ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಯುಕ್ತ ಪೊಲೀಸ್‌ ದಾಳಿ: ಬಿಬಿಎಂಪಿ ಜಂಟಿ ಆಯುಕ್ತ, ಪಿಎ ಬಂಧನ

ಲೋಕಾಯುಕ್ತ ಪೊಲೀಸರ ಮೊದಲ ಕಾರ್ಯಾಚರಣೆಯಲ್ಲೇ ಕೆಎಎಸ್‌ ಅಧಿಕಾರಿ ಸೆರೆ
Last Updated 12 ಸೆಪ್ಟೆಂಬರ್ 2022, 17:56 IST
ಅಕ್ಷರ ಗಾತ್ರ

ಬೆಂಗಳೂರು: ಸ್ಥಿರಾಸ್ತಿಯ ಖಾತೆಗಳನ್ನು ವಿಲೀನಗೊಳಿಸಲು ₹ 4 ಲಕ್ಷ ಲಂಚ ಪಡೆಯುತ್ತಿದ್ದ ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತರಾಗಿರುವ ಕೆಎಎಸ್‌ ಅಧಿಕಾರಿ ಎಸ್‌.ಎಂ. ಶ್ರೀನಿವಾಸ್‌ ಮತ್ತು ಅವರ ಆಪ್ತ ಸಹಾಯಕ ಉಮೇಶ್‌ ಅವರನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಲೋಕಾಯುಕ್ತ ಪೊಲೀಸ್‌ ವಿಭಾಗಕ್ಕೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ–1988ರ ಅಡಿಯಲ್ಲಿ ತನಿಖೆ ನಡೆಸುವ ಅಧಿಕಾರ ಮರಳಿದ ಬಳಿಕ ದಾಖಲಿಸಿದ ಮೊದಲ ಪ್ರಕರಣ ಇದಾಗಿದೆ. ಪ್ರಥಮ ಕಾರ್ಯಾಚರಣೆಯಲ್ಲೇ ಕೆಎಎಸ್‌ ಅಧಿಕಾರಿಯನ್ನು ಬಂಧಿಸಲಾಗಿದೆ.

ನಾಗರಬಾವಿಯ (ವಾರ್ಡ್‌ ನಂ–128) ಸರ್ವೆ ನಂಬರ್‌ 78ರಲ್ಲಿ ತಾವು ಹೊಂದಿರುವ ಎರಡು ಆಸ್ತಿಗಳನ್ನು ಬಳಸಿಕೊಂಡು ವಾಣಿಜ್ಯ ಸಂಕೀರ್ಣ ನಿರ್ಮಿಸಲು, ಆ ಆಸ್ತಿಗಳ ಖಾತೆಗಳನ್ನು ವಿಲೀನಗೊಳಿಸುವಂತೆ ಕೋರಿ ನಗರದ ನಿವಾಸಿ ಮಂಜುನಾಥ್‌ ಎಂಬುವವರು ಬಿಬಿಎಂಪಿಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕ್ರಿಯೆ ಪೂರ್ಣಗೊಳಿಸಲು ₹12 ಲಕ್ಷ ಲಂಚಕ್ಕೆ ಶ್ರೀನಿವಾಸ್‌ ಮತ್ತು ಉಮೇಶ್‌ ಬೇಡಿಕೆ ಇಟ್ಟಿದ್ದರು. ಬಳಿಕ ಅರ್ಜಿದಾರರು ಚೌಕಾಸಿ ಮಾಡಿದಾಗ, ₹4 ಲಕ್ಷ ನೀಡಿದರೆ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಒಪ್ಪಿಕೊಂಡಿದ್ದರು.

ಬಿಬಿಎಂಪಿ ಜಂಟಿ ಆಯುಕ್ತರು ಮತ್ತು ಅವರ ಆಪ್ತ ಸಹಾಯಕ ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ಅರ್ಜಿದಾರರು, ಲೋಕಾಯುಕ್ತ ಪೊಲೀಸ್‌ ವಿಭಾಗದ ಬೆಂಗಳೂರು ನಗರ ಘಟಕಕ್ಕೆ ದೂರು ಸಲ್ಲಿಸಿದ್ದರು. ದೂರುದಾರರಿಂದ ಪ್ರಾಥಮಿಕ ಮಾಹಿತಿ ಪಡೆದು ಎಫ್‌ಐಆರ್‌ ದಾಖಲಿಸಿದ್ದ ಲೋಕಾಯುಕ್ತ ಪೊಲೀಸರು, ಆರೋಪಿ ಗಳ ಬಂಧನಕ್ಕೆ ಕಾರ್ಯತಂತ್ರ ರೂಪಿಸಿದ್ದರು.

‘ಆರೋಪಿಗಳ ಸೂಚನೆಯಂತೆ ಸೋಮವಾರ ಸಂಜೆ ಮಲ್ಲೇಶ್ವರದಲ್ಲಿರುವ ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿಗೆ ಹೋದ ಮಂಜುನಾಥ್‌, ₹ 4 ಲಕ್ಷ ನಗದು ನೀಡಿದರು. ಶ್ರೀನಿವಾಸ್‌ ಸೂಚನೆಯಂತೆ ಉಮೇಶ್‌ ಹಣ ಪಡೆದರು. ತಕ್ಷಣ ದಾಳಿಮಾಡಿದ ಲೋಕಾಯುಕ್ತ ಪೊಲೀಸರು, ಲಂಚದ ಹಣದ ಸಮೇತ ಇಬ್ಬರನ್ನೂ ಬಂಧಿಸಿ ದರು. ಆರೋಪಿಗಳನ್ನು ಬಂಧಿಸಿದ ಬಳಿಕ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಲೋಕಾಯುಕ್ತದ
ಪ್ರಕಟಣೆ ತಿಳಿಸಿದೆ.

ಲೋಕಾಯುಕ್ತದ ಬೆಂಗಳೂರು ನಗರ ಎಸ್‌ಪಿ ಅಶೋಕ್‌ ಕೆ.ವಿ. ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಅಂತೋನಿ ರಾಜ್‌ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.

1998ರ ಬ್ಯಾಚ್‌ನ ಕೆಎಎಸ್‌ ಅಧಿಕಾರಿ

ಎಸ್‌.ಎಂ. ಶ್ರೀನಿವಾಸ್‌ 1998ರ ಬ್ಯಾಚ್‌ನ ಕೆಎಎಸ್‌ ಅಧಿಕಾರಿ. ಮೊದಲು ಅವರು ವಾಣಿಜ್ಯ ತೆರಿಗೆ ಅಧಿಕಾರಿ ಹುದ್ದೆಯಲ್ಲಿದ್ದರು. ಪಟ್ಟಿ ಪರಿಷ್ಕರಣೆ ಬಳಿಕ ಅವರಿಗೆ ತಹಶೀಲ್ದಾರ್‌ ಹುದ್ದೆ ದೊರಕಿದ್ದು, ಬಳಿಕ ಬಡ್ತಿ ನೀಡಲಾಗಿತ್ತು.

ಹಿರಿಯ ಶ್ರೇಣಿಯ ಕೆಎಎಸ್‌ ಅಧಿಕಾರಿಯಾಗಿರುವ ಇವರು, ಇದೇ ಫೆಬ್ರುವರಿಯಿಂದ ಬಿಬಿಎಂಪಿ ಜಂಟಿ ಆಯುಕ್ತರ ಹುದ್ದೆಯಲ್ಲಿದ್ದಾರೆ.

ಕಡತಗಳ ಹಸ್ತಾಂತರ ಆರಂಭ

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದಲ್ಲಿದ್ದ (ಎಸಿಬಿ) ಅಪರಾಧ ಪ್ರಕರಣಗಳ ಕಡತಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ.

ಎಸಿಬಿಯನ್ನು ರದ್ದುಗೊಳಿಸಿ ಇದೇ ಆಗಸ್ಟ್‌ 11ರಂದು ತೀರ್ಪು ನೀಡಿದ್ದ ಹೈಕೋರ್ಟ್‌ ದ್ವಿಸದಸ್ಯ ಪೀಠ, ತನಿಖಾ ಹಂತದಲ್ಲಿರುವ ಹಾಗೂ ವಿಚಾರಣಾ ಹಂತದ ಪ್ರಕರಣಗಳ ಕಡತಗಳು, ಬಾಕಿ ಇರುವ ದೂರುಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸುವಂತೆ ಆದೇಶಿಸಿತ್ತು. ಪ್ರಕರಣಗಳ ಹಸ್ತಾಂತರಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಇದೇ 9ರಂದು ಆದೇಶ ಹೊರಡಿಸಿತ್ತು.

‘ಸೋಮವಾರ ಕೆಲವು ಪ್ರಕರಣಗಳ ಕಡತಗಳನ್ನು ಎಸಿಬಿ ಅಧಿಕಾರಿಗಳು ಹಸ್ತಾಂತರ ಮಾಡಿದ್ದಾರೆ. ಇನ್ನೂ ಸಾಕಷ್ಟು ಕಡತಗಳು ಬರಬೇಕಿದೆ. ಎಲ್ಲ ಕಡತಗಳ ಹಸ್ತಾಂತರ ಪೂರ್ಣಗೊಳ್ಳಲು ಕೆಲವು ದಿನಗಳು ಬೇಕಾಗಬಹುದು’ ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT