ಮಂಗಳವಾರ, ಮಾರ್ಚ್ 21, 2023
30 °C
ಕಾಂಗ್ರೆಸ್‌ ಪ್ರಚಾರತಂತ್ರ: ಸಮಾಲೋಚನೆ ಇಂದು

ಕಾಂಗ್ರೆಸ್‌ ಸಂಭವನೀಯ ಅಭ್ಯರ್ಥಿಗಳ ಪಟ್ಟಿ: ಫೆ.2ರಂದು ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿ ಇನ್ನೇನು ಮೂರು ತಿಂಗಳಲ್ಲಿ ಎದುರಾಗಲಿರುವ ವಿಧಾನಸಭೆ ಚುನಾವಣೆಗೆ ಪಕ್ಷದ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು ಕೆಪಿಸಿಸಿ ಚುನಾವಣಾ ಸಮಿತಿಯ ಸಭೆ ಫೆ.2ರಂದು ನಡೆಯಲಿದೆ. ಕನಿಷ್ಠ 100 ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿ, ಹೈಕಮಾಂಡ್‌ಗೆ ರವಾನಿಸುವ ಬಗ್ಗೆ ಕಾಂಗ್ರೆಸ್‌ ನಾಯಕರು ಈ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ.

‘ಕೆಲವು ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಸ್ಥಳೀಯ ನಾಯಕರ ಮಧ್ಯೆ ಭಾರಿ ಪೈಪೋಟಿ ಏರ್ಪಟ್ಟಿದೆ. ಅಂಥ ಕ್ಷೇತ್ರಗಳನ್ನು ಹೊರತುಪಡಿಸಿ, ಇತರ ಕ್ಷೇತ್ರಗಳಿಗೆ 2–3 ಆಕಾಂಕ್ಷಿಗಳ ಮೊದಲ ಪಟ್ಟಿಯನ್ನು ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಬಹುತೇಕ ಎಲ್ಲ ಹಾಲಿ ಶಾಸಕರಿಗೆ ಟಿಕೆಟ್‌ ಸಿಗುವುದು ಖಚಿತ. ಫೆಬ್ರುವರಿ ಎರಡನೇ ವಾರದಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಹಾಲಿ ಶಾಸಕರು ಸ್ಪರ್ಧೆಯಿಂದ ಹಿಂದೆ ಸರಿಯಲು ಬಯಸಿದ ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್‌ ನೀಡಬೇಕೆಂಬ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಆಗಲಿದೆ’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನ ಎರಡನೇ ಹಂತದ ‘ಪ್ರಜಾಧ್ವನಿ’ ಯಾತ್ರೆ ಫೆ. 3ರಿಂದ ಆರಂಭವಾಗಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತ್ಯೇಕವಾಗಿ ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದಿಂದ ಈ ಯಾತ್ರೆ ಆರಂಭಿಸಲಿದ್ದಾರೆ. ಕೋಲಾರದ ಕುರುಡಮಲೆ ಗಣೇಶ ದೇವಸ್ಥಾನದಿಂದ ಶಿವಕುಮಾರ್‌ ಮತ್ತು ಬಸವ
ಕಲ್ಯಾಣದಿಂದ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷದ ನಾಯಕರು ಪ್ರವಾಸ ಆರಂಭಿಸ
ಲಿದ್ದು, ಇಬ್ಬರೂ ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ಸುತ್ತಾಡಲು ನಿರ್ಧರಿಸಿದ್ದಾರೆ. ಈ ಪ್ರವಾಸ, ಈ ಇಬ್ಬರು ನಾಯಕರಿಗೂ ಪ್ರತಿಷ್ಠೆಯ ವಿಷಯ ಆಗಲಿದೆ ಎಂಬ ಚರ್ಚೆಯೂ ಕಾಂಗ್ರೆಸ್‌ ವಲಯದಲ್ಲಿ ನಡೆದಿದೆ.

ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಕೆಪಿಸಿಸಿ ಪ್ರಚಾರ ಸಮಿತಿಯ ಸಭೆ ಶುಕ್ರವಾರ (ಜ. 27) ನಡೆಯಲಿದೆ. ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯ ಹಿಂಭಾಗದಲ್ಲಿ ನಿರ್ಮಿಸಿರುವ ನೂತನ ಕಟ್ಟಡದ ಸಭಾಂಗಣದಲ್ಲಿ ಮಧ್ಯಾಹ್ನ1 ಗಂಟೆಗೆ ಈ ಸಭೆ ನಡೆಯಲಿದೆ. ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ, ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ಪ್ರಚಾರ ಸಮಿತಿಯ ಸಹ ಅಧ್ಯಕ್ಷರು, ಮುಖ್ಯ ಸಂಯೋಜಕರು, ಸಂಯೋಜಕರು, ಜಂಟಿ ಸಂಯೋಜಕರು, ಜಿಲ್ಲಾಘಟಕಗಳ ಅಧ್ಯಕ್ಷರು ಮತ್ತು ಪ್ರಚಾರ ಸಮಿತಿಯ ಮಾಧ್ಯಮ ಮತ್ತು ಸಾಮಾಜಿಕ ಜಾಲ ವಿಭಾಗದ ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಕೆಪಿಸಿಸಿ ಪದಾಧಿಕಾರಿಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ಟಿಕೆಟ್‌ ಆಕಾಂಕ್ಷಿಗಳೂ ಭಾಗವಹಿಸಲಿದ್ದಾರೆ. ಇನ್ನಿರುವ ದಿನಗಳಲ್ಲಿ ಚುನಾವಣೆ ಎದುರಿಸಲು ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳು, ರಣತಂತ್ರದ ಕುರಿತು ಎರಡೂ ಸಭೆಗಳಲ್ಲಿ ಚರ್ಚೆ ನಡೆಯಲಿದೆ. ಬೂತ್‌ಮಟ್ಟದಲ್ಲಿ ಸಂಘಟನೆ ಚುರುಕು ಮುಟ್ಟಿಸುವ ಜೊತೆಗೆ ಸ್ಥಳೀಯ ನಾಯಕರನ್ನು ಚುನಾ ವಣೆಗೆ ಸಜ್ಜುಗೊಳಿಸುವ ಕುರಿತು ನಾಯಕರು ವಿಚಾರ ವಿನಿಮಯ ನಡೆಸಲಿದ್ದಾರೆ. ಅಲ್ಲದೆ, ಬಿಜೆಪಿ, ಜೆಡಿಎಸ್‌ನ ಕೆಲವು ಮುಖಂಡರು
ಕಾಂಗ್ರೆಸ್‌ ಸೇರಲು ಮುಂದಾಗಿದ್ದು, ಕೆಲವರನ್ನು ಫೆಬ್ರುವರಿ ಮೊದಲ ವಾರದಲ್ಲಿಯೇ ಪಕ್ಷಕ್ಕೆ ಸೇರಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಇತರ ಪಕ್ಷಗಳಿಂದ ಕಾಂಗ್ರೆಸ್‌ ಸೇರುವರಿಂದ ಪಕ್ಷಕ್ಕೆ ಆಗಬಹುದಾದ ಲಾಭದ ಬಗ್ಗೆಯೂ ಚರ್ಚೆ ನಡೆಯಲಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು