಲಿ ಯಡಿಯೂರಪ್ಪ ಅವರನ್ನು ಕೈಬಿಡಬಾರದು. ಅವರಿಗೆ ಅವಧಿ ಪೂರ್ಣಗೊಳಿಸಲು ಅವಕಾಶ ನೀಡಬೇಕು’ ಎಂದು ಹೇಳಿದರು.

ಬಾಂಬೆ ಟೀಂಗೆ ಸಚಿವ ಸ್ಥಾನ ಸಲ್ಲದು: ವಿಶ್ವನಾಥ್

ಮೈಸೂರು: ‘ಹೊಸ ಮುಖ್ಯಮಂತ್ರಿ ನೇತೃತ್ವದ ಸರ್ಕಾರದಲ್ಲಿ ‘ಬಾಂಬೆ ಟೀಂ’ನ ಯಾರನ್ನೂ ಮಂತ್ರಿ ಮಾಡಬಾರದು. ಅಧಿಕಾರ ನೀಡದಿದ್ದರೂ 17 ಮಂದಿ ಎಲ್ಲಿಗೂ ಹೋಗುವುದಿಲ್ಲ. ಹೋದರೆ ಮತ್ತೆ ಚುನಾವಣೆ ನಡೆಯಲಿ’ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಪ್ರತಿಪಾದಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, 'ಜೆಡಿಎಸ್, ಕಾಂಗ್ರೆಸ್ ತ್ಯಜಿಸಿ ಬಂದ 17 ಮಂದಿಯಲ್ಲಿ ಇಬ್ಬರು ಮಾತ್ರ ಲಿಂಗಾಯತರು, ಉಳಿದವರು ಬೇರೆ ಜಾತಿಯವರು. ಅವತ್ತು ಯಾರೂ ಜಾತಿ ನೋಡಲಿಲ್ಲ. ಬೆಂಬಲ ನೀಡಿ ಅಧಿಕಾರ ಪಡೆದವರ ಸಾಧನೆ ಏನೂ ಇಲ್ಲ. ಅವರಿಗೆ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರೇ ಮುಖ್ಯಮಂತ್ರಿಯಾಗಿದ್ದರು’ ಎಂದರು.

‘ಯಡಿಯೂರಪ್ಪ ಪರ ನಿಂತಿರುವ ಸ್ವಾಮೀಜಿಗಳು ಬೀದಿಗೆ ಬಂದು ಭ್ರಷ್ಟಾಚಾರವನ್ನು ಬೆಂಬಲಿಸುತ್ತಿ
ದ್ದಾರೆ. ಬಸವಶ್ರೀ ಪ್ರಶಸ್ತಿ ಕೊಡುವ ಮುರುಘಾಶ್ರೀಗಳು ಬೀದಿಗೆ ಬಂದು ರಾಜಕಾರಣದ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಪ್ರಶಸ್ತಿಗೆ ಏನು ಬೆಲೆ ’ ಎಂದು ಪ್ರಶ್ನಿಸಿದರು.

‌‘ಭ್ರಷ್ಟ ಸರ್ಕಾರ ತೊಲಗಬೇಕು ಎಂದು ಸಿದ್ದರಾಮಯ್ಯ ಹೇಳುತ್ತಿದ್ದರೆ, ಅವರದ್ದೇ ಪಕ್ಷದ ಶಾಮನೂರು ಶಿವಶಂಕರಪ್ಪ, ಎಂ.ಬಿ.ಪಾಟೀಲ ಅವರು ಯಡಿಯೂರಪ್ಪ ಮುಂದುವರಿಯಬೇಕು ಎನ್ನುತ್ತಿದ್ದಾರೆ. ಶಿಕ್ಷಣದ ವ್ಯಾಪಾರಿಗಳಾದ ಅವರಿಬ್ಬರು ಬಡ ಲಿಂಗಾಯತನಿಗೆ ಏನು ಸಹಾಯ ಮಾಡಿದ್ದಾರೆ’ ಎಂದು ಟೀಕಿಸಿದರು.

ರಾಜ್ಯದ ಮೇಲೆ ಹತೋಟಿಗೆ ಕೇಂದ್ರದ ಸಂಚು

ಚಿತ್ರದುರ್ಗ: ‘ಮುಖ್ಯಮಂತ್ರಿ ಬದಲಾವಣೆ ಮಾಡುವುದರಿಂದ ರಾಜ್ಯದಲ್ಲಿ ಅವ್ಯವಸ್ಥೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಇದಕ್ಕೆ ಅವಕಾಶ ಮಾಡಿಕೊಡದೇ ಬಿ.ಎಸ್‌.ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು. ಅವಧಿ ಪೂರ್ಣಗೊಳಿಸಲು ಅವಕಾಶ ನೀಡಬೇಕು’ ಎಂದು ಸಾಣೇಹಳ್ಳಿಯ ತರಳಬಾಳು ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದ್ದಾರೆ.

‘ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಮೇಲೆ ಹತೋಟಿ ಸಾಧಿಸಲು ಸಂಚು ಮಾಡುತ್ತಿರುವಂತೆ ಕಾಣುತ್ತಿದೆ. ಇದರಿಂದ ಮುಖ್ಯಮಂತ್ರಿಯ ಕೈಗಳನ್ನು ಕಟ್ಟಿಹಾಕಿದಂತೆ ಆಗುತ್ತದೆ. ಪದೇ ಪದೇ ಕಿರುಕುಳ ನೀಡಿದರೆ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ. ಅವರಿಗೆ ಪೂರ್ಣ ಸ್ವಾತಂತ್ರ್ಯ ನೀಡುವುದು ಸೂಕ್ತ’ ಎಂದು ಸಲಹೆ ನೀಡಿದ್ದಾರೆ.

‘ಆಡಳಿತದಲ್ಲಿ ದೋಷ ಕಂಡುಬಂದರೆ ಕ್ರಮ ಕೈಗೊಳ್ಳಬೇಕೆ ಹೊರತು, ವರ್ಷಕ್ಕೊಮ್ಮೆ ಮುಖ್ಯಮಂತ್ರಿ ಬದಲಾವಣೆ ಮಾಡಬಾರದು. ಯಾವುದೇ ಪಕ್ಷದ ವ್ಯಕ್ತಿ ಆಡಳಿತ ನಡೆಸಲು ಕನಿಷ್ಠ ಐದು ವರ್ಷ ಅವಕಾಶ ಸಿಗಬೇಕು. ಸಣ್ಣ ನೆಪ ಮಾಡಿಕೊಂಡು ಮುಖ್ಯಮಂತ್ರಿ ಬದಲಾವಣೆ ಮಾಡುವುದು ಒಳ್ಳೆಯ ರಾಜಕಾರಣದ ಸಂಕೇತವಲ್ಲ. ಕೇಂದ್ರ ಸರ್ಕಾರ ಅನಗತ್ಯವಾಗಿ ಮೂಗು ತೂರಿಸುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬ್ರಾಹ್ಮಣ ಸಿ.ಎಂ: ಆರ್‌ಎಸ್‌ಎಸ್‌ ಚಿತಾವಣೆ

ಹೊಸಪೇಟೆ (ವಿಜಯನಗರ): ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು (ಆರ್‌ಎಸ್‌ಎಸ್‌) ಜಾತಿವಾದಿಗಳು. ಉದಾರ ಮನಸ್ಸಿನವರಲ್ಲ. ತಮ್ಮದೇ ಹಟ ಸಾಧಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಬದಲಿಸಲು ಹೊರಟಿದ್ದಾರೆ’ ಎಂದು ವೀರಶೈವ ಶಿವಯೋಗ ಮಂದಿರ ಸಂಸ್ಥೆ ಅಧ್ಯಕ್ಷ ಸಂಗನಬಸವ ಸ್ವಾಮೀಜಿ ದೂರಿದರು.

‘ಆರ್‌ಎಸ್‌ಎಸ್‌ನವರ ಮಾತು ಕೇಳಿಯೇ ಮಹಾರಾಷ್ಟ್ರದಲ್ಲಿ ಬ್ರಾಹ್ಮಣ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಿದ್ದರು. ಅದು ಸರಿಯಾಗಿ ನಡೆಯಲಿಲ್ಲ. ಆರ್‌ಎಸ್‌ಎಸ್‌ನವರ ಮಾತು ಬೇರೆ ಕಡೆ ನಡೆಯಬಹುದು, ಕರ್ನಾಟಕದಲ್ಲಿ ನಡೆಯುವುದಿಲ್ಲ. ಅವರ ಮಾತು ಕೇಳಿ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಬದಲಿಸಿದರೆ ಬಿಜೆಪಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

‘ವೀರಶೈವ ಲಿಂಗಾಯತರು ಆರ್‌ಎಸ್ಎಸ್‌ ಜೊತೆಗೆ ಹೋಗುತ್ತಿಲ್ಲ. ಯಡಿಯೂರಪ್ಪನವರ ಜತೆಗೆ ಹೋಗುತ್ತಿದ್ದೇವೆ. ಲಿಂಗಾಯತರು ಆತ್ಮವಂಚನೆ ಮಾಡಿಕೊಳ್ಳುತ್ತಿಲ್ಲ. ಪ್ರಲ್ಹಾದ ಜೋಶಿ ಅವರು ಮುಂದಿನ ಮುಖ್ಯಮಂತ್ರಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದಕ್ಕೆ ಆರ್‌ಎಸ್‌ಎಸ್‌ನವರ ಚಿತಾವಣೆಯೇ ಮುಖ್ಯ ಕಾರಣ’ ಎಂದು ಆರೋಪಿಸಿದರು.

‘ಯಡಿಯೂರಪ್ಪ ಸಮರ್ಥ ನಾಯಕರಿದ್ದಾರೆ. ಬೇರೊಬ್ಬರನ್ನು ಮುಖ್ಯಮಂತ್ರಿ ಮಾಡುವ ಅವಶ್ಯಕತೆ ಇಲ್ಲ. ಹೈಕಮಾಂಡ್‌ ಕೂಡಲೇ ಗೊಂದಲ ಬಗೆಹರಿಸಿ, ಯಡಿಯೂರಪ್ಪನವರು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಆಸ್ಪದ ಮಾಡಿಕೊಡಬೇಕು’ ಎಂದು ಆಗ್ರಹಪಡಿಸಿದರು.

ಶಾಸಕರ ಔತಣಕೂಟ ರದ್ದು

ಬೆಂಗಳೂರು: ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ತುಂಬಿದ್ದರಿಂದ ಇದೇ 25 ರಂದು ಶಾಸಕರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಏರ್ಪಡಿಸಿದ್ದ ಭೋಜನ ಕೂಟವನ್ನು ರದ್ದುಪಡಿಸಲಾಗಿದೆ.

ಮಂಗಳವಾರ ರಾತ್ರಿ ಎಲ್ಲ ಶಾಸಕರಿಗೂ ವಾಟ್ಸ್‌ಆ್ಯಪ್‌ ಸಂದೇಶದ ಮೂಲಕ ಆಹ್ವಾನ ಕಳುಹಿಸಲಾಗಿತ್ತು. ಆದರೆ, ಬುಧವಾರ ಬೆಳಿಗ್ಗೆ ಸ್ವತಃ ಮುಖ್ಯಮಂತ್ರಿಯವರಿಂದಲೇ ಸೂಚನೆ ಬಂದ ಕಾರಣ ಭೋಜನ ಕೂಟ ರದ್ದುಪಡಿಸಲಾಯಿತು ಎಂದು ಮೂಲಗಳು ಹೇಳಿವೆ.

ದೆಹಲಿಯಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿ ಬಂದ ಯಡಿಯೂರಪ್ಪ, ಇದೇ 26ಕ್ಕೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದರು. ಅದು ಶಾಸಕಾಂಗ ಪಕ್ಷದ ಸಭೆಯಲ್ಲ, ಶಾಸಕರಿಗೆ ಔತಣ ಕೂಟ ಅಷ್ಟೇ ಎಂದು ಮುಖ್ಯಮಂತ್ರಿ ಕಚೇರಿ, ಅದೇ ದಿನ ರಾತ್ರಿ ಸ್ಪಷ್ಟನೆ ನೀಡಿತ್ತು.

ಔತಣ ಕೂಟಕ್ಕೆ ಶಾಸಕರನ್ನು ಆಹ್ವಾನಿಸುವಂತೆ ಮುಖ್ಯ ಸಚೇತಕ ವಿ.ಸುನಿಲ್‌ ಕುಮಾರ್‌ ಅವರಿಗೆ ಯಡಿಯೂರಪ್ಪ ಮಂಗಳವಾರ ಸೂಚಿಸಿದ್ದರು. ಎರಡೆರಡು ಬಾರಿ ಖಚಿತ ಪಡಿಸಿಕೊಂಡ ಬಳಿಕವೇ ಸುನಿಲ್ ಕುಮಾರ್ ಆಮಂತ್ರಣ ಕಳುಹಿಸಿದ್ದರು. ಆದರೆ, ಬುಧವಾರ ರದ್ದುಪಡಿಸುವಂತೆ ಸೂಚನೆ ಬಂದಿತು ಎಂದು ಮೂಲಗಳು ಹೇಳಿವೆ.

***

ರಾಜಕೀಯ ಬೆಳವಣಿಗೆಗಳನ್ನು ಆಧರಿಸಿ ನನ್ನ ಪರವಾಗಿ ಹೇಳಿಕೆ, ಪ್ರತಿಭಟನೆಗಳಿಗೆ ಯಾರೂ ಮುಂದಾಗಬಾರದು. ಪಕ್ಷ ನನಗೆ ಮಾತೃ ಸಮಾನ, ಅದರ ಗೌರವಕ್ಕೆ ಚ್ಯುತಿ ತರುವ ಘಟನೆಗಳು ನನಗೆ ಅತೀವ ನೋವು ತರುತ್ತದೆ.

– ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT