ಶನಿವಾರ, ಅಕ್ಟೋಬರ್ 23, 2021
21 °C
ವಿಧಾನ ಪರಿಷತ್‌

ಕೈದಿಗಳ ಜತೆಯಲ್ಲೇ ಅಧಿಕಾರಿಗಳನ್ನೂ ಪರಿವರ್ತಿಸಿ: ಗೃಹ ಸಚಿವರಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರುವ ಕೈದಿಗಳನ್ನಷ್ಟೇ ಮನಪರಿವರ್ತನೆ, ಸುಧಾರಣೆ ಮಾಡಿದರೆ ಸಾಲದು. ಕೈದಿಗಳನ್ನೂ ಕಿತ್ತು ತಿನ್ನುವ ಬಂದಿಖಾನೆ ಅಧಿಕಾರಿಗಳನ್ನು ಮೊದಲು ಪರಿವರ್ತನೆ ಮಾಡಬೇಕು’ ಎಂದು ವಿಧಾನ ಪರಿಷತ್‌ನಲ್ಲಿ ಸೋಮವಾರ ಹಲವು ಸದಸ್ಯರು ಸಲಹೆ ನೀಡಿದರು.

‘ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ಮಸೂದೆ– 2021’ರ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮೂರೂ ಪಕ್ಷಗಳ ಸದಸ್ಯರು, ಬಂದಿಖಾನೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕೈದಿಗಳಿಗೆ ದುಡಿಮೆಯ ಅವಕಾಶ ಕಲ್ಪಿಸಲು ಮಂಡಳಿ ಸ್ಥಾಪಿಸುವ ಪ್ರಸ್ತಾವವನ್ನು ಬೆಂಬಲಿಸಿದ ಬಹುತೇಕ ಸದಸ್ಯರು, ಕಾರಾಗೃಹದ ಅಧಿಕಾರಿಗಳ ವರ್ತನೆ ಬದಲಿಸುವುದಕ್ಕೂ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

‘ನಾನು ಹೋರಾಟದಲ್ಲಿ ಭಾಗವಹಿಸಿ ನಾಲ್ಕು ಬಾರಿ ಜೈಲು ಸೇರಿದ್ದೆ. ಬೆಳಗಾವಿ ಹೊರತುಪಡಿಸಿ ರಾಜ್ಯದ ನಾಲ್ಕು ಕೇಂದ್ರ ಕಾರಾಗೃಹಗಳಲ್ಲಿ ದೀರ್ಘ ಕಾಲ ಇದ್ದೆ. ಆಗ, ಜೈಲಿನ ಒಳಗಡೆ ನಡೆಯುವ ಬೆಳವಣಿಗೆಗಳನ್ನು ಕಂಡಿದ್ದೇನೆ. ಜೈಲಿನ ಅಧಿಕಾರಿಗಳೇ ಕೈದಿಗಳನ್ನು ಎತ್ತಿಕಟ್ಟಿ ಗಲಾಟೆ ಮಾಡಿಸುತ್ತಾರೆ. ಗಾಂಜಾ, ಬೀಡಿ, ಸಿಗರೇಟು, ಮದ್ಯ ಸೇರಿದಂತೆ ಎಲ್ಲವೂ ಅಧಿಕಾರಿಗಳ ಸಹಕಾರದಲ್ಲೇ ಒಳಕ್ಕೆ ಬರುತ್ತವೆ. ಮಹಿಳೆಯರು ಮತ್ತು ಮಕ್ಕಳನ್ನು ಕಾರಾಗೃಹದ ಅಧಿಕಾರಿಗಳು ಲೈಂಗಿಕವಾಗಿ ದುರ್ಬಳಕೆ ಮಾಡುವುದೂ ನಿರಂತರವಾಗಿ ನಡೆದಿದೆ’ ಎಂದು ಬಿಜೆಪಿಯ ಆಯನೂರು ಮಂಜುನಾಥ ಆರೋಪಿಸಿದರು.

ಬಂದಿಖಾನೆಗಳು ನ್ಯಾಯಾಂಗದ ಮೇಲುಸ್ತುವಾರಿಯಲ್ಲಿರುವ ಸ್ಥಳಗಳು. ಅಲ್ಲೇ ಅಧಿಕಾರಿಗಳು ಕೈದಿಗಳ ಮೇಲೆ ದೌರ್ಜನ್ಯ ನಡೆಸುತ್ತಾರೆ. ನ್ಯಾಯಾಂಗ ಬಂಧನದಲ್ಲಿ ಇರುವವರಿಗೆ ನ್ಯಾಯ ದೊರಕಿಸುವುದು ಸರ್ಕಾರದ ಜವಾಬ್ದಾರಿ. ಕಾರಾಗೃಹ ಇಲಾಖೆಯಲ್ಲಿನ ಆಂತರಿಕ ಭ್ರಷ್ಟಾಚಾರಕ್ಕೆ ಮದ್ದು ಅರೆಯುವ ಕೆಲಸವನ್ನು ಗೃಹ ಸಚಿವರು ಮಾಡಬೇಕು. ಕೈದಿಗಳ ಮನೋವಿಕಾಸದ ಜತೆಗೆ ಅಧಿಕಾರಿಗಳ ಮನಪರಿವರ್ತನೆಯೂ ಆಗಬೇಕು ಎಂದರು.

‘ಜೈಲಿನೊಳಗೆ ಹಫ್ತಾ ವಸೂಲಿ ನಡೆಯುತ್ತಿರುತ್ತದೆ. ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ತೊಡಗಿರುವವರು ಹೊಸದಾಗಿ ಕಾರಾಗೃಹ ಸೇರಿದವರ ಮೇಲೆ ದೌರ್ಜನ್ಯ ನಡೆಸುತ್ತಾರೆ. ಈ ರೀತಿಯ ಅಕ್ರಮಗಳಿಗೆ ಕಡಿವಾಣ ಹಾಕಬೇಕು’ ಎಂದು ಕಾಂಗ್ರೆಸ್‌ನ ನಜೀರ್‌ ಅಹಮ್ಮದ್‌ ಒತ್ತಾಯಿಸಿದರು.

‘ಕಿತ್ತು ತಿನ್ನುತ್ತಾರೆ’: ಜೆಡಿಎಸ್‌ನ ಮರಿತಿಬ್ಬೇಗೌಡ ಮಾತನಾಡಿ, ‘ಬಂದಿಖಾನೆ ಇಲಾಖೆಯಲ್ಲಿರುವ ಕೆಲವು ಕೆಟ್ಟ ಅಧಿಕಾರಿಗಳು ಕೈದಿಗಳ ಸೌಲಭ್ಯವನ್ನೂ ಕಿತ್ತು ತಿನ್ನುತ್ತಾರೆ. ಕೆಲವು ಜೈಲುಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಅಧಿಕಾರಿಗಳೇ ಕೈದಿಗಳಿಗೆ ನಮಸ್ಕಾರ ಹೊಡೆಯುವುದೂ ಇದೆ’ ಎಂದರು.

‘ಕಾರಾಗೃಹಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಆದರೂ, ಶಸ್ತ್ರಾಸ್ತ್ರ, ಐಷಾರಾಮಿ ವಸ್ತುಗಳು, ಮದ್ಯ, ಮಾದಕ ವಸ್ತುಗಳು ಹೇಗೆ ಜೈಲುಗಳ ಒಳಕ್ಕೆ ಹೋಗುತ್ತವೆ. ಅಧಿಕಾರಿಗಳು ಕ್ರಿಮಿನಲ್‌ ಅಪರಾಧಿಗಳ ಜತೆ ಕೈಜೋಡಿಸಿದರೆ ಮಾತ್ರ ಇದೆಲ್ಲ ಸಾಧ್ಯವಾಗುವುದಲ್ಲವೇ’ ಎಂದು ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಪ್ರಶ್ನಿಸಿದರು.

ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ, ‘ಮಂಡ್ಯ ಕಾರಾಗೃಹದಲ್ಲಿ ಕೈದಿಗಳು ಬೆಳೆಸುವ ಸೊಪ್ಪು, ತರಕಾರಿಗೆ ಈಗಲೂ ಹೆಚ್ಚು ಬೇಡಿಕೆ ಇದೆ. ಅಂತಹ ಚಟುವಟಿಕೆಗಳಿಗೆ ಆದ್ಯತೆ ನೀಡಿ’ ಎಂದು ಸಲಹೆ ನೀಡಿದರು.

ಬಂದೀಖಾನೆ ಅಭಿವೃದ್ಧಿ ಮಂಡಳಿಗೆ ಶಾಸಕರನ್ನೂ ಸದಸ್ಯರನ್ನಾಗಿ ನೇಮಿಸುವಂತೆ ಬಿಜೆಪಿಯ ತೇಜಸ್ವಿನಿ ಗೌಡ ಒತ್ತಾಯಿಸಿದರು. ಕಾಂಗ್ರೆಸ್‌ನ ಕೆ.ಸಿ. ಕೊಂಡಯ್ಯ, ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ, ಅಪ್ಪಾಜಿಗೌಡ, ಎಚ್‌.ಎಂ. ರಮೇಶ್‌ ಗೌಡ, ಬಿಜೆಪಿಯ ತಳವಾರ ಸಾಬಣ್ಣ, ಪ್ರತಾಪಸಿಂಹ ನಾಯಕ ಸೇರಿದಂತೆ ಹಲವರು ಚರ್ಚೆಯಲ್ಲಿ ಪಾಲ್ಗೊಂಡರು.

‘ಮಸೂದೆಯಲ್ಲಿ ಹಲವು ಲೋಪಗಳಿದ್ದು, ಸರಿಪಡಿಸಬೇಕು’ ಎಂದು ಕಾಂಗ್ರೆಸ್‌ನ ‍ಪಿ.ಆರ್‌. ರಮೇಶ್‌ ಆಗ್ರಹಿಸಿದರು.

ವೇತನ ಪರಿಷ್ಕರಣೆಯ ಭರವಸೆ
ಚರ್ಚೆಗೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ನಾನು ಸ್ವತಃ ಜೈಲುವಾಸ ಅನುಭವಿಸಿದವನು. ಜೈಲುಗಳೆಂದರೆ ಭೂಮಿಯ ಮೇಲಿನ ನರಕ ಎಂಬ ಸ್ಥಿತಿ ಇದೆ. ಈ ವಾತಾವರಣ ಬದಲಿಸುವುದಕ್ಕೆ ಮಂಡಳಿ ರಚಿಸಲಾಗುತ್ತಿದೆ. ಸದಸ್ಯರು ಪ್ರಸ್ತಾಪಿಸಿರುವ ಎಲ್ಲ ಸಮಸ್ಯೆಗಳಿಗೂ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

ದುಡಿಯುವ ಕೈದಿಗಳ ವೇತನವನ್ನು 2018ರಲ್ಲಿ ಪರಿಷ್ಕರಿಸಲಾಗಿತ್ತು. ಶೀಘ್ರದಲ್ಲಿ ಪುನಃ ವೇತನ ಪರಿಷ್ಕರಣೆ ಮಾಡಲಾಗುವುದು ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.