ಶನಿವಾರ, ಆಗಸ್ಟ್ 13, 2022
27 °C
ರಾಜೀನಾಮೆಗೆ ಸಿದ್ಧರಾದ ಸಭಾಪತಿ

ಪರಿಷತ್‌ ಸಂಘರ್ಷ: ರಾಜ್ಯಪಾಲರ ನಿರ್ಧಾರಕ್ಕೆ ಕಾದು ಕುಳಿತ ನಾಯಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಪರಿಷತ್‌ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧದ ಅವಿಶ್ವಾಸ ನಿರ್ಣಯದ ಬಗ್ಗೆ ರಾಜ್ಯಪಾಲರ ನಿರ್ಧಾರಕ್ಕಾಗಿ ಮೂರೂ ರಾಜಕೀಯ ಪಕ್ಷಗಳು ಕಾದು ಕುಳಿತ್ತಿದ್ದು, ಅವರ ಸಂದೇಶ ಬಂದ ಬಳಿಕ ತಮ್ಮ ದಾಳಗಳನ್ನು ಉರುಳಿಸಲು ಸಜ್ಜಾಗಿವೆ.

ಪುನಃ ಅಧಿವೇಶನ ಕರೆಯಲು ರಾಜ್ಯಪಾಲರು ಸೂಚನೆ ನೀಡಿದರೆ, ಅವರನ್ನು ಪದಚ್ಯುತಿಗೊಳಿಸಲು ಬಿಜೆಪಿ ತಯಾರಿ ನಡೆಸಿದೆ.

‘ಘಟನಾವಳಿಗಳ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದು, ಅವರಿಂದ ಇನ್ನೂ ಸಂದೇಶ ಬಂದಿಲ್ಲ. ಸದನ ಕರೆಯಲು ಸೂಚನೆ ಬಂದರೆ ಸಭಾಪತಿಯನ್ನು ಪದಚ್ಯುತಿಗೊಳಿಸಲಾಗುವುದು’ ಎಂದು ಕಂದಾಯ ಸಚಿವ ಆರ್‌.ಅಶೋಕ ‘ಪ್ರಜಾವಾಣಿ’ಗೆ ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ‘ಸಭಾಪತಿ ವಿಚಾರದಲ್ಲಿ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಕಾನೂನು ಸಚಿವರು ಮತ್ತು ಇತರ ಎಲ್ಲರ ಜೊತೆ ಚರ್ಚಿಸಿ, ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದರು.

ರಾಜೀನಾಮೆ ಇಂಗಿತ: ಈ ಮಧ್ಯೆ, ಪ್ರತಾಪಚಂದ್ರ ಶೆಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದರೂ, ಸದ್ಯಕ್ಕೆ ರಾಜೀನಾಮೆ ನೀಡದಂತೆ ಕಾಂಗ್ರೆಸ್‌ನ ಹಿರಿಯ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಬಿಜೆಪಿ ಕಾನೂನು ಹೋರಾಟಕ್ಕೆ ಮುಂದಾದರೆ, ಅದೇ ಹಾದಿ ತುಳಿಯಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ.

‘ಮ್ಯಾನ್ ಆಫ್ ದ ಮ್ಯಾಚ್!: ‘ರೈತರ ವಿರುದ್ಧದ ಕಾಯ್ದೆಯನ್ನು ನಾವು ಪರಿಷತ್‌ನಲ್ಲಿ ಬೀಳಿಸಿದೆವು. ಈ ಸೇಡಿನಿಂದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ತಂತ್ರ ರೂಪಿಸಿ ಸದನ ಹಾಳು ಮಾಡಿದರು. ನಮ್ಮ ಪಕ್ಷದ ಎಂ.ನಾರಾಯಣಸ್ವಾಮಿ ಮಂಗಳವಾರ ‘ಮ್ಯಾನ್ ಆಫ್ ದ ಮ್ಯಾಚ್’ ಆದರು’ ಎಂದು ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.

ಉಪಸಭಾಪತಿ ಎಳೆದವರ ವಿರುದ್ಧ ಜೆಡಿಎಸ್‌ ದೂರು
ವಿಧಾನಪರಿಷತ್ತಿನಲ್ಲಿ ಉಪಸಭಾಪತಿಯವರನ್ನು ಪೀಠದಿಂದ ಎಳೆದು ದೂಡಿದ ಪ್ರಕರಣವನ್ನು ಜೆಡಿಎಸ್‌ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ದೂರು ದಾಖಲಿಸಲು ನಿರ್ಧರಿಸಿದೆ.

ಉಪಸಭಾಪತಿ ಅಧ್ಯಕ್ಷತೆವಹಿಸಿದ್ದ ಬಗ್ಗೆ ಕಾಂಗ್ರೆಸ್‌ಗೆ ಆಕ್ಷೇಪ ಇದ್ದಿದ್ದರೆ, ಅದನ್ನು ಸಭೆಯಲ್ಲಿ ಪ್ರಶ್ನಿಸಬಹುದಿತ್ತು. ಸಂವಾದಕ್ಕೆ ಸಿದ್ಧರಿಲ್ಲದೇ, ನೇರ ಪೀಠಕ್ಕೆ ನುಗ್ಗಿ ಅವರನ್ನು ಎಳೆದದ್ದು ಗಂಭೀರ ಅಪರಾಧ. ಈ ಪ್ರಕರಣದಲ್ಲಿ ಎಳೆದ ಸದಸ್ಯರನ್ನು ಅನರ್ಹಗೊಳಿಸಲು ನಿಯಮಗಳ ಪ್ರಕಾರ ಅವಕಾಶವಿದೆ ಎಂದು ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು