ಭಾನುವಾರ, ಜನವರಿ 24, 2021
18 °C
ಪಕ್ಷದ ಚಟುವಟಿಕೆಗಳಲ್ಲೂ ಭಾಗಿಯಾಗದ ಸಚಿವ

ಮಾಧುಸ್ವಾಮಿ ವಿವಾದ: ಬಿಜೆಪಿಯಲ್ಲಿ ಅಸಮಾಧಾನ

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ನಡೆ ಮತ್ತು ವರ್ತನೆಗಳು ಪದೇ ಪದೇ ವಿವಾದಕ್ಕೀಡಾಗುತ್ತಿವೆ. ಈ ನಡುವೆ ಸಚಿವರ ವರ್ತನೆಗಳು ಜಿಲ್ಲಾ ಬಿಜೆಪಿ ಮುಖಂಡರಿಗೆ, ಸ್ವಕ್ಷೇತ್ರ ಚಿಕ್ಕನಾಯಕನಹಳ್ಳಿಯ ಬಿಜೆಪಿ ಮೂಲ ಕಾರ್ಯಕರ್ತರಿಗೆ ಮತ್ತು 2018ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿಗೆ ಶ್ರಮಿಸಿದವರಿಗೆ ಬಿಸಿತುಪ್ಪವಾಗಿದೆ.

ಮಾಧುಸ್ವಾಮಿ ಅವರಿಗೆ ಸಿಟ್ಟು ಹೆಚ್ಚು. ನೇರ ಮತ್ತು ನಿಷ್ಠುರ ವ್ಯಕ್ತಿತ್ವ ಎಂದು ಸಚಿವರ ಆಪ್ತರು ನುಡಿದರೆ, ಸ್ಪಂದಿಸುವುದಿಲ್ಲ ಎಂದು ಚಿಕ್ಕನಾಯಕನಹಳ್ಳಿಯ ‌ಕೆಲ ಬಿಜೆಪಿ ಮುಖಂಡರು, ಕಾರ್ಯಕರ್ತರೇ ಆಂತರಿಕವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ.

‘ಬಹಿರಂಗವಾಗಿ ಬೈಯುವ ಮಾಧುಸ್ವಾಮಿ ಅವರ ವರ್ತನೆ ಶಿಕ್ಷಕರು, ಸರ್ಕಾರಿ ನೌಕರರಿಗೂ ಇರುಸು ಮುರುಸಾಗುತ್ತಿದೆ. ಸೋತ ಸಂದರ್ಭದಲ್ಲಿ ಸುಮ್ಮನಿರುವರು. ಗೆದ್ದ ತಕ್ಷಣ ಸರ್ವಾಧಿಕಾರಿಯಂತೆ ವರ್ತಿಸುವರು. ಇಂದಿಗೂ ನಮ್ಮ ಪಕ್ಷದ ಮೂಲ ಕಾರ್ಯಕರ್ತರು ಮತ್ತು ಸಚಿವರ ನಡುವೆ ‌ಸಂಪರ್ಕ ಸಾಧ್ಯವಾಗಿಲ್ಲ’ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಹೇಳುತ್ತಾರೆ. 

‘ಜಿಲ್ಲಾ ಬಿಜೆಪಿ ಕಚೇರಿಗೆ ಇಲ್ಲಿಯವರೆಗೂ ಒಮ್ಮೆಯೂ ಭೇಟಿ ನೀಡಿಲ್ಲ. ಅವರೇ ಮುತುವರ್ಜಿ ವಹಿಸಿ ಪಕ್ಷದ ವಿವಿಧ ವರ್ಗಗಳ ಸಭೆಗಳನ್ನು ನಡೆಸಿಲ್ಲ. ಕಾರ್ಯಕರ್ತರ ಕಷ್ಟಗಳಿಗೆ ಸಚಿವರು ಸ್ಪಂದಿಸಬೇಕಿತ್ತು. ಆದರೆ ಆ ಕೆಲಸ ಮಾಡುತ್ತಿಲ್ಲ’ ಎಂದು ಜಿಲ್ಲಾ ಬಿಜೆಪಿ ಘಟಕದ ಪದಾಧಿಕಾರಿಯೊಬ್ಬರು ತಿಳಿಸಿದರು.

ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ಮಾಧುಸ್ವಾಮಿ ಅವರ ವಿರೋಧಿ ಬಣವೂ ಇದೆ. ಆ ಬಣ ಸಚಿವ ವಿ. ಸೋಮಣ್ಣ ಅವರನ್ನು ಜಿಲ್ಲಾ ಉಸ್ತುವಾರಿ ಸ್ಥಾನಕ್ಕೆ ತರಲು ಪ್ರಯತ್ನ ಸಹ ನಡೆಸಿತ್ತು. ಲಿಂಗಾಯತರು ಮತ್ತು ಲಿಂಗಾಯತೇತರರು ಎಂದು ಜಾತಿ ರಾಜಕೀಯ ಗೆರೆ ಹೊಡೆದಂತಿರುವ ಚಿಕ್ಕನಾಯಕನಹಳ್ಳಿಯಲ್ಲಿ ಲಿಂಗಾಯತ ಸಮುದಾಯವೇ ಅವರ ಬೆನ್ನಿಗಿರುವ ಪ್ರಮುಖ ಶಕ್ತಿ.

ಮಾಧುಸ್ವಾಮಿ ಅವರಿಗೆ ಮೂಲ ಬಿಜೆಪಿ ಕಾರ್ಯಕರ್ತರ ಜತೆ ಸಂಪರ್ಕ ಸಾಧ್ಯವಾಗದಿರುವ ನಡುವೆಯೇ ರಾಜಕೀಯವಾಗಿ ನೇಪಥ್ಯಕ್ಕೆ ಸರಿದಿದ್ದ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಕೆ.ಎಸ್. ಕಿರಣ್ ಕುಮಾರ್ ಅವರನ್ನು ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮಾಧುಸ್ವಾಮಿ ನೊಳಂಬ ಲಿಂಗಾಯತರಾದರೆ, ಕಿರಣ್ ಕುಮಾರ್ ಸಾದರ ಲಿಂಗಾಯತರು ಇತ್ತೀಚೆಗೆ ಪಕ್ಷದ ಪ್ರಶಿಕ್ಷಣ ವರ್ಗ ಶಿಬಿರ ಕಿರಣ್ ಕುಮಾರ್ ಅವರ ಶಾಲೆಯಲ್ಲಿಯೇ ನಡೆದಿದೆ. ಇದು ನಾನಾ ರೀತಿಯ ರಾಜಕೀಯ ಚರ್ಚೆಗಳನ್ನು ಹುಟ್ಟುಹಾಕಿದೆ.

ಮಾಧುಸ್ವಾಮಿ ಮತ್ತು ವಿವಾದಗಳು

* ಹುಳಿಯಾರಿನ ವೃತ್ತವೊಂದಕ್ಕೆ ಕನಕದಾಸರ ಹೆಸರಿಡುವ ವಿಚಾರದಲ್ಲಿ ಕಾಗಿನೆಲೆ ಕನಕಗುರು ಪೀಠದ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಜತೆ ಚಕಮಕಿ

* ಕೋಲಾರದಲ್ಲಿ ಮನವಿ ಕೊಡಲು ಬಂದ ರೈತ ಮಹಿಳೆಯನ್ನು ರ‍್ಯಾಸ್ಕಲ್ ಎಂದು ಸಂಬೋಧಿಸಿದ್ದು

* ‘ಬೆಂಗಳೂರೇನು ನಿಮ್ಮಪ್ಪನದ್ದಾ’ ಎಂದು ಸಚಿವ ಸಂಪುಟದ ಸಭೆಯಲ್ಲಿಯೇ ಸಚಿವ ಸೋಮಣ್ಣ ಜತೆ ಜಟಾಪಟಿ

* ಹೊಸಪೇಟೆ ಉಪಚುನಾವಣೆ ವೇಳೆ ‘ವೀರಶೈವ ಲಿಂಗಾಯತ ಸಮಾಜದ ಒಂದು ಮತವೂ ಬಿಜೆಪಿ ಹೊರತುಪಡಿಸಿ ಅನ್ಯ ಪಕ್ಷದ ಅಭ್ಯರ್ಥಿಗೆ ಬೀಳಬಾರದು. ಬೇರೆಯವರಿಗೆ ಮತ ಹಾಕಿದರೆ ಅದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕೆನ್ನೆಗೆ ಹೊಡೆದಂತೆ’ ಎಂದಿದ್ದು

* ತುಮಕೂರು ಜಿ.ಪಂ ಸಭೆಯಲ್ಲಿ ಅಧಿಕಾರಿಗಳನ್ನು ರ‍್ಯಾಸ್ಕಲ್, ಜಾಡಿಸಿ ಒದ್ದರೆ ಎಂದಿದ್ದು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು