ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಗಮನಕ್ಕೂ ಮುನ್ನ 2ಎ ಮೀಸಲಾತಿಗೆ ಶಿಫಾರಸು ಮಾಡಿ: ಲಿಂಗಾಯತ ಪಂಚಮಸಾಲಿ ಮಹಾಸಭಾ

Last Updated 24 ಜುಲೈ 2021, 14:48 IST
ಅಕ್ಷರ ಗಾತ್ರ

ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಧಿವೇಶನದಲ್ಲಿಯೇ ಭರವಸೆ ನೀಡಿದ್ದರು. ಮುಖ್ಯಮಂತ್ರಿ ಸ್ಥಾನದಿಂದ ಅವರ ನಿರ್ಗಮನ ಖಚಿತವಾದರೆ, ಸಮುದಾಯಕ್ಕೆ 2ಎ ಮೀಸಲಾತಿಗೆ ಶಿಫಾರಸು ಮಾಡಿಯೇ ಹೋಗಬೇಕು ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್‌ ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಒತ್ತಾಯಿಸಿದೆ.

ಯಡಿಯೂರಪ್ಪ ಅವರು ಈ ಹಿಂದೆ ಆರು ತಿಂಗಳ ಸಮಯ ಕೇಳಿದ್ದರು. ಸೆ.15ಕ್ಕೆ ಆ ಗಡುವು ಮುಗಿಯಲಿದೆ. ಅವರು ವಿಶೇಷ ಸಚಿವ ಸಂಪುಟ ಸಭೆ ಕರೆದು, ‍ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಪ್ರವರ್ಗ 2ಎ ಹಾಗೂ ಲಿಂಗಾಯತ ಸಮುದಾಯಗಳಿಗೆ ಇತರೆ ಹಿಂದುಳಿದ ವರ್ಗಗಳ ಮೀಸಲಾತಿಗೆ ಶಿಫಾರಸು ಮಾಡಬೇಕು ಎಂದು ಟ್ರಸ್ಟ್‌ ಮತ್ತು ಮಹಾಸಭಾದ ರಾಜ್ಯ ಕಾರ್ಯಕಾರಿಣಿಯಲ್ಲಿ ಶನಿವಾರ ನಿರ್ಣಯ ಕೈಗೊಳ್ಳಲಾಗಿದೆ.

‘ಯಡಿಯೂರಪ್ಪನವರು ನುಡಿದಂತೆ ನಡೆಯಬೇಕು. ಇಲ್ಲವಾದರೆ ಬೇರೆ ಯಾರಾದರೂ ಮುಖ್ಯಮಂತ್ರಿಯಾಗಿ ಬಂದರೂ, ನಿಗದಿತ ಗಡುವಿನಲ್ಲಿ ಬೇಡಿಕೆ ಈಡೇರಿಸುವ ನಿಲುವಿಗೆ ಬದ್ಧವಾಗಿರಬೇಕು’ ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

‘ಮೀಸಲಾತಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಎರಡು ದಿನದಲ್ಲಿ ದೆಹಲಿ ಪ್ರವಾಸ ಕೈಗೊಳ್ಳಲಿದ್ದೇನೆ. ಅಲ್ಲಿ ಅಗತ್ಯಬಿದ್ದರೆ ರಾಷ್ಟ್ರೀಯ ನಾಯಕರನ್ನು ಭೇಟಿಯಾಗುತ್ತೇನೆ’ ಎಂದರು.

‘ಸೆ.15ರ ಒಳಗೆ ಬೇಡಿಕೆ ಈಡೇರದಿದ್ದರೆ ಅ.1ರಿಂದ ಧರಣಿ ಸತ್ಯಾಗ್ರಹ ಮತ್ತೆ ಮುಂದುವರಿಯಲಿದೆ. ‘‘ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್’’ ಧ್ಯೇಯವಾಕ್ಯದಡಿ ಇಷ್ಟಲಿಂಗ ಪೂಜೆ ಮೂಲಕ ಜನಜಾಗೃತಿ ಹಮ್ಮಿಕೊಳ್ಳಲಾಗುವುದು. ಇದು ಬೀದರ್‌ನಿಂದ ಮಲೆಮಹದೇಶ್ವರ ಬೆಟ್ಟದವರೆಗೆ ನಡೆಯಲಿದೆ’ ಎಂದು ತಿಳಿಸಿದರು.‌

ಸಾತ್ವಿಕ ಹಕ್ಕೊತ್ತಾಯ:‘ಯಡಿಯೂರಪ್ಪ ಅವರು ಬದಲಾದರೆ, ಮುಖ್ಯಮಂತ್ರಿ ಸ್ಥಾನಕ್ಕೆ ಪಂಚಮಸಾಲಿ ಸಮುದಾಯದವರನ್ನು ಪರಿಗಣಿಸಬೇಕು ಎಂಬುದು ಬೆದರಿಕೆ ಅಲ್ಲ. ಸಾತ್ವಿಕ ಹಕ್ಕೊತ್ತಾಯ. ರಾಜ್ಯದಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆಯೂರಲು ಪಂಚಮಸಾಲಿ ಸಮುದಾಯದ ಕೊಡುಗೆ ದೊಡ್ಡದಿದೆ’ ಎಂದು ಸ್ವಾಮೀಜಿ ಹೇಳಿದರು.

‘ಒಂದು ವೇಳೆ ಸಮುದಾಯವನ್ನು ಪರಿಗಣಿಸದಿದ್ದರೆ ನಾವು ಬೀದಿಗಿಳಿಯುವುದಿಲ್ಲ, ಹೋರಾಟ ಮಾಡುವುದಿಲ್ಲ. ಬೀದಿಯಲ್ಲಿ ಕುಳಿತು ಲಕೋಟೆ (ಕವರ್) ತೆಗೆದುಕೊಳ್ಳಲಿಕ್ಕೂ ಹೋಗುವುದಿಲ್ಲ’ ಎಂದರು.

‘ಮುಖ್ಯಮಂತ್ರಿ ನಿವಾಸದಲ್ಲಿ ಸ್ವಾಮೀಜಿಗಳಿಗೆ ನೀಡಿದ ಲಕೋಟೆಗಳಲ್ಲಿ ಶ್ರಾವಣಮಾಸದ ಪುರಾಣ ಪುಸ್ತಕ ಅಥವಾ ವಚನ ಪುಸ್ತಕ ಇರಬಹುದು’ ಎಂದೂ ಅವರು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT