ಬುಧವಾರ, ಮಾರ್ಚ್ 3, 2021
18 °C
ಜ.29ರಂದು ಚುನಾವಣೆ ನಿಗದಿ

ಉಪ ಸಭಾಪತಿ ಚುನಾವಣೆ ಬಳಿಕ ಸಭಾಪತಿ ರಾಜೀನಾಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಧಾನ ಪರಿಷತ್‌ನ ಉಪ ಸಭಾಪತಿ ಚುನಾವಣೆ ಮುಗಿದ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ನಿರ್ಧರಿಸಿದ್ದಾರೆ.

ಜನವರಿ 28ರಿಂದ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದೆ. ಆದರೆ, ಹಿಂದಿನ ಅಧಿವೇಶನದಲ್ಲೇ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಯತ್ನಿಸಿದ್ದ ಬಿಜೆಪಿ ಸದಸ್ಯರು ಮತ್ತೆ ನೋಟಿಸ್‌ ನೀಡಿದ್ದಾರೆ. ಎಸ್‌.ಎಲ್‌. ಧರ್ಮೇಗೌಡ ಅವರ ನಿಧನದಿಂದ ತೆರವಾಗಿರುವ ಉಪ ಸಭಾಪತಿ ಹುದ್ದೆಗೆ ಜ.29ರಂದು ಚುನಾವಣೆ ನಿಗದಿಯಾಗಿದೆ. ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ, ನೂತನ ಉಪ ಸಭಾಪತಿ ಆಯ್ಕೆಯಾದ ಬಳಿಕ ಪ್ರತಾಪಚಂದ್ರ ಶೆಟ್ಟಿ ಅವರು ಸಭಾಪತಿ ಹುದ್ದೆ ತೊರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಪ ಸಭಾಪತಿ ಹುದ್ದೆ ಖಾಲಿ ಇರುವುದರಿಂದ ಸಭಾಪತಿ ಕೂಡ ರಾಜೀನಾಮೆ ಸಲ್ಲಿಸಿದರೆ ಸದನದ ಮುಖ್ಯಸ್ಥರೇ ಇಲ್ಲದಂತಾಗುತ್ತದೆ. ಸಾಂವಿಧಾನಿಕ ಹುದ್ದೆಯನ್ನು ಖಾಲಿ ಬಿಡಬಾರದು ಎಂಬ ಉದ್ದೇಶದಿಂದ ಉಪ ಸಭಾಪತಿ ಆಯ್ಕೆಯ ಬಳಿಕ ರಾಜೀನಾಮೆ ನೀಡಲು ಪ್ರತಾಪಚಂದ್ರ ಶೆಟ್ಟಿ ನಿರ್ಧರಿಸಿದ್ದಾರೆ. ಸಭಾಪತಿ ರಾಜೀನಾಮೆ ಪತ್ರವನ್ನು ಉಪ ಸಭಾಪತಿಯವರಿಗೆ ಸಲ್ಲಿಸುವ ಶಿಷ್ಟಾಚಾರ ಕೂಡ ಇದಕ್ಕೆ ಕಾರಣ ಎಂಬ ಮಾಹಿತಿ ಲಭಿಸಿದೆ.

ಡಿಸೆಂಬರ್‌ನಲ್ಲಿ ನಡೆದ ಅಧಿವೇಶನದಲ್ಲೇ ಬಿಜೆಪಿ ಸದಸ್ಯರು ಜೆಡಿಎಸ್‌ ಬೆಂಬಲದಿಂದ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಯತ್ನಿಸಿದ್ದರು. ಡಿ.15ರಂದು ನಡೆದ ಅಧಿವೇಶನದಲ್ಲಿ ಸಭಾಪತಿ ಹುದ್ದೆಯಲ್ಲಿ ಉಪ ಸಭಾಪತಿಯವರನ್ನು ಕೂರಿಸಿದ್ದು ಗದ್ದಲಕ್ಕೆ ಕಾರಣವಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು