ಮಂಗಳವಾರ, ಮಾರ್ಚ್ 21, 2023
29 °C
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ

ರಾಜ್ಯದಲ್ಲಿ ಧ್ವನಿವರ್ಧಕ ಬಳಕೆ: ಹೊಸ ಸುತ್ತೋಲೆ-ಸರ್ಕಾರ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸುಪ್ರೀಂಕೋರ್ಟ್‌ ಆದೇಶದಂತೆ ರಾಜ್ಯದಲ್ಲಿ ಧ್ವನಿವರ್ಧಕಗಳ ಬಳಕೆ ನಿಯಂತ್ರಿಸಲು ಹೊಸ ಸುತ್ತೋಲೆಯೊಂದನ್ನು ಹೊರಡಿಸಲು ಸರ್ಕಾರ ನಿರ್ಧರಿಸಿದೆ. ಒಂದೆರಡು ದಿನಗಳಲ್ಲಿ ಸುತ್ತೋಲೆ ಹೊರಬೀಳಲಿದ್ದು, ಆ ಬಳಿಕ ನಿಗದಿತ ಮಿತಿಗಿಂತ ಹೆಚ್ಚಿನ ಧ್ವನಿ ಹೊರಡಿಸುವ ಧ್ವನಿವರ್ಧಕಗಳನ್ನು ತೆರವುಗೊಳಿಸುವ ಸಾಧ್ಯತೆ ಇದೆ.

ಮಸೀದಿಗಳಲ್ಲಿ ಆಜಾನ್‌ ಕೂಗುವ ಧ್ವನಿವರ್ಧಕಗಳನ್ನು ತೆರವು ಮಾಡಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ ಸೇರಿದಂತೆ ಹಿಂದುತ್ವ ಪರ ಸಂಘಟನೆಗಳು ಅಭಿಯಾನ ನಡೆಸಲು ಮುಂದಾಗಿವೆ. ಆಜಾನ್‌ಗೆ ಪ್ರತಿಯಾಗಿ ದೇವಸ್ಥಾನಗಳಲ್ಲಿ ಧ್ವನಿವರ್ಧಕಗಳ ಮೂಲಕ ಹನುಮಾನ್‌ ಚಾಲೀಸಾ ಪಠಣವೂ ಕೆಲವೆಡೆ ಆರಂಭವಾಗಿದೆ.

ಮುಸ್ಲಿಂ ಶಾಸಕರಿಂದ ಮುಖ್ಯಮಂತ್ರಿ ಭೇಟಿ

ಕಾಂಗ್ರೆಸ್‌ನ ಮುಸ್ಲಿಂ ಶಾಸಕರು ಮತ್ತು ರಾಜ್ಯಸಭೆ ಸದಸ್ಯರ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸೋಮವಾರ ಭೇಟಿಮಾಡಿ, ಆಜಾನ್‌– ಹನುಮಾನ್‌ ಚಾಲೀಸಾ ಹೆಸರಿನಲ್ಲಿ ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತು.

ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್‌, ರಾಜ್ಯಸಭೆ ಸದಸ್ಯ ಡಾ. ಸೈಯದ್‌ ನಾಸೀರ್‌ ಹುಸೇನ್‌, ಶಾಸಕ ಎನ್‌.ಎ. ಹ್ಯಾರಿಸ್‌ ಮತ್ತು ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ನಜೀರ್‌ ನಿಯೋಗದಲ್ಲಿದ್ದರು. ಸುಪ್ರೀಂ ಕೋರ್ಟ್‌ ಆದೇಶ ಪಾಲನೆಗೆ ಎಲ್ಲ ಮಸೀದಿಗಳೂ ಸಿದ್ಧವಾಗಿವೆ ಎಂದು ನಿಯೋಗದ ಸದಸ್ಯರು ಮುಖ್ಯಮಂತ್ರಿಯವರಿಗೆ ತಿಳಿಸಿದ್ದಾರೆ.

ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಖಾದರ್‌, ‘ಶ್ರೀರಾಮ ಸೇನೆ ವಿರುದ್ಧ ನಾವು ಹೋರಾಟ ಮಾಡುವುದಿಲ್ಲ. ಶಾಂತಿ, ಸೌಹಾರ್ದ ಕದಡುವವರ ವಿರುದ್ಧ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ’ ಎಂದರು.

ಶಬ್ದ ಮಾಲಿನ್ಯದಲ್ಲೂ ಜಾತಿ, ಧರ್ಮ ಹುಡುಕಬಾರದು. ಎಲ್ಲ ರೀತಿಯ ಶಬ್ದ ಮಾಲಿನ್ಯ ತಡೆಗೆ ಸರ್ಕಾರ ನಿಯಮ ರೂಪಿಸಲಿ. ಸುಪ್ರೀಂ ಕೋರ್ಟ್‌ ಆದೇಶ ಮತ್ತು ಸರ್ಕಾರದ ನಿಯಮಗಳನ್ನು ಎಲ್ಲರೂ ಪಾಲಿಸಲಿ ಎಂದು ಹೇಳಿದರು.

‘ಶಾಂತಿ ಕದಡುವವರು ಭಯೋತ್ಪಾದಕರು’

‘ಧರ್ಮದ ಹೆಸರಿನಲ್ಲಿ ಜನರ ನಡುವೆ ದ್ವೇಷ ಬಿತ್ತಿ, ಶಾಂತಿ, ಸೌಹಾರ್ದ ಕದಡುವವರು ಭಯೋತ್ಪಾದಕರು. ಆಜಾನ್‌ ವಿರೋಧಿಸಿ ಅಭಿಯಾನ ನಡೆಸಿ ಶಾಂತಿ ಕದಡಲು ಯತ್ನಿಸುತ್ತಿರುವವರೂ ಅದೇ ವರ್ಗಕ್ಕೆ ಸೇರಿದವರು’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ವಾಗ್ದಾಳಿ ನಡೆಸಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಸಂಘ ಪರಿವಾರದ ಏಜೆಂಟರು ಧಾರ್ಮಿಕ ವಿಚಾರಗಳನ್ನು ಮುಂದಿಟ್ಟಿಕೊಂಡು ಶಾಂತಿ ಕದಡಲು ಹೊರಟಿದ್ದಾರೆ. ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ (ಭಯೋತ್ಪಾದನೆ ನಿಗ್ರಹ) ಕಾಯ್ದೆಯಡಿಯಲ್ಲಿ ಬಂಧಿಸಬೇಕು’ ಎಂದು ಆಗ್ರಹಿಸಿದರು.

‘ಶ್ರೀರಾಮ ಸೇನೆ ಸೇರಿದಂತೆ ಮತೀಯವಾದಿ ಹಿಂದುತ್ವದ ಸಂಘಟನೆಗಳು ಈ ಸರ್ಕಾರದ ಅವಧಿಯಲ್ಲಿ ಬಾಲ ಬಿಚ್ಚಿವೆ. ಅವರು ಹಿಂದೂ ಪರ ಅಲ್ಲವೇ ಅಲ್ಲ. ಧರ್ಮದ ಹೆಸರಿನಲ್ಲಿ ಎಲ್ಲ ವಿಷಯಗಳಿಗೂ ಮತೀಯ ಬಣ್ಣ ಹಚ್ಚಲಾಗುತ್ತಿದೆ. ಈ ಸರ್ಕಾರದಲ್ಲಿ ನಡೆಯುತ್ತಿರುವ ಶೇಕಡ 40ರಷ್ಟು ಕಮಿಷನ್‌, ಅಕ್ರಮ ನೇಮಕಾತಿಯಲ್ಲಿ ಈ ಸಂಘಟನೆಗಳಿಗೂ ಪಾಲು ಹೋಗುತ್ತಿರಬಹುದು’ ಎಂದು ಆರೋಪಿಸಿದರು.

ಸುಪ್ರೀಂ ಕೋರ್ಟ್‌ ಆದೇಶವನ್ನು ಅನುಷ್ಠಾನಗೊಳಿಸುವುದಕ್ಕೆ ಯಾರ ವಿರೋಧವೂ ಇಲ್ಲ. ಹನುಮಾನ್‌ ಚಾಲೀಸಾ ಪಠಣವನ್ನೂ ವಿರೋಧಿಸುವುದಿಲ್ಲ. ಮನೆಗಳಲ್ಲಿ ಅದನ್ನು ಪಠಿಸಲಿ. ಮಸೀದಿ ಎದುರು ಪಠಣ ಮಾಡಿ ಅಶಾಂತಿ ಸೃಷ್ಟಿಸುವವರನ್ನು ಸರ್ಕಾರ ಬಗ್ಗುಬಡಿಯಬೇಕು ಎಂದು ಒತ್ತಾಯಿಸಿದರು.

‘ಸರ್ಕಾರದ ವೈಫಲ್ಯವೇ ಕಾರಣ’

‘ಆಜಾನ್‌ ನೀಡಲು ಧ್ವನಿವರ್ಧಕ ಬಳಸುವ ವಿಷಯವನ್ನು ಕೆಲವರು ಉದ್ದೇಶಪೂರ್ವಕವಾಗಿ ಕೆದಕಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಅದನ್ನು ಜಾರಿಗೊಳಿಸಲು ಪೊಲೀಸರು ನೋಟಿಸ್‌ ನೀಡಿದ್ದಾರೆ. ಈಗ ಇದೇ ವಿಚಾರದಲ್ಲಿ ಸಂಘರ್ಷ ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ನಿಯಂತ್ರಣ ಮಾಡದಿದ್ದರೆ ರಾಜ್ಯದಲ್ಲಿ ಅಶಾಂತಿ, ಕೋಮು ಸಂಘರ್ಷ ಹೆಚ್ಚುತ್ತದೆ’ ಎಂದರು.

ಶಾಂತಿ ಕದಡದಂತೆ ಎಚ್ಚರ ವಹಿಸುವುದು ಸರ್ಕಾರದ ಜವಾಬ್ದಾರಿ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

‘ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ಕಾಂಗ್ರೆಸ್‌ನ ಕಾರ್ಯಸೂಚಿಗಳು’ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ಬಿಜೆಪಿ ಸರ್ಕಾರದಲ್ಲಿನ ಅಕ್ರಮ, ಭ್ರಷ್ಟಾಚಾರದ ಪ್ರಕರಣಗಳು ನಿತ್ಯವೂ ಹೊರಬರುತ್ತಿವೆ. ಸರ್ಕಾರಿ ಹುದ್ದೆಗೆ ಎಷ್ಟೆಷ್ಟು ದರ ನಿಗದಿಯಾಗಿದೆ ಎಂಬುದು ಭಾನುವಾರದ ಪತ್ರಿಕೆಯಲ್ಲಿ ಪ್ರಕಟವಾಗಿಲ್ಲವೆ’ ಎಂದು ‘ಪ್ರಜಾವಾಣಿ’ ವರದಿಯನ್ನು ಉಲ್ಲೇಖಿಸಿದರು.

‘ಇಷ್ಟೊಂದು ಭ್ರಷ್ಟಾಚಾರದ ಮಸಿ ಬಳಿದುಕೊಂಡಿರುವ ಬಿಜೆಪಿಯವರಿಗೆ ಜನರು ಹಾದಿ, ಬೀದಿಯಲ್ಲಿ ಉಗಿಯುತ್ತಿದ್ದಾರೆ. ಜನರಿಗೆ ಮುಖ ತೋರಿಸಲು ಅವರಿಗೆ ಆಗುತ್ತಿಲ್ಲ. ಮೊದಲು ಅವರು ತಮ್ಮ ಮುಖವನ್ನು ತೊಳೆದುಕೊಳ್ಳಲಿ. ನಂತರ ನಮ್ಮ ಬಗ್ಗೆ ಮಾತನಾಡಲಿ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು