ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯ್ದೆ ತಿದ್ದುಪಡಿಯಿಂದ ಎಪಿಎಂಸಿಗಳಿಗೆ ನಷ್ಟವಾಗಿಲ್ಲ: ಕೋಟ ಶ್ರೀನಿವಾಸ ಪೂಜಾರಿ

Last Updated 24 ಡಿಸೆಂಬರ್ 2021, 20:08 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯದಲ್ಲಿ 2020ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) (ಎಪಿಎಂಸಿ) ಕಾಯ್ದೆ ತಿದ್ದುಪಡಿ ಜಾರಿಗೊಳಿಸಿದ ಬಳಿಕ ಎಪಿಎಂಸಿಗಳ ವಹಿವಾಟು ಕುಸಿದಿಲ್ಲ ಮತ್ತು ಸೆಸ್‌ ಸಂಗ್ರಹದಲ್ಲೂ ನಷ್ಟವಾಗಿಲ್ಲ ಎಂದು ವಿಧಾನ ಪರಿಷತ್‌ನ ಸಭಾ ನಾಯಕರೂ ಆಗಿರುವ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಜೆಡಿಎಸ್‌ನ ಗೋವಿಂದರಾಜು ಪ್ರಶ್ನೆಗೆ ಸಹಕಾರ ಸಚಿವರ ಪರವಾಗಿ ಉತ್ತರಿಸಿದ ಅವರು ‘2017–18ರಲ್ಲಿ ಎಪಿಎಂಸಿಗಳಿಂದ ರಾಜ್ಯ ಸಂಚಿತ ನಿಧಿಗೆ ₹ 77 ಕೋಟಿ, 2019–20ರಲ್ಲಿ 60.81 ಕೋಟಿ ಮತ್ತು 2020ರ ಜುಲೈ ಅಂತ್ಯದವರೆಗೆ ₹ 15.71 ಕೋಟಿ ಸಂಗ್ರಹವಾಗಿತ್ತು’ ಎಂದು ಹೇಳಿದರು.

ಆವರ್ತ ನಿಧಿಗೆ 2018–19ರಲ್ಲಿ ₹ 135.61 ಕೋಟಿ, 2019–20ರಲ್ಲಿ ₹ 110 ಕೋಟಿ ಮತ್ತು 2020ರ ಜುಲೈ ಅಂತ್ಯದವರೆಗೆ ₹ 88.35 ಕೋಟಿ ಪಾವತಿಯಾಗಿತ್ತು. ಹೊಸ ಕಾಯ್ದೆ ಜಾರಿಯಾದ ಬಳಿಕ ಸಂಚಿತ ನಿಧಿ ಮತ್ತು ಆವರ್ತ ನಿಧಿಗೆ ಪಾವತಿಯಾಗುತ್ತಿರುವ ಮೊತ್ತದಲ್ಲಿ ಕುಸಿತವಾಗಿಲ್ಲ ಎಂದು ತಿಳಿಸಿದರು.

1,281 ಶುದ್ಧ ಕುಡಿಯುವ ನೀರು ಘಟಕ ಸ್ಥಗಿತ
ರಾಜ್ಯದಲ್ಲಿ 16,781 ಗ್ರಾಮೀಣ ಜನವಸತಿಗಳಲ್ಲಿ 18,440 ಶುದ್ಧ ಕುಡಿಯುವ ನೀರು ಘಟಕಗಳನ್ನು ಅಳವಡಿಸಿದ್ದು, ಅವುಗಳಲ್ಲಿ 1,281 ಸ್ಥಗಿತವಾಗಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಜೆಡಿಎಸ್‌ನ ಮರಿತಿಬ್ಬೇಗೌಡ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ‘ಸದ್ಯ 17,159 ಶುದ್ಧ ಕುಡಿಯುವ ನೀರು ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಸ್ಥಗಿತಗೊಂಡಿರುವ ಘಟಕಗಳ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಘಟಕಗಳ ನಿರ್ವಹಣೆಯಲ್ಲಿ ವಿಫಲವಾಗಿರುವ ಗುತ್ತಿಗೆದಾರರ ಗುತ್ತಿಗೆಗಳನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

ರಘು ‘ಅಪಸ್ವರ’: ಕೆರಳಿದ ಸದಸ್ಯರು
ಬೆಳಗಾವಿ: ‘ಚಿಂತಕರ ಚಾವಡಿಯಾದ ಮೇಲ್ಮನೆಗೆ ಇತ್ತೀಚೆಗೆ ಚಿಂತಕರೇ ಬರುತ್ತಿಲ್ಲ. ಹೀಗಾಗಿ, ಇಲ್ಲಿನ ಘನತೆ, ಪಾವಿತ್ರ್ಯತೆ ಕಳೆದುಹೋಗುತ್ತಿದೆ’ ಎಂದು ಕಾಂಗ್ರೆಸ್ಸಿನ ರಘು ಆಚಾರ್‌ ಅವರ ವಿದಾಯದ ಮಾತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸದನದಲ್ಲಿ ಹಾಜರಿದ್ದ ಇತರ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ವಿಧಾನಪರಿಷತ್‌ನಲ್ಲಿ ಗುರುವಾರ ನಡೆಯಿತು.

ರಘು ಆಚಾರ್‌ ಅವರ ಅವಧಿ ಜ. 5ಕ್ಕೆ ಮುಗಿಯಲಿದೆ. ಎರಡು ಅವಧಿಗೆ ಪರಿಷತ್‌ ಸದಸ್ಯರಾಗಿರುವ ಅವರು, ತಮ್ಮ ಮಾತುಗಳ ಮಧ್ಯೆ ಪರಿಷತ್‌ನ ಘನತೆ, ಗಾಂಭೀರ್ಯದ ಬಗ್ಗೆ ಬಳಸಿದ ಪದಗಳು ಇತರ ಸದಸ್ಯರನ್ನು ಕೆರಳಿಸಿತು.

‘ಪರಿಷತ್ ಇತ್ತೀಚೆಗೆ ಕೆಟ್ಟು ಹೋಗುತ್ತಿದೆ. ಹಿಂದೆ ಇಲ್ಲಿ ಮಹಾನ್ ನಾಯಕರು ಇದ್ದರು. ಈಗ ಪರಸ್ಪರ ಎರಡೂ ಕಡೆ ಕಿರುಚುತ್ತಾರೆ. ಹಿಂದೆ ಕೇಳಿಸಿಕೊಳ್ಳುವ ಕಿವಿಗಳಿದ್ದುವು. ಆದರೆ, ಈಗ ಮಾತನಾಡಿದರೂ ಕೇಳಿಸಿಕೊಳ್ಳುವವರಿಲ್ಲ. ಈ ಅವ್ಯವಸ್ಥೆ ಮೇಲ್ಮನೆಗೆ ಬರಬಾರದು. ಮೊದಲ ಅವಧಿಯಲ್ಲಿ ಕಲಾಪಕ್ಕೆ ಬರುತ್ತಿದ್ದ ನಾನು, ಇತ್ತೀಚೆಗೆ ಇಲ್ಲಿಗೆ ಬರುವುದನ್ನೇ ಬಿಟ್ಟಿದ್ದೇನೆ’ ಎಂದು ರಘು ಆಚಾರ್‌ ಬೇಸರ ವ್ಯಕ್ತಪಡಿಸಿದರು.

‘ಮೇಲ್ಮನೆ ಕೆಳಮನೆಗಿಂತ ಮೊದಲೇ ಹುಟ್ಟಿದ್ದು. ಈ ಮನೆಯಲ್ಲಿ ಬುದ್ಧಿವಂತರಿಗೆ ಮಾತ್ರ ಅವಕಾಶ ಕೊಡಬೇಕು. ವಿಧಾನಸಭಾ ಚುನಾವಣೆಯಲ್ಲಿ ಸೋತವರನ್ನು ಎಲ್ಲ ಪಕ್ಷಗಳು ಮೇಲ್ಮನೆ ಸದಸ್ಯರಾಗಿ ಮಾಡುತ್ತಿವೆ. ನಾನು ಮುಂದಿನ ಸಲ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ’ ಎಂದರು.

ರಘು ಆಚಾರ್ ಮಾತಿಗೆ ಇತರ ಸದಸ್ಯರುಗಳಿಂದ ತೀವ್ರ ವಿರೋಧ ವ್ಯಕ್ತಪಡಿಸಿದರು.

ಬಿಜೆಪಿಯ ಪುಟ್ಟಣ್ಣ, ‘ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರ ಥರ ರಘು ಇರುತ್ತಿದ್ದರೆ, ಅವರ ಮಾತುಗಳನ್ನು ಒಪ್ಪುತ್ತಿದ್ದೆ. ಈ ವ್ಯವಸ್ಥೆಯನ್ನು ಹಾಳು ಮಾಡಿರುವುದರಲ್ಲಿ ರಘು ಆಚಾರ್ ಪಾಲೂ ಇದೆ. ಈಗ ಹೋಗುವ ದಿನ ಈ ರೀತಿ ಮಾತನಾಡುವುದು ಸರಿಯಲ್ಲ’ ಎಂದರು.

ರಘು ಆಚಾರ್ ಸದನದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ ಬಿಜೆಪಿಯ ಆಯನೂರು ಮಂಜುನಾಥ್, ‘ಬಹಳ ದೊಡ್ಡ ಇತಿಹಾಸ ಇರುವ ಜಾಗದಲ್ಲಿ ನಿಂತು ರಘು ಆಚಾರ್‌ ಹಗುರವಾಗಿ ಮಾತಾಡುತ್ತಿದ್ದಾರೆ ಅನಿಸುತ್ತಿದೆ. ಆ ಮೂಲಕ, ಸದನಕ್ಕೆ, ಪರಂಪರೆಗೆ ಅಪಮಾನ ಮಾಡಿದ್ದಾರೆ. ಈ ಸದನಕ್ಕೆ ಬರುವವರು ಕಷ್ಟ ಪಟ್ಟು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಬಡವರ ಪರ, ದೀನದಲಿತರ ಪರ, ಅಂಗವಿಕಲರ ಪರ ಧ್ವನಿ ಎತ್ತಲು ಗುರಿ ಇಟ್ಟುಕೊಂಡು ಬರಬೇಕು. ಅದು ಬಿಟ್ಟು ಯಾವುದೊ ಮಾರ್ಗದಲ್ಲಿ ಬಂದು ಹೋಗುವಾಗ ಹೀಗೆ ಮಾತಾಡುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಘು ಆಚಾರ್ ಮಾತಾಡುವಾಗ ವೇಳೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ರಘು ಆಚಾರ್ ನೀನು ಒಳ್ಳೇ ರೀತಿ ಮಾತಾಡ್ತಿದ್ದೀಯ. ಆದರೆ, ಇಷ್ಟು ದಿನ ಯಾಕೆ ಮಾತನಾಡಿಲ್ಲ. ಕೊನೆಯ ದಿನ ಈ‌ ರೀತಿ ಮಾತನಾಡುತ್ತಿಯಲ್ಲ ಯಾಕೆ’ ಎಂದು ನಗುತ್ತಲೇ ಕುಟುಕಿದರು.

ಕೊನೆಗೆ, ‘ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ’ ಎಂದೂ ರಘು ಆಚಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT