ಶುಕ್ರವಾರ, ಮೇ 7, 2021
19 °C
ಮುಂದಿನ ಚುನಾವಣೆಯಲ್ಲಿ ಭಾಗವಹಿಸಲು ಯಾರಿಗೂ ಅವಕಾಶ ನೀಡಬಾರದು

ಚುನಾವಣೆ ಪ್ರಚಾರ ನಡೆಸಿದವರ ಮೇಲೆ ದೂರು ದಾಖಲಾಗಲಿ: ತೇಜಸ್ವಿ ಪಟೇಲ್‌

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ಮೊದಲ ಅಲೆ ಇರಲಿ, ಎರಡನೇ ಅಲೆ ಇರಲಿ ನೇರವಾಗಿ ಭಾರತದಲ್ಲಿ ಆರಂಭವಾಗಿಲ್ಲ. ವಿವಿಧ ದೇಶಗಳಿಗೆ ಬಂದೇ ಇಲ್ಲಿಗೆ ಕಾಲಿಟ್ಟಿದೆ. ಇಂಥ ಸಂದರ್ಭದಲ್ಲಿ ಎಚ್ಚೆತ್ತುಕೊಳ್ಳುವ ಬದಲು ಚುನಾವಣೆ ರ‍್ಯಾಲಿಗಳನ್ನು ನಡೆಸಿದ ಎಲ್ಲ ಜನಪ್ರತಿನಿಧಿಗಳ, ರಾಜಕಾರಣಿಗಳ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಬೇಕು. ಮುಂದಿನ ಚುನಾವಣೆಯಲ್ಲಿ ಭಾಗವಹಿಸದಂತೆ ಮಾಡಬೇಕು ಎಂಬ ಕೂಗು ಎದ್ದಿದೆ.

ಚುನಾವಣೆ ನಡೆಸುವ ಮೊದಲು ಅಲ್ಲಿನ ಕಾನೂನು ಸುವ್ಯವಸ್ಥೆ ಹೇಗಿದೆ ಎಂದು ನೋಡಬೇಕು. ಬರ, ನೆರೆಯಂಥ ಪ್ರಕೃತಿ ವಿಕೋಪಗಳು, ಸಾಂಕ್ರಾಮಿಕ ಕಾಯಿಲೆಗಳು ಇರಬಾರದು. ಜನರಿಗೆ ಅನುಕೂಲ ಇದ್ದರಷ್ಟೇ ಚುನಾವಣೆ ನಡೆಸಬೇಕು ಎಂಬುದು ನಿಯಮ. ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೇ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿಗಳಲ್ಲಿ ಚುನಾವಣೆ ನಡೆಸಲಾಗಿದೆ. ಕರ್ನಾಟಕದಲ್ಲಿ ಉಪ ಚುನಾವಣೆಗಳನ್ನು ನಡೆಸಲಾಗಿದೆ.

ಚುನಾವಣಾ ಪ್ರಚಾರಗಳಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ರಾಜ್ಯದಲ್ಲಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರ ಸಹಿತ ಎಲ್ಲರ ಮೇಲೆ ದೂರು ದಾಖಲಿಸಬೇಕು. ಜತೆಗೆ ಅವರು ಹೊಂದಿರುವ ಅಧಿಕಾರದ ಹುದ್ದೆಗೆ ರಾಜೀನಾಮೆ ನೀಡುವಂತೆ ಮಾಡಬೇಕು. ಮುಂದಿನ ಚುನಾವಣೆಯಲ್ಲಿ ಭಾಗವಹಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ರಾಜಕೀಯ ಚಿಂತಕ ತೇಜಸ್ವಿ ವಿ. ಪಟೇಲ್‌ ಕಾರಿಗನೂರು ಸಲಹೆ ನೀಡಿದ್ದಾರೆ.

ಕರ್ನಾಟಕದಲ್ಲಿ ಉಪ ಚುನಾವಣೆ ಮುಗಿಯುವವರೆಗೆ ಯಾವ ಕರ್ಫ್ಯೂ, ಲಾಕ್‌ಡೌನ್‌ ಇರಲಿಲ್ಲ. ಮತದಾನ ಮುಗಿದ ಮರುದಿನವೇ ಕರ್ಫ್ಯೂ ಜಾರಿಗೆ ತಂದಿದ್ದಾರೆ. ಅಂದರೆ ಇವರಿಗೆ ಕೊರೊನಾ ನಿಯಂತ್ರಣಕ್ಕಿಂತ ರಾಜಕೀಯ ಮುಖ್ಯವಾಗಿತ್ತು. ಈ ಚುನಾವಣೆಗಳಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಹಿತ ಹಲವರಿಗೆ ಕೊರೊನಾ ಬಂದಿದೆ. ದಾವಣಗೆರೆ ಜಿಲ್ಲೆಯಿಂದ ಹೋಗಿ ಪ್ರಚಾರ ನಡೆಸಿದವರಿಗೂ ಸೋಂಕು ತಗುಲಿದೆ. ಅವರೆಲ್ಲ ಚಿಕಿತ್ಸೆ ಪಡೆದು ನಾಲ್ಕು ದಿನಗಳಲ್ಲಿ ಡಿಸ್ಚಾರ್ಜ್‌ ಆಗಿದ್ದಾರೆ. ಆದರೆ ಅವರಿಂದ ಜನಸಾಮಾನ್ಯರಿಗೆ, ಬಡವರಿಗೆ ಹರಡಿದಾಗ ಸರಿಯಾದ ಚಿಕಿತ್ಸೆ ಕೊಡಿಸುವವರು ಯಾರು ಎಂಬುದು ಅವರ ಪ್ರಶ್ನೆ.

ರೋಗಿಗಳ ಓಡಾಟ ಕಡಿಮೆಗೊಳಿಸಿ
ಲಾಕ್‌ಡೌನ್‌ ಮಾಡಿ ಜನರ ಓಡಾಟ ನಿಯಂತ್ರಿಸಿದರೆ ಕೊರೊನಾ ನಿಯಂತ್ರಿಸಬಹುದು ಎಂದು ಸರ್ಕಾರ ಭಾವಿಸಿದಂತಿದೆ. ಆದರೆ, ರೋಗಿಗಳ ಓಡಾಟ ಕಡಿಮೆ ಮಾಡಬೇಕು. ಎರಡು ಮೂರು ಕಿಲೋಮೀಟರ್‌ ಒಳಗೆ ಚಿಕಿತ್ಸೆ ದೊರೆಯುವಂತಾಗಬೇಕು. ಅದಕ್ಕಾಗಿ ಪ್ರತಿ ಗ್ರಾಮಗಳಲ್ಲಿ ಕೋವಿಡ್‌ ಚಿಕಿತ್ಸೆ ದೊರೆಯುವಂತೆ ಮಾಡಬೇಕು. ಜನರ ಆರೋಗ್ಯವನ್ನು ರಕ್ಷಿಸುವುದು ಅಂದರೆ ಅವರ ಆರ್ಥಿಕ ಪರಿಸ್ಥಿತಿ ಕುಸಿಯುವಂತೆ ಮಾಡುವುದಲ್ಲ. ಲಾಕ್‌ಡೌನ್‌ ಬದಲು ಸೌಲಭ್ಯಗಳಿರುವ, ಸಿಬ್ಬಂದಿ ಇರುವ ಆಸ್ಪತ್ರೆಗಳನ್ನು ಹೆಚ್ಚಿಸಬೇಕು ಎಂದು ತೇಜಸ್ವಿ ಪಟೇಲ್‌ ಆಗ್ರಹಿಸಿದ್ದಾರೆ.

ಅಭಿಪ್ರಾಯಗಳು
ಜನಪ್ರತಿನಿಧಿಗಳಿಗೆ ಕಾಳಜಿಯುತ ಬುದ್ಧಿವಂತಿಕೆ ಇಲ್ಲದೇ ಇದ್ದರೆ, ಅಧಿಕಾರಿಗಳಿಗೆ ಸ್ವಂತಿಕೆ ಇಲ್ಲದೇ ಇದ್ದರೆ ಲಾಕ್‌ಡೌನ್‌ನಂಥ ಅವೈಜ್ಞಾನಿಕ ನಿಯಮ ಜಾರಿಗೆ ಬರುತ್ತದೆ.
-ತೇಜಸ್ವಿ ಪಟೇಲ್‌, ರಾಜಕೀಯ ಚಿಂತಕ

*
ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆ. ಚುನಾವಣೆ ಘೋಷಣೆ ಮಾಡಿದಾಗ ರಾಜಕೀಯ ಪಕ್ಷಗಳು ಅನಿವಾರ್ಯವಾಗಿ ಭಾಗವಹಿಸಬೇಕಾಗುತ್ತದೆ. ದೂರು ದಾಖಲು ಸರಿಯಾದ ಕ್ರಮವಲ್ಲ.
-ವೀರೇಶ್‌ ಹನಗವಾಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

*
ಆಡಳಿತ ಪಕ್ಷದ ಮೇಲೆ ಕ್ರಮ ಕೈಗೊಳ್ಳಬೇಕು. ಅವರು ಜವಾಬ್ದಾರಿಯುತವಾಗಿ ವರ್ತಿಸಿಲ್ಲ. ಪ್ರಚಾರದ ಭರಾಟೆಯಲ್ಲಿ ಅವರು ತೊಡಗಿಸಿಕೊಂಡಾಗ ವಿರೋಧ ಪಕ್ಷಗಳೂ ಹೋಗಬೇಕಾಯಿತು.
-ಎಚ್‌.ಬಿ. ಮಂಜಪ್ಪ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು