ಭಾನುವಾರ, ಆಗಸ್ಟ್ 14, 2022
24 °C
ಸೋಂಕಿತರಿಗೆ ನೆರವಾಗಿದ್ದ ಶರಣ್‌ ಕೋವಿಡ್‌ನಿಂದ ನಿಧನ

ಮಕ್ಕಳ ಆಸರೆ ಕಸಿದ ಕೊರೊನಾ | ಇಲ್ಲದ ಅಪ್ಪನಿಗೆ ನಿತ್ಯವೂ ಕರೆ ಮಾಡುವ ಪುಟಾಣಿ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಅಮ್ಮ ಇಹಲೋಕ ತ್ಯಜಿಸಿದಾಗ ಆಕೆ ಒಂದು ವರ್ಷದ ಕೂಸು. ಎರಡೇ ವರ್ಷಗಳ ಅಂತರದಲ್ಲಿ ಕೋವಿಡ್‌ನಿಂದ ಅಪ್ಪನನ್ನೂ ಕಳೆದುಕೊಂಡಿದ್ದಾಳೆ ಪುಟಾಣಿ ಸಮ್ಯಾ. ಅಪ್ಪನ ಸಹೋದರಿ ಅಖಿಲಾ ಅವರೇ ಈಗ ಅವಳಿಗೆ ಆಸರೆ.

ಭದ್ರಾವತಿ ತಾಲ್ಲೂಕಿನ ಹೊಳೆ ಹೊನ್ನೂರು ಸಮೀಪದ ಹೊಸಕೊಪ್ಪದ ಎಸ್‌.ವಿ.ಶರಣ್ ಬೆಂಗಳೂರಿನ ಪ್ರವಾಸೋದ್ಯಮದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮೊದಲ ಲಾಕ್‌ಡೌನ್ ಸಮಯದಲ್ಲಿ ಕೆಲಸ ಬಿಟ್ಟು ಊರಿಗೆ ಮರಳಿದ್ದರು. ಸ್ವತಃ ಸಂಸ್ಕೃತಿ ಫೌಂಡೇಷನ್ ಸ್ಥಾಪಿಸಿ, ಶಿವಮೊಗ್ಗದ ವಿವಿಧ ಸೇವಾ ಸಂಸ್ಥೆಗಳ ಜತೆ ಸೇರಿಕೊಂಡು ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಿದ್ದರು. ಎರಡನೇ ಲಾಕ್‌ಡೌನ್ ಸಮಯದಲ್ಲೂ 10 ಸಾವಿರ ಜನರಿಗೆ ಮಾಸ್ಕ್‌, ಸ್ಯಾನಿಟೈಸರ್, ದಿನಸಿ ಸಾಮಗ್ರಿ ವಿತರಿಸಿದ್ದರು. ಕೊರೊನಾ ವಾರಿಯರ್‌ ಆಗಿ ಕೆಲಸ ಮಾಡುತ್ತಿದ್ದರು. ಸೋಂಕು ತಗುಲಿದ್ದ ಹಲವರ ಜೀವ ಉಳಿಸಿದ್ದ ಅವರೇ ಸೋಂಕಿಗೆ ಒಳಗಾಗಿ ಜೀವ ಕಳೆದುಕೊಂಡಿದ್ದಾರೆ. ಒಬ್ಬಳೇ ಪುತ್ರಿ ಸಮ್ಯಾ ಅನಾಥವಾಗಿದ್ದಾಳೆ.

ತಂದೆ ಬಿ.ಎಸ್.ವಿಶ್ವನಾಥ್, ತಾಯಿ ಸುಜಾತಾ ದಂಪತಿಗೆ ಇಬ್ಬರೇ ಮಕ್ಕಳು. ಶರಣ್ ಹಾಗೂ ಅವರ ಸಹೋದರಿ ಅಖಿಲಾ. ಅಖಿಲಾ ಅವರು ಗೋಪಾಲಗೌಡ ಬಡಾವಣೆಯಲ್ಲಿ ಪತಿಯ ಜತೆ ನೆಲೆಸಿದ್ದಾರೆ. ಅಣ್ಣನ ಮಗಳಿಗೆ ಅವರೇ ಆಸರೆ ನೀಡಿದ್ದಾರೆ. ಎರಡು ವರ್ಷಗಳ ಹಿಂದೆ ತಾಯಿ ಕಳೆದುಕೊಂಡಾಗಿನಿಂದ ಅತ್ತೆಯನ್ನೇ ತಾಯಿ ಎಂದುಕೊಂಡಿದ್ದ ಮಗುವಿಗೆ ಈಗ ಅವರೇ ಎಲ್ಲವೂ ಆಗಿದ್ದಾರೆ.

‘ಅಮ್ಮ ಹೋದ ನಂತರ ಅಪ್ಪನೇ ಅವಳ ಸರ್ವಸ್ವವಾಗಿದ್ದರು. ಈಗ ಅಪ್ಪ ಇಲ್ಲ ಎನ್ನುವ ಸತ್ಯವೇ ಅವಳಿಗೆ ಗೊತ್ತಿಲ್ಲ. ದಿನಕ್ಕೆ ನಾಲ್ಕು ಬಾರಿ ಅಪ್ಪನ ನಂಬರ್‌ಗೆ ಕರೆ ಮಾಡುತ್ತಾಳೆ. ಯಾಕೊ ಅಪ್ಪ ಎತ್ತುತ್ತಿಲ್ಲ. ಬ್ಯುಸಿ ಇರಬೇಕು ಎಂದು ಅವಳೇ ಪ್ರತಿಕ್ರಿಯಿಸುತ್ತಾಳೆ. ನಿನ್ನಪ್ಪ ಬಾರದ ಲೋಕಕ್ಕೆ ಹೋಗಿದ್ದಾರೆ ಎಂದು ಅವಳಿಗೆ ಹೇಗೆ ಹೇಳಲಿ’ ಎಂದು ಕಣ್ಣೀರು ತುಂಬಿಕೊಂಡರು ಅಖಿಲಾ.

ಅಖಿಲಾ ಅವರ ಪತಿ ಖಾಸಗಿ ಸಂಸ್ಥೆಯ ಉದ್ಯೋಗಿ. ಅವರಿಗೂ ಒಬ್ಬಳೇ ಪುತ್ರಿ. ‘ಸಮ್ಯಾ ಸೇರಿ ನಮಗೆ ಈಗ ಇಬ್ಬರು ಮಕ್ಕಳು. ನಾವು ಇಬ್ಬರದೂ ಭವಿಷ್ಯ ರೂಪಿಸಲು ಶ್ರಮಿಸುತ್ತೇವೆ. ಸದಾ ಅವಳಿಗೆ ನೆರಳಾಗುತ್ತೇವೆ’ ಎನ್ನುತ್ತಾರೆ ದಂಪತಿ.

‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಗುವಿನ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಶರಣ್‌ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಬಿಪಿಎಲ್‌ ಕಾರ್ಡ್ ಪಡೆದಿರಲಿಲ್ಲ. ಕೆಲಸ ಕಳೆದುಕೊಂಡ ನಂತರ ಕಾರ್ಡ್‌ ಪಡೆಯಲು ಪ್ರಯತ್ನಿಸಿದರೂ ದೊರೆತಿರಲಿಲ್ಲ. ದುಡಿದ ಹಣವನ್ನೂ ಕೊರೊನಾ ಸಂಕಷ್ಟದಲ್ಲಿ ಇರುವ ಜನರಿಗೆ ಖರ್ಚು ಮಾಡಿದ್ದ. ಅನಾಥ ಮಗುವಿಗೆ ನೆರವಾಗಲು ಕಾರ್ಡ್‌ ಮಾನದಂಡವಾಗಬೇಕೇ’ ಎಂದು ಪ್ರಶ್ನಿಸಿದರು ಶರಣ್ ಸಹೋದರ ಸಂಬಂಧಿ ಅನೂಪ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು